ಬೆಂಗಳೂರು (ಜು. 29): ಕೊರೋನಾ ಸೋಂಕಿತರ ಸಂಖ್ಯೆ ಪ್ರತಿದಿನ 4 ಸಾವಿರ ಗಡಿ ದಾಟುತ್ತಿದೆ. ಇದರಿಂದಾಗಿ ಕೊರೋನಾ ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಬೆಡ್ಗಳೇ ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ, ರಾಜ್ಯಾದ್ಯಂತ ಖಾಸಗಿ ಆಸ್ಪತ್ರೆಗಳಲ್ಲಿ ಶೇ. 50ರಷ್ಟು ಬೆಡ್ಗಳನ್ನು ಕೊರೋನಾ ರೋಗಿಗಳಿಗೆ ಮೀಸಲಿಡಲು ಆದೇಶ ಹೊರಡಿಸಲಾಗಿತ್ತು. ಆದರೆ, ಈ ವಿಷಯದಲ್ಲಿ ಖಾಸಗಿ ಆಸ್ಪತ್ರೆಗಳು ನಿರ್ಲಕ್ಷ್ಯ ಧೋರಣೆಯನ್ನು ತಳೆಯುತ್ತಲೇ ಇರುವುದರಿಂದ ಮತ್ತೊಮ್ಮೆ ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರ ಚಾಟಿ ಬೀಸಿದೆ.
ಖಾಸಗಿ ಆಸ್ಪತ್ರೆಗಳು ಕೋವಿಡ್ ರೋಗಿಗಳ ಚಿಕಿತ್ಸೆಗೆ ಶೇ. 50ರಷ್ಟು ಹಾಸಿಗೆಗಳನ್ನು ನೀಡಲು ನಿರ್ದೇಶಿಸಲಾಗಿದೆ. ಆದರೆ, ಬಹುತೇಕ ಆಸ್ಪತ್ರೆಗಳು ಹಾಸಿಗೆಗಳ ಲಭ್ಯತೆಯ ವಿವರವನ್ನು ಇಲಾಖೆಯ ವೆಬ್ಸೈಟಿನಲ್ಲಿ ಅಪ್ಡೇಟ್ ಮಾಡುತ್ತಿಲ್ಲ. ಇದರಿಂದಾಗಿ ರೋಗಿಗಳಿಗೆ ಬಹಳ ಅನಾನುಕೂಲವಾಗುತ್ತಿದೆ. ಆರೋಗ್ಯ ಇಲಾಖೆ, SAST ಮತ್ತು ಬಿಬಿಎಂಪಿ ಅನೇಕ ಬಾರಿ ಖಾಸಗಿ ಆಸ್ಪತ್ರೆಗಳಿಗೆ ಈ ಬಗ್ಗೆ ನೋಟಿಸ್ ನೀಡಿದ್ದರೂ ಪ್ರಯೋಜನವಾಗಿಲ್ಲ. ಆದರೆ, ಇನ್ನು ಈ ರೀತಿಯ ವಿಳಂಬ ನೀತಿಯನ್ನು ಸರ್ಕಾರ ಒಪ್ಪುವುದಿಲ್ಲ ಎಂದು ನೋಟಿಸ್ ನೀಡಿದೆ.
ಇನ್ನುಮುಂದೆ ಎಲ್ಲಾ ಖಾಸಗಿ ಆಸ್ಪತ್ರೆಗಳು ಕಡ್ಡಾಯವಾಗಿ ಪ್ರತಿ 6 ಗಂಟೆಗಳಿಗೊಮ್ಮೆ ತಮ್ಮಲ್ಲಿರುವ ಹಾಸಿಗೆಗಳ ವಿವರವನ್ನು ವೆಬ್ಸೈಟಿನಲ್ಲಿ ಅಪ್ಡೇಟ್ ಮಾಡಬೇಕು. ತಪ್ಪಿದರೆ ಅಂತಹ ಸಂಸ್ಥೆಗಳ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರು ಆದೇಶಿಸಿದ್ದಾರೆ.
ಇಂದು ಬೆಳಗ್ಗೆಯಷ್ಟೇ ಖಾಸಗಿ ಆಸ್ಪತ್ರೆಗಳ ವಿರುದ್ಧ ಟ್ವಿಟ್ಟರ್ನಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಟ್ವೀಟ್ ಮಾಡಿದ್ದರು. ಬೆಂಗಳೂರಿನ ಅಪೋಲೋ ಆಸ್ಪತ್ರೆಯಿಂದ ಸಾರ್ವಜನಿಕರಿಗೆ ಹೆಚ್ಚು ಸಮಸ್ಯೆಯಾಗುತ್ತಿದೆ ಎಂದು ತಿಳಿದುಬಂದಿದೆ. ಕೊರೋನಾ ರೋಗಿಗೆ 5 ಲಕ್ಷ ರೂ. ಬಿಲ್ ಮಾಡಿರುವುದು ಕೇಳಿ ಆಘಾತವಾಗಿದೆ. ಸರಕಾರದ ಆದೇಶಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರುತ್ತಿರುವ ಆಸ್ಪತ್ರೆ ಆಡಳಿತ ಮಂಡಳಿ ನಿಗದಿ ಮಾಡಿದ ಹಣಕ್ಕಿಂತ ಹೆಚ್ಚು ಹಣ ಪಡೆದಿದೆ. ಈ ವಿಚಾರ ನನ್ನ ಗಮನಕ್ಕೆ ಬಂದಿದ್ದು ಖಾಸಗಿ ಆಸ್ಪತ್ರೆ ವಿರುದ್ಧ ಮುಲಾಜಿಲ್ಲದೇ ಕ್ರಮ ಕೈಗೊಳ್ಳುತ್ತೇವೆ ಎಂದು ಡಾ. ಕೆ. ಸುಧಾಕರ್ ಎಚ್ಚರಿಕೆ ನೀಡಿದ್ದರು.
Comments are closed.