ಬೆಂಗಳೂರು (ಜು. 21): ಕರ್ನಾಟಕದಲ್ಲಿ ಆರೇಳು ದಿನಗಳಿಂದ 4 ಸಾವಿರದ ಗಡಿ ದಾಟಿದ್ದ ಕೊರೋನಾ ಸೋಂಕಿತರ ಸಂಖ್ಯೆ ನಿನ್ನೆಯಿಂದ ಕೊಂಚ ಇಳಿಮುಖವಾಗಿದೆ. ಕರ್ನಾಟಕದಲ್ಲಿ ಇಂದು 3,649 ಹೊಸ ಕೊರೋನಾ ಸೋಂಕಿತರ ಪ್ರಕರಣಗಳು ಪತ್ತೆಯಾಗಿವೆ. ಇಂದು 61 ರೋಗಿಗಳು ಕೊರೋನಾದಿಂದ ಸಾವನ್ನಪ್ಪಿದ್ದಾರೆ.
ಕರ್ನಾಟಕದಲ್ಲಿ ಇಂದು 3,649 ಕೊರೋನಾ ಕೇಸುಗಳು ಪತ್ತೆಯಾಗುವ ಮೂಲಕ ಸೋಂಕಿತರ ಸಂಖ್ಯೆ 71,069ಕ್ಕೆ ಏರಿಕೆಯಾಗಿದೆ. ಇಂದು 1,664 ರೋಗಿಗಳು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಇದುವರೆಗೂ 1464 ರೋಗಿಗಳು ಕೊರೋನಾದಿಂದ ಸಾವನ್ನಪ್ಪಿದ್ದಾರೆ. ಇಂದು ಒಟ್ಟಾರೆ 43,904 ಜನರಿಗೆ ಕೊರೋನಾ ತಪಾಸಣೆ ನಡೆಸಲಾಗಿದೆ. ಇದುವರೆಗೂ ಕರ್ನಾಟಕದಲ್ಲಿ 10.64 ಲಕ್ಷ ಜನರಿಗೆ ಕೊರೋನಾ ಪರೀಕ್ಷೆ ನಡೆಸಲಾಗಿದೆ.
ಬೆಂಗಳೂರಿನಲ್ಲಿ ಇಂದು ರಾತ್ರಿಗೆ ಲಾಕ್ಡೌನ್ ಅಂತ್ಯಗೊಳ್ಳಲಿದೆ. ಸಿಲಿಕಾನ್ ಸಿಟಿಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚಿದ ಹಿನ್ನೆಲೆಯಲ್ಲಿ ಕಳೆದ ವಾರ ಮಂಗಳವಾರ ರಾತ್ರಿಯಿಂದ 1 ವಾರಗಳ ಕಾಲ ಲಾಕ್ಡೌನ್ ಘೋಷಿಸಲಾಗಿತ್ತು. ಈ ಲಾಕ್ಡೌನ್ ಅವಧಿಯಲ್ಲಿ ಬೆಂಗಳೂರಿನ ಕೊರೋನಾ ಕೇಸ್ಗಳ ಸಂಖ್ಯೆ ಕೊಂಚ ನಿಯಂತ್ರಣಕ್ಕೆ ಬಂದಿದೆ. ದಿನಕ್ಕೆ 2 ಸಾವಿರ ಗಡಿ ದಾಟಿದ್ದ ಬೆಂಗಳೂರಿನ ಸೋಂಕಿತರ ಪ್ರಮಾಣ ಕೊಂಚ ಇಳಿಮುಖವಾಗುತ್ತಿದೆ.
ಇಂದು ಬೆಂಗಳೂರಿನಲ್ಲಿ 1,714 ಕೊರೋನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಕೊರೋನಾ ಹಾಟ್ಸ್ಪಾಟ್ ಎಂದು ಕರೆಸಿಕೊಳ್ಳುತ್ತಿರುವ ಬೆಂಗಳೂರಿನಲ್ಲಿ ಒಟ್ಟಾರೆ 26,746 ಕೊರೋನಾ ಸೋಂಕಿತ ಪ್ರಕರಣಗಳಿವೆ. ಇಂದು ಬೆಂಗಳೂರಿನಲ್ಲಿ 520 ಕೊರೋನಾ ರೋಗಿಗಳು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇಂದು 22 ಜನರು ಬೆಂಗಳೂರಿನಲ್ಲಿ ಕೊರೋನಾದಿಂದ ಸಾವನ್ನಪ್ಪಿದ್ದಾರೆ.
ಕರ್ನಾಟಕದಲ್ಲಿ ಇನ್ನು ಯಾವುದೇ ಲಾಕ್ಡೌನ್ ಇರುವುದಿಲ್ಲ. ನಮಗೆ ನಾವೇ ನಿಯಂತ್ರಣ ಹೇರಿಕೊಂಡು ಎಚ್ಚರಿಕೆಯಿಂದ ಇರಬೇಕು. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರಿಂದ ಕೊರೋನಾ ಬಾರದಂತೆ ತಡೆಯಬಹುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ಹೇಳಿದ್ದಾರೆ.
Comments are closed.