ಧಾರವಾಡ: ದಿನದಿಂದ ದಿನಕ್ಕೆ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ಜುಲೈ 15 ರಿಂದ ಜಿಲ್ಲೆಯಲ್ಲಿ 10 ದಿನಗಳ ಕಾಲ ಲಾಕ್‌ಡೌನ್ ಜಾರಿ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಜುಲೈ 15 ರಿಂದ ಜುಲೈ 24ರವರೆಗೂ ಜಿಲ್ಲೆಯಲ್ಲಿ ಲಾಕ್‌ಡೌನ್ ಜಾರಿಯಲ್ಲಿರಲಿದೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲರ ಜೊತೆಯೂ ಮಾತುಕತೆ ನಡೆಸಿದ್ದೇವೆ. ಲಾಕ್‌ಡೌನ್ ಜಾರಿಗೊಳಿಸಿ ಎಂಬ ಸಲಹೆಯನ್ನು ಎಲ್ಲರೂ ನೀಡಿದ್ದಾರೆ. ಈ ಬಗ್ಗೆ ಸಿಎಂ ಅವರೊಂದಿಗೂ ಚರ್ಚೆ ನಡೆಸಿದ್ದು, ಲಾಕ್‌ಡೌನ್ ಘೋಷಣೆಗೆ ಅವರ ಅನುಮತಿ ಕೇಳಲಾಗಿತ್ತು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಲಾಕ್‌ಡೌನ್ ಘೋಷಿಸುವ ಅಧಿಕಾರವನ್ನು ನಮಗೆ ನೀಡಿದ್ದಾರೆ. ಈ ಹಿನ್ನೆಲೆ ಧಾರವಾಡ ಜಿಲ್ಲೆಯಲ್ಲಿ ಜುಲೈ 15ರ ಬೆಳಗ್ಗೆ 10 ಗಂಟೆಯಿಂದ ಜುಲೈ 24ರ ಸಂಜೆ 8 ಗಂಟೆವರೆಗೆ ಲಾಕ್‌ಡೌನ್ ಇರಲಿದೆ. ಎಲ್ಲರೂ ಕಡ್ಡಾಯವಾಗಿ ಪಾಲಿಸಿ, ಕೊರೊನಾ ನಿಯಂತ್ರಣಕ್ಕೆ ಸಹಕರಿಸಿ ಎಂದು ಹೇಳಿದರು.
ಏರುತ್ತಿರುವ ಪ್ರಕರಣ, ಸಾವು ; ಚಿಕಿತ್ಸೆ, ಸಂಪರ್ಕ ಪತ್ತೆಗೆ ನಿರ್ಲಕ್ಷ್ಯ
ಈಗಾಗಲೇ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳಲ್ಲಿ ಮಂಗಳವಾರ ರಾತ್ರಿಯಿಂದ ಲಾಕ್‌ಡೌನ್ ಘೋಷಿಸಿತ್ತು. ಈಗ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಲಾಕ್‌ಡೌನ್ ಜಾರಿ ಮಾಡಲಾಗಿದ್ದು, ಈ ಜಿಲ್ಲೆಗಳ ಪಟ್ಟಿಗೆ ಧಾರವಾಡ ಕೂಡ ಸೇರಿದೆ. ಇದುವರೆಗೂ ಜಿಲ್ಲೆಯಲ್ಲಿ 1088 ಕೊರೊನಾ ಪಾಸಿಟಿವ್ ಪ್ರಕರಣಗಳು ಕಂಡುಬಂದಿವೆ. ಅದರಲ್ಲಿ 382 ಜನ ಬಿಡುಗಡೆಯಾಗಿದ್ದರೆ, 33 ಜನ ಕೊರೊನಾಗೆ ಬಲಿಯಾಗಿದ್ದು, ಭಾನುವಾರ ಕೂಡ ಜಿಲ್ಲೆಯಲ್ಲಿ 129 ಪಾಸಿಟಿವ್ ಪ್ರಕರಣಗಳು ಕಂಡುಬಂದಿದ್ದವು.
Comments are closed.