ಚಾಮರಾಜನಗರ: ಪೊಲೀಸರಿಗೆ ಹೆದರಿ ಓಡುತ್ತಿದ್ದ ಯುವಕ ಪ್ರಜ್ಞೆತಪ್ಪಿ ಬಿದ್ದು ಸಾವಿಗೀಡಾಗಿರುವ ಘಟನೆ ಚಾಮರಾಜನಗರ ತಾಲೂಕು ಯಾಲಕ್ಕೂರು ಗ್ರಾಮದಲ್ಲಿ ಭಾನುವಾರ ನಡೆದಿದೆ.
ಶಂಕರ್ (22) ಮೃತ ಯುವಕ. ಕೋವಿಡ್-19 ಹಿನ್ನೆಲೆಯಲ್ಲಿ ಗುಂಪುಗೂಡದಂತೆ ನಿಷೇದಾಜ್ಞೆ ಜಾರಿಯಲ್ಲಿರುವ ಹಿನ್ನಲೆಯಲ್ಲಿ ಗಸ್ತು ತಿರುಗಲು ಕುದೇರು ಠಾಣೆ ಪೊಲೀಸರು ಹೋಗಿದ್ದರು. ಈ ವೇಳೆ ಯಾಲಕ್ಕೂರು ಗ್ರಾಮದ ಪಡಸಾಲೆಯೊಂದರಲ್ಲಿ ಯುವಕರ ಗುಂಪು ಕುಳಿತಿದ್ದರು. ಪೊಲೀಸ್ ಜೀಪ್ ಕಂಡೊಡನೆ ದಿಕ್ಕಾಪಾಲಾಗಿ ಯುವಕರು ಓಡಿದ್ದಾರೆ.
ಓಡುತ್ತಾ ಜಮೀನೊಂದರಲ್ಲಿ ಎಡವಿ ಬಿದ್ದು ಶಂಕರ್ ಪ್ರಜ್ಞೆ ಕಳೆದುಕೊಂಡಿದ್ದ. ಚಿಕಿತ್ಸೆಗೆಂದು ಸಂತೇಮರಹಳ್ಳಿ ಪ್ರಾ.ಆ.ಕೇಂದ್ರಕ್ಕೆ ಗ್ರಾಮಸ್ಥರು ಕರೆದೊಯ್ದರು. ಬಳಿಕ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ಕರೆದೊಯ್ಯುವಂತೆ ವೈದ್ಯರು ಸಲಹೆ ನೀಡಿದರು. ಅದರಂತೆ ಶಂಕರನನ್ನು ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಯಿತು.
ಆದರೆ, ಯುವಕ ಹೃದಯಾಘಾತದಿಂದ ಮೃತಪಟ್ಟಿದ್ದಾನೆಂದು ಜಿಲ್ಲಾಸ್ಪತ್ರೆ ವೈದ್ಯರು ಇದೇ ವೇಳೆ ತಿಳಿಸಿದ್ದಾರೆ. ಆ್ಯಂಬುಲೆನ್ಸ್ ಮೂಲಕ ಯುವಕನ ಶವವನ್ನು ಗ್ರಾಮಕ್ಕೆ ತರಲಾಗಿದೆ. ಇತ್ತ ವಿಷಯ ತಿಳಿದಿದ್ದರು ಏನೂ ಆಗಿಲ್ಲವೆಂಬಂತೆ ವರ್ತಿಸುತ್ತಿರುವ ಕುದೇರು ಠಾಣಾ ಪೊಲೀಸರ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Comments are closed.