ಬೆಳಗಾವಿ: ಜಿಲ್ಲಾಸ್ಪತ್ರೆಯಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದಕ್ಕೆ ಮತ್ತೊಂದು ಘಟನೆ ಸಾಕ್ಷಿಯಾಗಿದ್ದು, ಕರೊನಾದಿಂದ ಮೃತಪಟ್ಟ ಇಬ್ಬರ ಮೃತ ದೇಹಗಳನ್ನು ಒಂದೇ ಕುಟುಂಬಕ್ಕೆ ಹಸ್ತಾಂತರ ಮಾಡಲು ಸಿಬ್ಬಂದಿ ಮುಂದಾಗಿದ್ದರು ಎಂಬ ಆರೋಪ ಕೇಳಿಬಂದಿದೆ.
ಅಸ್ತಮಾದಿಂದ ಬಳಲುತ್ತಿದ್ದ ಬೆಳಗಾವಿಯ ಕ್ಯಾಂಪ್ ಪ್ರದೇಶದ 57 ವರ್ಷದ ಮಹಿಳೆಗೆ ಕರೊನಾ ದೃಢಪಟ್ಟಿತ್ತು. ಚಿಕಿತ್ಸೆ ಫಲಿಸದೆ ಮಹಿಳೆ ಕೋವಿಡ್ ವಾರ್ಡ್‌ನಲ್ಲಿ ಜು.18ರಂದು ಮೃತಪಟ್ಟಿದ್ದರು.
ಆಸ್ಪತ್ರೆ ಸಿಬ್ಬಂದಿ ಸಂಬಂಧಿಕರಿಗೆ ಶವ ಹಸ್ತಾಂತರಿಸಿದ್ದರು. ಅಂದೇ ಅಂತ್ಯಕ್ರಿಯೆ ಕೂಡ ನೆರವೇರಿತ್ತು. ಆದರೆ, ಮೃತ ಮಹಿಳೆಯ ಸಂಬಂಧಿಗೆ ಸೋಮವಾರ ಮತ್ತೆ ಕರೆ ಮಾಡಿರುವ ಬಿಮ್ಸ್ ಸಿಬ್ಬಂದಿ, ‘ನಿಮ್ಮ ಸಂಬಂಧಿಯ ಮೃತದೇಹ ಆಸ್ಪತ್ರೆಯ ಶವಾಗಾರದಲ್ಲಿದ್ದು, ಶವ ತೆಗೆದುಕೊಂಡು ಹೋಗಿ ಎಂದಿದ್ದಾರೆ. ಬಿಮ್ಸ್ ಸಿಬ್ಬಂದಿ ಕರೆಯಿಂದ ಕುಟುಂಬಸ್ಥರಿಗೆ ದಿಕ್ಕು ತೋಚದಂತಾಗಿದೆ. ಎರಡು ದಿನಗಳ ಹಿಂದೆ ತಾವು ಅಂತ್ಯಕ್ರಿಯೆ ನೆರವೇರಿಸಿದ ಶವ ಯಾರದ್ದಿರಬಹುದು ಎಂದು ಕುಟುಂಬಸ್ಥರು ಯೋಚಿಸುವಂತಾಗಿದೆ.
ಈಗಾಗಲೇ ಶವ ತೆಗೆದುಕೊಂಡು ಹೋಗಿ ಅಂತ್ಯಕ್ರಿಯೆ ಮಾಡಿದ್ದೇವೆ ಎಂದು ಹೇಳಿದರೂ ಆಸ್ಪತ್ರೆ ಸಿಬ್ಬಂದಿ ಕರೆ ಮಾಡುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಸಿಬ್ಬಂದಿ ಕರೆ ಮಾಡಿದ ಕಾಲ್ ರಿಕಾರ್ಡ್ ರೋಗಿಯ ಸಂಬಂಧಿ ಬಳಿ ಇದ್ದು, ಬಿಮ್ಸ್ ಸಿಬ್ಬಂದಿ ವಿರುದ್ಧ ಕುಟುಂಬಸ್ಥರು ದೂರು ನೀಡಲು ಮುಂದಾಗಿದ್ದಾರೆ.
ಈ ಕುರಿತು ಸ್ಪಷ್ಟನೆ ಕೇಳಲು ಬಿಮ್ಸ್ ನಿರ್ದೇಶಕ ಡಾ. ವಿನಯ ದಾಸ್ತಿಕೊಪ್ಪ ಅವರಿಗೆ ಕರೆ ಮಾಡಿದಾಗ, ‘ಬಿಮ್ಸ್‌ನಲ್ಲಿ ಅಂತಹ ಯಾವ ಘಟನೆಯೂ ನಡೆದಿಲ್ಲ’ ಎಂದು ಹೇಳಿದರು.
Comments are closed.