ಬೆಂಗಳೂರು(ಜು.28): 1912 ರಲ್ಲಿ ಅಂದಿನ ತೋಟಗಾರಿಕಾ ನಿರ್ದೇಶಕರಾಗಿದ್ದ ಜಿ ಎಚ್ ಕೃಂಬಿಗಲ್ ಲಾಲ್ಬಾಗ್ನಲ್ಲಿ ಫಲಪುಷ್ಪ ಪ್ರದರ್ಶನ ಆರಂಭಿಸಿದ್ದರು. ವಿವಿಧ ತಳಿಯ ಹೂ,ಹಣ್ಣು,ತರಕಾರಿಗಳನ್ನು ಜನರಿಗೆ ಪರಿಚಯಿಸುವ ಮೂಲ ಉದ್ದೇಶದಿಂದ ಫ್ಲವರ್ ಶೋ ಆರಂಭವಾಯ್ತು. ದೇಶ ವಿದೇಶಗಳಿಂದ ಪ್ರವಾಸಿಗರು ಆಗಮಿಸಿ ವೀಕ್ಷಿಸುತ್ತಿದ್ದ ಅದ್ಧೂರಿ ಆಚರಣೆ ಇದೇ ಮೊದಲ ಬಾರಿಗೆ ರದ್ದಾಗಿದೆ.
ಅಂದ ಹಾಗೆ ಹೂಗಳ ಈ ಸುಂದರ ಹಬ್ಬ ಎಂಥಹ ಸಂದರ್ಭದಲ್ಲೂ ನಿಂತಿದ್ದೇ ಇಲ್ಲ. ಎರಡನೇ ವಿಶ್ವಯುದ್ಧ, ಬರಗಾಲದಂತಹ ಭೀಕರ ಸಂದರ್ಭದಲ್ಲೂ ಫಲಪುಷ್ಪ ಪ್ರದರ್ಶನ ನಡೆದಿತ್ತು. ಈಗಿನಂತೆ ಆಗ ಅದ್ಧೂರಿಯಾಗಿ ನಡೆಯುತ್ತಿರಲಿಲ್ಲ. ಜೊತೆಗೆ ಯಾರು ಬೇಕಾದರೂ ಬಂದು ನೋಡಬಹುದಿತ್ತು. ಪ್ರವೇಶ ಟಿಕೆಟ್ ಕೂಡಾ ಇರಲಿಲ್ಲ. ಇಂಥಾ ಅನೇಕ ಸವಾಲಿನ ಸಂದರ್ಭಗಳನ್ನು ಗೆದ್ದ ಶೋ ಈಗ ಒಂದು ಸಣ್ಣ ವೈರಸ್ ನಿಂದ ಖಲಾಸ್ ಆಗಿರುವುದು ಬೇಸರದ ಸಂಗತಿ.
ಮೈಸೂರು ಹಾರ್ಟಿಕಲ್ಚರ್ ಸೊಸೈಟಿ ಮತ್ತು ತೋಟಗಾರಿಕಾ ಇಲಾಖೆ ಜಂಟಿಯಾಗಿ ಲಾಲ್ಬಾಗ್ನ ಗಾಜಿನ ಮನೆಯಲ್ಲಿ ಫ್ಲವರ್ ಶೋ ನಡೆಸುತ್ತದೆ. ಲಕ್ಷಾಂತರ ಜನರು ದೇಶ-ವಿದೇಶಗಳಿಂದ ಈ ಪ್ರದರ್ಶನ ನೋಡಲು ಆಗಮಿಸುತ್ತಾರೆ. ಬೆಂಗಳೂರಿಗರ ಪಾಲಿಗೆ ಅಕ್ಷರಶಃ ಇದೊಂದು ಹಬ್ಬವೇ ಸರಿ. ಗಾಜಿನ ಮನೆಯೊಳಗೆ ಬಗೆಬಗೆಯ ಹೂಗಳ ಜೋಡಣೆ, ಹೊರ ಆವರಣದಲ್ಲೂ ಬಣ್ಣಬಣ್ಣದ ಹೂಗಳ ರಾಶಿ ಎಲ್ಲವೂ ಕಣ್ಮನವನ್ನು ತಣಿಸುತ್ತಿದ್ದವು. ಈಗ ತೋಟಗಾರಿಕಾ ಇಲಾಖೆಯ 70% ಸಿಬ್ಬಂದಿ ಈಗ ಕೋವಿಡ್ ಡ್ಯೂಟಿಯಲ್ಲಿದ್ದಾರೆ.
ಫ್ಲವರ್ ಶೋ ಬಗ್ಗೆ ಆಲೋಚನೆಯೂ ಮಾಡದಂಥಾ ಪರಿಸ್ಥಿತಿ ಈಗ ನಿರ್ಮಾಣವಾಗಿದೆ. ಒಂದು ವೇಳೆ ಕೋವಿಡ್ ಇಲ್ಲದಿದ್ದರೆ ಈ ಬಾರಿ 212ನೇ ಫ್ಲವರ್ ಶೋ ನಡೆಯಬೇಕಿತ್ತು. ಎರಡನೇ ವಿಶ್ವಯುದ್ಧ, ಎರಡು ಬಾರಿ ರಾಜ್ಯದಲ್ಲಿ ಬರಗಾಲ ಮತ್ತು ಡಾ ರಾಜ್ಕುಮಾರ್ ರನ್ನು ವೀರಪ್ಪನ್ ಅಪಹರಣ ಮಾಡಿದ್ದ ಸಂದರ್ಭದಲ್ಲಿ ಸಿಂಪಲ್ ಆಗಿ ಫ್ಲವರ್ ಶೋ ನಡೆದಿತ್ತು. ಆದರೆ ಈ ಬಾರಿ ಫ್ಲವರ್ ಶೋ ಬಗ್ಗೆ ಯಾರೂ ಆಲೋಚನೆಯೇ ಮಾಡ್ತಿಲ್ಲ. ಎಂದಿನಂತೆ ನಡೆದಿದ್ದರೆ ಈಗಾಗಲೇ ಗಿಡಗಳನ್ನು ನೆಟ್ಟು ಹೂಬಿಡಲು ಆರಂಭವಾಗಬೇಕಿತ್ತು. ಆದರೆ ಈಗ ಗಾಜಿನ ಮನೆ ಮತ್ತು ಲಾಲ್ಬಾಗ್ ಬಿಕೋ ಎನ್ನುತ್ತಿದೆ.
ವರ್ಷಕ್ಕೆರಡು ಬಾರಿ ಕೆಂಪುತೋಟದಲ್ಲಿ ಫಲಪುಷ್ಪ ಪ್ರದರ್ಶನ ನಡೆಯುತ್ತದೆ. ಜನವರಿ 26ರ ಗಣರಾಜ್ಯೋತ್ಸವ ಮತ್ತು ಆಗಸ್ಟ್ 15 ರ ಸ್ವಾತಂತ್ರ್ಯೋತ್ಸವಕ್ಕೆ ಫ್ಲವರ್ ಶೋ ನಡೆಸಲಾಗುತ್ತದೆ. ತೋಟಗಾರಿಕಾ ಇಲಾಖೆ ಮತ್ತು ಮೈಸೂರು ಹಾರ್ಟಿಕಲ್ಚರ್ ಸೊಸೈಟಿಗೆ ಫ್ಲವರ್ ಶೋ ಆದಾಯದ ಮೂಲ ಕೂಡಾ ಹೌದು. ಜನವರಿಗಿಂತ ಆಗಸ್ಟ್ ಫ್ಲವರ್ ಶೋನಲ್ಲಿ ಆದಾಯ ಜಾಸ್ತಿ ಇರುತ್ತದೆ. ಪಾರ್ಕಿಂಗ್, ಪ್ರವೇಶದ ಟಿಕೆಟ್, ಸ್ಟಾಲ್ ಗಳ ಬಾಡಿಗೆ ಎಲ್ಲವೂ ಸೇರಿ 2 ರಿಂದ 2.7 ಕೋಟಿ ರೂಪಾಯಿಗಳ ಆದಾಯ ಬರುತ್ತದೆ. ಈ ವರ್ಷ ಕೊರೋನಾದಿಂದ ಇದಕ್ಕೂ ಕತ್ತರಿ ಬಿದ್ದಿದೆ.
ಈ ಬಗ್ಗೆ ಅಧಿಕೃತವಾಗಿ ಪ್ರಕಟಣೆ ಮಾಡುವುದೊಂದೇ ಬಾಕಿ ಇದೆ. ಕೊರೋನಾದಿಂದ ಈಗಾಗಲೇ ಕಂಗೆಟ್ಟಿರುವ ಜನರಿಗೆ ಇದು ಮತ್ತೊಂದು ನಿರಾಸೆಯ ಸುದ್ದಿಯಾಗಿರುವುದಂತೂ ಸತ್ಯ.
Comments are closed.