ಬೆಂಗಳೂರು: ಎನ್‌ಆರ್‌ಐ ಯುವಕನನ್ನು ಮದುವೆಯಾಗಬೇಕೆಂಬ ಆಸೆಯಿಂದ ಮ್ಯಾಟ್ರಿಮೋನಿಯಲ್ ವೆಬ್ ತಾಣದಲ್ಲಿ ಹುಡುಕಾಟ ನಡೆಸಿದ್ದ 27 ವರ್ಷದ ಮಹಿಳೆಯೊಬ್ಬಳು ಬರೋಬ್ಬರಿ 7.23 ಲಕ್ಷ ರು. ಕಳೆದುಕೊಂಡಿದ್ದಾರೆ. ಮೈತ್ರಿ (ಹೆಸರು ಬದಲಿಸಿದೆ) ವರ್ತೂರು ನಿವಾಸಿಯಾಗಿದ್ದು ಇದೀಗ ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳಲು ಕೋರಿ ಪೋಲೀಸರಿಗೆ ದೂರು ನೀಡಿದ್ದಾರೆ.
ತಾನು ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ನಲ್ಲಿ ಸೂಕ್ತವಾದ ವರನ ಹುಡುಕಾಟದಲ್ಲಿದ್ದೆಆಗ ನೆದರ್ ಲ್ಯಾಂಡ್ ನಿವಾಸಿ ಎಂದು ಹೇಳಿಕೊಂಡ ಆಶಿಶ್ ಎಂ. ಎಂಬಾತನ ಪರಿಚಯವಾಗಿತ್ತು ಎಂದು ಆಕೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
“ಒಬ್ಬ ಮಹಿಳೆ ನನಗೆ ಕರೆ ಮಾಡಿ ತಾನು ಆಶಿಶ್ ತಾಯಿ ಮೋನಿಕಾ ಮನೀಶ್ ಎಂದು ಪರಿಚಯಿಸಿಕೊಂಡಿದ್ದಳು, ಆಸ್ಪತ್ರೆಯಲ್ಲಿ ದಾದಿಯಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಆಕೆ ನನ್ನ ಬಳಿ ಹೇಳೀದ್ದಳು, ಮದುವೆಯ ಬಗ್ಗೆ ಚರ್ಚಿಸಲು ಮತ್ತು ಕುಟುಂಬವನ್ನು ಭೇಟಿಯಾಗಲು ತನ್ನ ಮಗನೊಂದಿಗೆ ಭಾರತಕ್ಕೆ ಆಗಮಿಸುವುದಾಗಿ ಹೇಳಿದ್ದ ಆಕೆ ಹಾಗೆ ಭಾರತಕ್ಕೆ ಬಂದಿದ್ದಾಗ ಕಸ್ಟಮ್ಸ್ ಇಲಾಖೆಯಿಂದ ಅಧಿಕಾರಿ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬ ನನಗೆ ಕರೆ ಮಾಡಿದ್ದ
“ಆಶಿಶ್ ಹಾಗೂ ಮೋನಿಕಾ ಇಬ್ಬರನ್ನೂ ಬಂಧಿಸಲಾಗಿದೆ ಎಂದು ಆತ ನನಗೆ ತಿಳಿಸಿದ್ದ. ಅವರ ಬಿಡುಗಡೆಗಾಗಿ ಸ್ವಲ್ಪ ಹಣ ವರ್ಗಾವಣೆ ಮಾಡಬೇಕೆಂದು ಹೇಳಿದ್ದ. ನಾನು ಐದು ಬಾರಿಯ ಟ್ರಾನ್ಸಾಕ್ಷನ್ ಗಳಲ್ಲಿ ಒಟ್ಟು 7,23,600 ರೂಗಳನ್ನು ವರ್ಗಾಯಿಸಿದೆ, ”ಎಂದು ಮೈತ್ರಿ ದೂರಿನಲ್ಲಿ ವಿವರ ನೀಡಿದ್ದಾರೆ.
ಒಮ್ಮೆ ಹಣ ವರ್ಗಾವಣೆ ಆದ ನಂತರ ಆಶಿಶ್ ಹಾಗೂ ಆತನ ತಾಯಿ ನನ್ನ ಫೋನ್ ಕರೆ ಸ್ವೀಕರಿಸುವುದನ್ನು ನಿಲ್ಲಿಸಿದರು. 2019 ರ ಡಿಸೆಂಬರ್‌ನಲ್ಲಿ ನಾನು ಆಶಿಶ್ ಜತೆ ಸಂಪರ್ಕದಲ್ಲಿದ್ದೆ. ಆದರೆ ಜನವರಿಯಲ್ಲಿ ವಂಚನೆ ನಡೆದಿದೆ.
“ಆಶಿಶ್ ನನ್ನು ಸಂಪರ್ಕಿಸಲು ಮಾಡಿದ ಎಲ್ಲಾ ಪ್ರಯತ್ನಗಳು ವ್ಯರ್ಥವಾದ ನಂತರ ಮಹಿಳೆ ದೂರು ದಾಖಲಿಸಿದ್ದಾರೆ. ಆಶಿಶ್ ಮೈತ್ರಿಯನ್ನು ಮೋಸಗೊಳಿಸುವ ಉದ್ದೇಶದಿಂದ ಮಹಿಳೆಯನ್ನು ಆಕೆಗೆ ಪರಿಚಯಿಸಿದ್ದ. ಅಲ್ಲದೆ ಬಂಧನದ ಕಥೆ ಹೆಣೆದಿದ್ದ ಎಂಬುದು ಸ್ಪಷ್ಟವಾಗಿದೆ. ಇದೀಗ ಮೈತ್ರಿ ಅವರ ದೂರಿನ ಆಧಾರದ ಮೇಲೆ ನಾವು ಪ್ರಕರಣವನ್ನು ಕೈಗೆತ್ತಿಕೊಂಡಿದ್ದೇವೆ ”ಎಂದು ಪೊಲೀಸರು ತಿಳಿಸಿದ್ದಾರೆ.
Comments are closed.