ಗದಗ(ಜುಲೈ.27): ಕೊರೋನಾ ವೈರಸ್ ಹಾವಳಿ ಹೆಚ್ಚಾಗಿದ್ದು, ಹಳ್ಳಿ ಹಳ್ಳಿಗೂ ಡೆಡ್ಲಿ ಕೊರೋನಾ ವಕ್ಕರಿಸಿ ತನ್ನ ಪ್ರತಾಪ್ ಮೆರೆಯುತ್ತಿದೆ. ಗ್ರಾಮೀಣ ಭಾಗದ ರೈತರು, ರೈತ ಕಾರ್ಮಿಕರು ಸಹ ಇನ್ನೊಬ್ಬರ ಜಮೀನಿನಲ್ಲಿ ಕೃಷಿ ಕೆಲಸ ಮಾಡಲು ಹಿಂದೆ ಮುಂದೆ ನೋಡುತ್ತಿದ್ದಾರೆ.
ಗದಗ ಜಿಲ್ಲೆಯ ಶಿರಹಟ್ಟಿ ಪಟ್ಟಣದ ರೈತ ರಾಮಪ್ಪ ಕಟೇಗಾರ ಎನ್ನುವ ರೈತನ ಜಮೀನಿನಲ್ಲಿ ಎಡೆ ಹೊಡೆಯಲು ಎತ್ತುಗಳ ಸಮೇತ ರೈತರು ಬರುತ್ತಿಲ್ಲಾ. ಕೇಳಿದ್ರೆ ಕೊರೋನಾ ಹಾವಳಿ ಹೆಚ್ಚಾಗಿದ್ದು, ನಮ್ಮ ಜಮೀನ ಕೆಲಸವನ್ನು ನಾವೇ ಮಾಡುತ್ತೇವೆ ಬೇರೆಯವರ ಕೆಲಸಕ್ಕೆ ಎತ್ತುಗಳ ಸಮೇತ ಬರುವುದಿಲ್ಲ ಅಂತಾ ಹೇಳಿದ್ದಾರೆ.
ಹೀಗಾಗಿ ರೈತ ಕುಟುಂಬ ಹೈರಾಣಾಗಿತ್ತು. ಆದರೆ, ಯೂಟ್ಯೂಬ್ ನಲ್ಲಿ ಬೈಕ್ ಮೂಲಕ ಎಡೆ ಹೊಡೆಯಲು ಉಪಯೋಗಿಸುವ ಯಂತ್ರಗಳು ನೋಡಿದ್ದಾರೆ. ಅದನ್ನು ಸ್ಥಳೀಯ ಮೆಕಾ ನಿಕಲ್ ಹಾಗೂ ರೈತ ಕುಟುಂಬ ಚರ್ಚೆ ಮಾಡಿ 35 ಸಾವಿರ ರೂಪಾಯಿ ಹಣವನ್ನು ನೀಡಿ ಯಂತ್ರವನ್ನು ತೆಗೆದುಕೊಂಡು ಬಂದಿದ್ದಾರೆ. ಗುಜರಾತ್ ರಾಜ್ಯದಿಂದ ಯಂತ್ರವನ್ನು ತರಿಸಿಕೊಂಡು, ಬೈಕ್ ಮೂಲಕ್ ಎಡೆ ಹೊಡೆದು ಕೃಷಿ ಕೆಲಸವನ್ನು ಮಾಡುತ್ತಿದ್ದಾರೆ.
ಇನ್ನೂ ರಾಮಪ್ಪ ಕಟೇಗಾರ ಕುಟುಂಬ ಕೇವಲ 5 ಎಕರೆ ಜಮೀನನ್ನು ಹೊಂದಿದ್ದು, ವ್ಯವಸಾಯ ಮಾಡಲು ಸ್ವಂತ ಎತ್ತುಗಳನ್ನು ಹೊಂದಿಲ್ಲ, ಪ್ರತಿ ಸಲ ಬಾಡಿಗೆ ರೂಪದಲ್ಲಿ ಬೇರೆ ರೈತರಿಂದ ಎತ್ತುಗಳನ್ನು ತೆಗದುಕೊಂಡು ಕೃಷಿ ಕೆಲಸ ಮಾಡುತ್ತಿದ್ದರು. ಆದರೆ, ಈ ಕೊರೋನಾ ಕಾಲದಲ್ಲಿ ಎತ್ತುಗಳ ಸಿಗುತ್ತಿಲ್ಲ. ಹೀಗಾಗಿ ಬೈಕ್ ಮೂಲಕ್ ಎಡೆ ಹೊಡೆಯುತ್ತಾರೆ.
ಎತ್ತುಗಳಿಗೆ ಹೊಲಿಸಿದ್ರೆ ಬೈಕ್ ಮೂಲಕ ಕೃಷಿ ಮಾಡುವುದು ಹೆಚ್ಚಿನ ಲಾಭವಾಗುತ್ತದೆ. ಒಂದು ಎಕರೆ ಜಮೀನಿನಲ್ಲಿ ಎಡೆ ಹೊಡೆಯಲು ಎತ್ತುಗಳ ಮೂಲಕ 500 ರೂಪಾಯಿ ಖರ್ಚು ಆಗುತ್ತದೆ. ಆದರೆ, ಬೈಕ್ ಗೆ 60 ರೂಪಾಯಿ ಪೆಟ್ರೋಲ್ ಹಾಕಿಸಿದ್ರೆ, ಒಂದು ಎಕರೆ ಜಮೀನಿನಲ್ಲಿ ಎಡೆ ಹೊಡೆಯಬಹುದು. ಬೈಕ್ ಓಡಿಸಲು ಓರ್ವ ಚಾಲಕ ಹಾಗೂ ಇಬ್ಬರು ಎಡೆ ಹೊಡೆಯುವದಿಂದ ಬೇಗ ಬೇಗ ಕೆಲಸ ಆಗುತ್ತದೆ. ಇನ್ನೊಬ್ಬರ “ಗಳೇ” ಕೇಳುವದು ತಪ್ಪತ್ತದೆ ಅಂತಾರೆ.
ಗ್ರಾಮೀಣ ಭಾಗದಲ್ಲಿ ರೈತರು ತಮ್ಮ ಕೆಲಸದೊಂದಿಗೆ ಇನ್ನೊಬ್ಬ ಕೃಷಿ ಕೆಲಸಕ್ಕೆ ಸಾಥ್ ನೀಡುತ್ತಿದ್ದರು. ಒಂದಾಗಿ ಕೃಷಿ ಚಟುವಟಿಕೆಯಲ್ಲಿ ಭಾಗಿಯಾಗುತ್ತಿದ್ದರು. ಆದರೆ, ಈಗ ಕೊರೋನಾ ಭಯಕ್ಕೆ ತಮ್ಮಷ್ಟಕ್ಕೆ ತಾವೇ ಬದುಕು ಸಾಗಿಸುವಂತ ಸ್ಥಿತಿ ನಿರ್ಮಾಣವಾಗಿದೆ. ಆದರೆ, ಇಂತಹ ಪರಿಸ್ಥಿತಿಯಲ್ಲಿ ಈ ರೈತ ಧೃತಿಗೆಡದೆ, ಹೊಸ ಮಾದರಿ ಕೃಷಿ ಮಾಡಿ ಸೈ ಎನಿಸಿಕೊಂಡಿದ್ದಾನೆ.
Comments are closed.