ಬೆಳಗಾವಿ (ಜು. 16): ಕೊರೋನಾ ಭೀತಿ ಜನರಲ್ಲಿ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಅದರಲ್ಲೂ ಸರ್ಕಾರವಂತೂ ವ್ಯಾಕ್ಸಿನ್ ಇರದ ಈ ರೋಗದ ವಿರುದ್ದ ಹೋರಾಡೋದು ಹೇಗೆ? ಎಂದು ತಲೆಕಡೆಸಿಕೊಂಡು ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಲಾಕ್ ಡೌನ್ ಘೋಷಣೆ ಮಾಡಿದೆ. ಆದರೆ, ಬೆಳಗಾವಿಯಲ್ಲೊಂದು ಹಳ್ಳಿಯ ಜನ ಬೆಂಗಳೂರು, ಬಾಂಬೆ ಇರಲಿ, ಪಕ್ಕದ ಊರಿನವರು ಊರಿಗೆ ಬಂದರೂ ಊರೊಳಗೆ ಸೇರಿಸೋದಿಲ್ಲ. ಯಾರೂ ಸಹ ಸಂಬಂಧಿಕರ ಮನೆಗೂ ಹೋಗಲ್ಲ. ಇದು ಗ್ರಾಮಸ್ಥರು ತಮಗೆ ತಾವೇ ಹಾಕಿಕೊಂಡಿರುವ ಸೆಲ್ಫ್ ಲಾಕ್ ಡೌನ್. ಬರೋಬ್ಬರಿ 31 ದಿನಗಳ ಕಾಲ ಈ ಊರೇ ಬಂದ್ ಆಗಿದೆ.
ಹೌದು, ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಕಡಬಗಟ್ಟಿ ಗ್ರಾಮದ ಜನ ಕೊರೋನ ನಿಯಂತ್ರಿಸಲು ಉಪಾಯ ಮಾಡಿದ್ದು, ಊರಿಗೆ ಊರನ್ನೇ ಕ್ವಾರಂಟೈನ್ ರೀತಿಯಲ್ಲಿ ಬಂದ್ ಮಾಡಿಕೊಂಡಿದ್ದಾರೆ. ಊರಿಗೆ ಯಾರೂ ಬರುವುದು ಬೇಡ. ನಾವು ಯಾರೂ ಊರು ಬಿಟ್ಟು ಹೋಗಲ್ಲ ಅಂತ ಡಂಗೂರ ಸಾರಿ ತಮಗೆ ತಾವೇ ದಿಗ್ಬಂಧನ ಹಾಕಿಕೊಂಡಿದ್ದಾರೆ. ಈಗಾಗಲೇ ಕೊರೋನಾ ಪ್ರಕರಣಗಳು ಹೆಚ್ಚುತ್ತಲಿರುವ ಗೋಕಾಕ ತಾಲೂಕನ್ನೇ ಲಾಕ್ ಡೌನ್ ಮಾಡಲಾಗಿದೆ. ಆದರೆ, ಕಡಬಗಟ್ಟಿ ಗ್ರಾಮದ ಜನ ಒಂದು ಹೆಜ್ಜೆ ಮುಂದೆ ಹೋಗಿ ಇಡೀ ಊರನ್ನು ಕ್ವಾರಂಟೈನ್ ರೀತಿ ಮಾಡಿಕೊಂಡಿದ್ದು, ನಾವು ಹೊರಗೆ ಹೋಗಲ್ಲ ಹೊರಗಿನವರು ಒಳಗೆ ಬರೋದು ಬೇಡ ಅಂತಿದ್ದಾರೆ.
ರಸ್ತೆಗೆ ತಾವೇ ಸ್ವಯಂಪ್ರೇರಿತರಾಗಿ ಬ್ಯಾರಿಕೇಡ್ ಹಾಗೂ ಮುಳ್ಳಿನ ಕಂಟಿಯನ್ನು ಹಾಕಿ ಗ್ರಾಮದ ಮುಖ್ಯರಸ್ತೆಯನ್ನು ಬಂದ್ ಮಾಡಿದ್ದಾರೆ. ಬೆಂಗಳೂರು, ಬಾಂಬೆ, ಪುಣೆ, ಕೊಲ್ಕತ್ತಾ ಮಾತ್ರವಲ್ಲ ಪಕ್ಕದಲ್ಲೆ ಇರುವ ಗೋಕಾಕ ನಗರದ ಜನರನ್ನೂ ಸಹ ಗ್ರಾಮಕ್ಕೆ ಗ್ರಾಮಸ್ಥರು ಬರೋಕೆ ಬಿಡುತ್ತಿಲ್ಲ. ಮತ್ತು ಕಡಬಗಟ್ಟಿಯ ಜನರೂ ಸಹ ಯಾವುದೇ ಕಾರಣಕ್ಕೂ ಊರು ಬಿಟ್ಟು ಹೋಗಬಾರದು ಎಂದು ತಮ್ಮಲ್ಲೆ ಕರಾರು ಮಾಡಿಕೊಂಡಿದ್ದಾರೆ. ಕೊರೋನಾಕ್ಕೆ ಔಷಧಿ ಕಂಡು ಹಿಡಿಯುವ ಕೋಟಿ ವಿದ್ಯೆಗಿಂತಲೂ ಗ್ರಾಮದ ಜನ ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳುವುದೇ ಲೇಸು ಎಂಬ ಲೆಕ್ಕಾಚಾರದಿಂದ ಸ್ವಯಂ ಘೋಷಿತ ಲಾಕ್ ಡೌನ್ ಪಾಲನೆ ಮಾಡುತ್ತಿದ್ದಾರೆ.
ರಾಜ್ಯ ಸರ್ಕಾರದ ಮುಂದೆ ಸದ್ಯ ಈಗ ಇರುವ ಚಾಲೆಂಜ್ ಒಂದೇ. ಅದು ಹೆಚ್ಚುತ್ತಿರುವ ಕೊರೋನ ಪ್ರಕರಣಗಳನ್ನ ಕ್ಷೀಣಗೊಳಿಸೋದು. ಇದಕ್ಕಾಗಿ ರಾಜ್ಯ ಸರ್ಕಾರ ಸಾಕಷ್ಟು ಸರ್ಕಸ್ ಮಾಡ್ತಿದೆ. ಆಯ್ದ ಜಿಲ್ಲೆಗಳಲ್ಲಿ ಈಗಾಗಲೇ ಲಾಕ್ ಡೌನ್ ಘೊಷಣೆ ಮಾಡಿದೆ. ಆದರೆ ಬೆಳಗಾವಿ ಜಿಲ್ಲೆಯಲ್ಲಿ 6 ತಾಲೂಕು ಹೊರತುಪಡಿಸಿ ಉಳಿದ ತಾಲೂಕುಗಳು ಲಾಕ್ ಡೌನ್ನಿಂದ ಮುಕ್ತವಾಗಿವೆ.
ಒಟ್ಟಿನಲ್ಲಿ ಕೊರೋನಾ ಆತಂಕ ಎಲ್ಲೆಡೆ ಶುರುವಾಗಿದ್ದು, ಸರ್ಕಾರ ನೂರು ನಿಯಮಗಳನ್ನು ಮಾಡಿದರೂ ಸಹ ಜನ ಎಚ್ಚೆತ್ತುಕೊಳ್ಳದಿದ್ದರೆ ಪ್ರಯೋಜನವಾಗೋದಿಲ್ಲ. ಅದರ ದಿಸೆಯಲ್ಲೆ ಸ್ವಯಂಪ್ರೇರಿತವಾಗಿ ಕಡಬಗಟ್ಟಿ ಎಂಬ ಪುಟ್ಟ ಗ್ರಾಮದ ಜನ ಸ್ವಘೋಷಿತ ಲಾಕ್ ಡೌನ್ಗೆ ಅಣಿಯಾಗಿದ್ದು ಕೊರೋನಾ ಹೋರಾಟದಲ್ಲಿ ಎಲ್ಲರಿಗೂ ಮಾದರಿಯೇ ಸರಿ. ಇಂತಹ ಬುದ್ದಿ ಕೊರೋನಾದ ಭಯವಿಲ್ಲದೆ ಭಂಡ ಧೈರ್ಯದಿಂದ ತಿರುಗುವ ನಮ್ಮ ಜನರಿಗೂ ಬರಲಿ ಎನ್ನುವುದು ನಮ್ಮ ಆಶಯ.
Comments are closed.