ಕರ್ನಾಟಕ

ಅರಬ್​ ರಾಷ್ಟ್ರಕ್ಕೆ ಯುವತಿಯರ ಕಳ್ಳ ಸಾಗಣೆ; ಫೋಟೋ ಸ್ಟುಡಿಯೋ ನೆಪದಲ್ಲಿ ದಂಧೆ

Pinterest LinkedIn Tumblr


ಬೆಂಗಳೂರು: ರಾಜ್ಯ ರಾಜಧಾನಿಯಲ್ಲೇ ಫೋಟೋ ಸ್ಟುಡಿಯೋ ನಡೆಸಿಕೊಂಡಿದ್ದ ಖದೀಮನೊಬ್ಬ ಮಾಡಲಿಂಗ್​ ಕ್ಷೇತ್ರದಲ್ಲಿ ನೌಕರಿ ಕೊಡಿಸುವುದಾಗಿ ಆಮಿಷವೊಡ್ಡಿ ದೇಶದ ಯುವತಿಯರನ್ನು ಅರಬ್​ ದೇಶಗಳಿಗೆ ಕಳ್ಳ ಸಾಗಣೆ ಮಾಡುತ್ತಿದ್ದ ದಂಧೆಯನ್ನು ಸಿಸಿಬಿ ಪೊಲೀಸರು ಭೇದಿಸಿದ್ದಾರೆ.

ಮಾನವ ಕಳ್ಳ ಸಾಗಾಣಿಕೆ ಆರೋಪಿ ಕೊಪ್ಪಳ ಜಿಲ್ಲೆ ಅಲವಾಂಡಿ ಮೂಲದ ಬಸವರಾಜ್​ ಶಂಕರಪ್ಪ ಕಳಸದ್​ (43) ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಸಿನಿಮಾ ರಂಗದಲ್ಲಿ ಕೆಲಸ ಮಾಡುತ್ತಿದ್ದ ಸಹ ಕಲಾವಿದರನ್ನೇ ಟಾರ್ಗೆಟ್​ ಮಾಡುತ್ತಿದ್ದ ಆರೋಪಿ, ಕಡಿಮೆ ಹಣಕ್ಕೆ ದುಡಿಯುತ್ತಿರುವ ನಿಮಗೆ ವಿದೇಶದಲ್ಲಿ ಕೈತುಂಬ ವೇತನ ಕೊಡಿಸುತ್ತೇನೆ. ನನಗೆ ಅಂತಾರಾಷ್ಟ್ರೀಯ ಮಟ್ಟದ ಮಾಡಲಿಂಗ್​ ಕ್ಷೇತ್ರದಲ್ಲಿ ಬಹಳ ಮಂದಿಯ ಪರಿಚಯವಿದೆ, ವಿದೇಶದಲ್ಲಿ ಕೆಲಸ ಕೊಡಿಸುವೆ ಎಂದೆಲ್ಲ ಪುಸಲಾಯಿಸಿ ಯುವತಿಯರನ್ನು ವಿದೇಶಕ್ಕೆ ಸಾಗಾಟ ಮಾಡಿಸುತ್ತಿದ್ದ. ಅಲ್ಲಿಗೆ ಹೋದ ಮೇಲೆ ಅವರನ್ನು ಡಾನ್ಸ್​ ಬಾರ್​ಗಳಲ್ಲಿ ಡಾನ್ಸರ್ ಕೆಲಸಕ್ಕೆ ಬಲವಂತವಾಗಿ ದೂಡುತ್ತಿದ್ದ. ಒಬ್ಬ ಯುವತಿಯನ್ನು ವಿದೇಶಕ್ಕೆ ಕಳುಹಿಸಿದರೆ 20 ಸಾವಿರ ರೂ. ಕಮಿಷನ್​ ದೊರೆಯುತ್ತಿತ್ತು.

ಬಸವರಾಜ್​ ಶಂಕರಪ್ಪ ಕಳಸದ್​ನ ಮೋಸದ ಜಾಲಕ್ಕೆ ಸಿಲುಕಿದ್ದ ಕರ್ನಾಟಕ, ಆಂಧ್ರಪ್ರದೇಶ, ಕೇರಳ, ತೆಲಂಗಾಣ, ತಮಿಳುನಾಡಿನ 9 ಯುವತಿಯರನ್ನು ರಕ್ಷಣೆ ಮಾಡಿ ವಿದೇಶದಿಂದ ಭಾರತಕ್ಕೆ ಕರೆತಂದು ಅವರ ಹುಟ್ಟೂರಿಗೆ ಬಿಡಲಾಗಿದೆ ಎಂದು ಸಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ಮಾಡೆಲಿಂಗ್​ ಆಗುವ ಆಸೆಯಲ್ಲಿ ಹೋದ ಯುವತಿಯರು ಅನಿವಾರ್ಯವಾಗಿ ಫುಜೈರಾ ಮತ್ತು ಯುಎಇನಲ್ಲಿ ಡಾನ್ಸ್​ ಬಾರ್​ನಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲದೆ, ಯುವತಿಯರ ವೀಸಾವನ್ನು ಡಾನ್ಸ್​ ಬಾರ್​ ಮಾಲೀಕ ಕಸಿದುಕೊಂಡಿದ್ದ. ವಿಶ್ವದೆಲ್ಲೆಡೆ ಕೋವಿಡ್​ ಸೋಂಕು ವ್ಯಾಪಿಸಿದಾಗ ಯುವತಿಯರು ಉದ್ಯೋಗ ಕಳೆದುಕೊಂಡಿದ್ದರು. ವಾಪಸ್​ ಸ್ವದೇಶಕ್ಕೆ ಹೋಗಬೇಕೆಂದು ಚಡಪಡಿಸುತ್ತಿದ್ದರೂ ವೀಸಾ ಕೈಸೇರಲೇ ಇಲ್ಲ. ದಿಕ್ಕು ತೋಚದ ಯುವತಿಯರು, ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಇ-ಮೇಲ್​ ಮೂಲಕ ಪತ್ರ ರವಾಹಿಸಿದ್ದರು. ಎಚ್ಚೆತ್ತ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಅವರು, ಬೆಂಗಳೂರು ಮೂಲದ ವ್ಯಕ್ತಿ ಅರಬ್​ ದೇಶಗಳಿಗೆ ಮಾನವ ಕಳ್ಳ ಸಾಗಾಣೆಕೆ ದಂಧೆಯಲ್ಲಿ ತೊಡಗಿರುವ ಕುರಿತು ರಾಜ್ಯ ಪೊಲೀಸ್​ ಮಹಾನಿರ್ದೇಶಕ ಪ್ರವಿಣ್​ ಸೂದ್​ಗೆ ಪತ್ರ ಬರೆದಿದ್ದರು.

ಪ್ರಕರಣದ ತನಿಖೆಯನ್ನು ಜಂಟಿ ಪೊಲೀಸ್​ ಆಯುಕ್ತ(ಅಪರಾಧ) ಸಂದೀಪ್​ ಪಾಟೀಲ್​ಗೆ ಪ್ರವಿಣ್​ ಸೂದ್​ ವಹಿಸಿದ್ದರು. ಸಿಸಿಬಿ ವಿಶೇಷ ತಂಡ ತನಿಖೆ ಕೈಗೊಂಡು ಸಂತ್ರಸ್ತ ಯುವತಿಯರ ವಿಚಾರಣೆ ನಡೆಸಿದಾಗ ಬಸವರಾಜ್​ ಹೆಸರು ಮತ್ತು ನಂದಿನಿ ಲೇಔಟ್​ನಲ್ಲಿ ಪೋಟೋ ಸ್ಟುಡಿಯೋ ನಡೆಸುತ್ತಿದ್ದ ಬಗ್ಗೆ ಸುಳಿವು ಸಿಕ್ಕಿತ್ತು. ಸಿಸಿಬಿ ಪೊಲೀಸರು ನಂದಿನಿ ಲೇಔಟ್​ಗೆ ಹೋದಾಗ ಬಸವರಾಜ್​ ಒಂದು ವರ್ಷದ ಹಿಂದೆಯೇ ಸ್ಟುಡಿಯೋ ಖಾಲಿ ಮಾಡಿರುವುದು ಗೊತ್ತಾಯ್ತು. ಅಲ್ಲದೆ ಆರೋಪಿಯು ಈ ಮೊದಲು ಸ್ಟುಡಿಯೋ ಕಟ್ಟಡದ ಟೆರೆಸ್​ ಮೇಲೆ ಯುವತಿಯರನ್ನು ಕರೆದೊಯ್ದು ಪೋಟೋ ತೆಗೆಯುತ್ತಿದ್ದ ಎಂಬ ಮಾಹಿತಿ ಸಿಕ್ಕಿದೆ.

ಬಳಿಕ ದುಬೈಗೆ ವಿಮಾನ ಟಿಕೆಟ್​ ಮತ್ತು ವೀಸಾ ಮಾಡಿಸಿಕೊಳ್ಳುವ ವ್ಯಕ್ತಿಗಳ ಮಾಹಿತಿ ಕಲೆ ಹಾಕಿದಾಗ ಬಸವರಾಜ್​ ಸುಳಿವು ಲಭ್ಯವಾಯಿತು. ಹೊಸ ನಂಬರ್​ ಜಾಡು ಹಿಡಿದು ಹೊರಟ ಸಿಸಿಬಿ ಪೊಲೀಸರಿಗೆ ಆರೋಪಿ ಬಸವರಾಜ್​, ಬೆಂಗಳೂರು, ಚೆನ್ನೈ ಮತ್ತು ದೆಹಲಿಯಲ್ಲಿ ಮದ್ರಾಸ್​ ಕ್ಯಾಸ್ಟಿಂಗ್ಸ್​ ಇಂಟರ್​ನ್ಯಾಷನಲ್​ ಈವೆಂಟ್​ ಸಂಸ್ಥೆ ಮಾಲೀಕ ಎಂಬುದು ಗೊತ್ತಾಯ್ತು. ಅಲ್ಲದೆ ದೇಶದ ವಿವಿಧ ರಾಜ್ಯಗಳಲ್ಲಿ ಆರೋಪಿ ಬಸವರಾಜ್​ಗೆ ಸಂಪರ್ಕವಿದ್ದು, ಮಾನವ ಕಳ್ಳ ಸಾಗಾಣೆಕೆ ದಂಧೆಯಲ್ಲಿ ಮತ್ತಷ್ಟು ಮಂದಿ ಕೈ ಜೋಡಿಸಿರುವ ಬಗ್ಗೆ ಮಾಹಿತಿ ಇದೆ. ಆರೋಪಿಗಳ ಬಂಧನಕ್ಕೆ ಬಲೆಬೀಸಲಾಗಿದೆ ಎಂದು ಪೊಲೀಸ್​ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

Comments are closed.