ಬೆಂಗಳೂರು(ಜು.20): ಕ್ವಾರಂಟೈನ್ ನಿಯಮ ಉಲ್ಲಂಘಿಸಿ ತಲೆಮರೆಸಿಕೊಂಡಿದ್ದ ಡ್ರೋನ್ ಪ್ರತಾಪ್ ಈಗ ಬೆಂಗಳೂರು ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾನೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸಿಕ್ಕಿಬಿದ್ದ ಡ್ರೋನ್ ಪ್ರತಾಪ್ನನ್ನು ವಶಕ್ಕೆ ಪಡೆದ ಪೊಲೀಸರು ಈಗ ಬೆಂಗಳೂರು ಕರೆ ತಂದಿದ್ದಾರೆ.
ಡ್ರೋನ್ ಪ್ರತಾಪ್ ಜುಲೈ 15ರಂದು ಹೈದರಾಬಾದ್ನಿಂದ ಬೆಂಗಳೂರಿಗೆ ಬಂದಿದ್ದ. ತಲಘಟ್ಟಪುರದ ಅಪಾರ್ಟ್ಮೆಂಟ್ವೊಂದರಲ್ಲಿ ಈತ ಕ್ವಾರಂಟೈನ್ ಆಗಿದ್ದ. ಆತನ ಕೈಗೆ ಬಿಬಿಎಂಪಿಯಿಂದ ಕ್ವಾರಂಟೈನ್ ಸ್ಟಿಕರ್ ಕೂಡ ಅಂಟಿಸಲಾಗಿತ್ತು. ಆದರೆ, ಅದಾಗಿ ಎರಡೇ ದಿನಕ್ಕೆ ಈತ ಖಾಸಗಿ ವಾಹಿನಿಯೊಂದರಲ್ಲಿ ಸಂದರ್ಶನಕ್ಕೆ ಹಾಜರಾಗಿದ್ದು. ಇದು ಕ್ವಾರಂಟೈನ್ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಈತನ ವಿರುದ್ಧ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ದೂರು ದಾಖಲಿಸಿದ್ದರು. ಅದಾದ ಬಳಿಕ ಡ್ರೋನ್ ಪ್ರತಾಪ್ ನಾಪತ್ತೆಯಾಗಿದ್ದ.
ಪೊಲೀಸರು ಈತ ಮೊಬೈಲ್ ಜಾಡು ಹಿಡಿಯುತ್ತಾರೆ. ಆದರೆ, ಜ್ಞಾನಭಾರತಿ ಬಳಿ ಈತನ ಮೊಬೈಲ್ ಸ್ವಿಚ್ ಆಫ್ ಆಗಿರುವುದು ತಿಳಿದುಬರುತ್ತದೆ. ಬಳಿಕ ಮೈಸೂರಿನಲ್ಲಿ ಈತ ಇರುವುದು ಖಚಿತಪಟ್ಟಿದೆ. ಡ್ರೋನ್ ಪ್ರತಾಪ್ ಬೆನ್ನತ್ತಿದ ತಲಘಟ್ಟಪುರ ಪೊಲೀಸರು ಆತನನ್ನು ವಶಕ್ಕೆ ಪಡೆದು ಬೆಂಗಳೂರಿಗೆ ಕರೆತಂದಿದ್ದಾರೆ.
ಡ್ರೋನ್ ಪ್ರತಾಪ್ ಬಂಧನಕ್ಕೆ ಮೂರು ತಂಡಗಳನ್ನು ರಚಿಸಲಾಗಿತ್ತು. ಮೈಸೂರಿನ ಸಂಬಂಧಿಕರೊಬ್ಬರ ಮನೆಯಲ್ಲಿ ತಂಗಿದ್ದ ಪ್ರತಾಪ್ ಈಗ ಬಂಧನಕ್ಕೀಡಾಗಿದ್ದಾನೆ.ಡ್ರೋನ್ ಪ್ರತಾಪ್ ಕಳೆದ ಎರಡು ವರ್ಷಗಳಿಂದಲೂ ಕನ್ನಡಿಗರ ಪಾಲಿಗೆ ಹೀರೋ ಎನಿಸಿಕೊಂಡಿದ್ದವನು. ಮಂಡ್ಯದ ಒಂದು ಸಣ್ಣ ಗ್ರಾಮದ ಈತ ತನ್ನನ್ನು ತಾನು ಡ್ರೋನ್ ಸ್ಪೆಷಲಿಸ್ಟ್ ಎಂದು ಬಿಂಬಿಸಿಕೊಂಡಿದ್ದ. ತಾನು ತ್ಯಾಜ್ಯ ಎಲೆಕ್ಟ್ರಾನಿಕ್ ವಸ್ತುಗಳಿಂದಲೇ 600ಕ್ಕೂ ಹೆಚ್ಚು ಡ್ರೋನ್ಗಳ ತಯಾರಿಸಿದ್ದೇನೆ. ಅನೇಕ ದೇಶಗಳಲ್ಲಿ ಪ್ರದರ್ಶನ ನೀಡಿದ್ದೇನೆ. ಹಲವು ದೇಶಗಳು ತಮ್ಮಲ್ಲಿ ಕೆಲಸ ಮಾಡಲು ಆಹ್ವಾನಿಸಿವೆ ಎಂದೆಲ್ಲಾ ಈತ ಹೇಳಿಕೊಂಡಿದ್ಧಾನೆ. ಆದರೆ, ಕೆಲ ದಿನಗಳ ಹಿಂದೆ ಮಾಧ್ಯಮಗಳಲ್ಲಿ ಈತನ ಅಸಲಿಯತ್ತು ಬೆಳಕಿಗೆ ಬಂದಿತ್ತು. ಈತ ಹೇಳಿಕೊಂಡಿದ್ದೆಲ್ಲಾ ಸುಳ್ಳು. ಈತ ಡ್ರೋನ್ ವಿಜ್ಞಾನಿಯೇ ಅಲ್ಲ ಎಂಬುದನ್ನು ಬಹಿರಂಗಪಡಿಸಲಾಗಿತ್ತು. ಆದರೂ ಕೂಡ ಈತ ಖಾಸಗಿ ವಾಹಿನಿಯೊಂದರಲ್ಲಿ ಸಂದರ್ಶನ ನೀಡಿ ತಾನು ಹೊರದೇಶಕ್ಕೆ ಹೋಗಿದ್ದಾಗಿ ಪುನರುಚ್ಚರಿಸಿದ್ದಾನೆ. ಆದರೆ, ಡ್ರೋನ್ ತಂತ್ರಜ್ಞಾನ ಕುರಿತ ಮೂಲ ತಾಂತ್ರಿಕ ಪ್ರಶ್ನೆಗಳಿಗೆ ಉತ್ತರ ಕೊಡಲು ಈತ ನಿರಾಕರಿಸಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಈತ ಟ್ರೋಲ್ ಆಗುವುದು ಇನ್ನೂ ಹೆಚ್ಚಾಗಿದೆ.
Comments are closed.