ಕರ್ನಾಟಕ

ಮೈಸೂರು ಆರೋಗ್ಯಾಧಿಕಾರಿ ಆತ್ಮಹತ್ಯೆ ಪ್ರಕರಣ; ಸಭೆ ನಂತರ ಪ್ರತಿಭಟನೆ ಹಿಂಪಡೆದ ವೈದ್ಯಾಧಿಕಾರಿಗಳ ಸಂಘ

Pinterest LinkedIn Tumblr


ಬೆಂಗಳೂರು(ಆ.23): ನಂಜನಗೂಡು ತಾಲೂಕು ಆರೋಗ್ಯಾಧಿಕಾರಿ ಆತ್ಮಹತ್ಯೆ ಹಿನ್ನೆಲೆ, ಮುಷ್ಕರಕ್ಕೆ ಕರೆ ನೀಡಿದ್ದ ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘವು ಇಂದು ಪ್ರತಿಭಟನೆಯನ್ನು ಹಿಂಪಡೆದಿದೆ. ಆದರೆ, ವರ್ಗಾವಣೆಗೊಂಡಿರುವ ಜಿ.ಪಂ. ಸಿಇಒ ಅಮಾನತು ಆಗುವವರೆಗೂ ವೈದ್ಯರು ಕೈಗೆ ಕಪ್ಪುಪಟ್ಟಿ ಧರಿಸಿ ಕೆಲಸ ಮಾಡಲು ನಿರ್ಧರಿಸಿದ್ದಾರೆ. ಸಾರ್ವಜನಿಕರಿಗೆ ತೊಂದರೆಯಾಗದಂತೆ ಕೊರೋನಾ ಸಂದರ್ಭದಲ್ಲಿ ಕೆಲಸ ಮಾಡಲು ನಿರ್ಧರಿಸಿದ್ದೇವೆ. ಈ ಸಂಬಂಧ ಮೈಸೂರು ಜಿಲ್ಲೆಯ ವೈದ್ಯಾಧಿಕಾರಿ ಜೊತೆ ಮಾತಾಡಿದ್ದು, ನಾಳೆಯಿಂದ ಮೈಸೂರು ಜಿಲ್ಲೆಯ ಕೊರೋನಾ ಅಪ್​ಡೇಟ್ ಬರಲಿದೆ ಎಂದು ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷ ಡಾ.ಶ್ರೀನಿವಾಸನ್ ತಿಳಿಸಿದ್ದಾರೆ.

ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷ ಡಾ ಶ್ರೀನಿವಾಸ್ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ. ಮೈಸೂರು ಸಿಇಓ ತಾಳಲಾರದೆ ಟಿಎಚ್ ಓ ಡಾ ನಾಗೇಂದ್ರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಾಳೆಯಿಂದ ತುರ್ತು ಚಿಕಿತ್ಸೆ ಹೊರತುಪಡಿಸಿ ಉಳಿದ ಸೇವೆ ನೀಡದಿರಲು ನಿರ್ಧಾರ ಮಾಡಲಾಗಿತ್ತು. ಈ ಕುರಿತು ಸರ್ಕಾರದ ಗಮನಕ್ಕೆ ತರಲಾಗಿತ್ತು, ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿತ್ತು. ಜಿಪಂ ಸಿಇಓ ವಿರುದ್ದ ಎಫ್ ಐ ಆರ್ ದಾಖಲಾಗಿ ನಿಷ್ಪಕ್ಷಪಾತ‌ ತನಿಖೆ ಆರಂಭವಾಗಿದೆ ಎಂದು ಹೇಳಿದರು.

ಮುಂದುವರೆದ ಅವರು, ಇದೇ ರೀತಿ ಬೀದರ್, ಬಾಗಲಕೋಟೆ ಜಿಲ್ಲೆಯಲ್ಲಿಯೂ ವೈದ್ಯಾಧಿಕಾರಿ ಮೇಲೆ ಒತ್ತಡ, ಅವಾಚ್ಯ ಶಬ್ದಗಳಿಂದ ನಿಂದನೆಯಾಗಿತ್ತು. ಅವೈಜ್ಞಾನಿಕವಾಗಿ ನೋಡಲ್ ಅಧಿಕಾರಿಯಾಗಿ ಐಎಎಸ್​ ಅಧಿಕಾರಿ ಮಾಡುವುದು ಸರಿಯಲ್ಲ. ನಮ್ಮಲ್ಲೇ ಹಿರಿಯ ಅಧಿಕಾರಿ ನಿಯೋಜನೆ ಮಾಡಿ ಎಂದು ಸಿಎಂಗೆ ಮನವಿ ಮಾಡಿದ್ದೇವೆ ಎಂದು ತಿಳಿಸಿದರು. ಇದೇ ವೇಳೆ, ಜಿ.ಪಂ. ಸಿಇಓ ವಿರುದ್ಧ ಸರ್ಕಾರದ ಮಟ್ಟದಲ್ಲಿಯೂ ತನಿಖೆಯಾಗಲಿದೆ. ನೋಡಲ್ ಅಧಿಕಾರಿಯಾಗಿ ಐಎಎಸ್ ಅಧಿಕಾರಿ ನಿಯೋಜಿಸದಿರಲು ಸರ್ಕಾರ ಭರವಸೆ ನೀಡಿದೆ. ಇದರ ಹಿನ್ನೆಲೆ ಸರ್ಕಾರಿ ವೈದ್ಯರ ಮುಷ್ಕರವನ್ನು ವಾಪಾಸ್ ಪಡೆಯಲಾಗಿದೆ ಎಂದರು.

ಇದೇ ವೇಳೆ ಮೈಸೂರು ಸರ್ಕಾರಿ ವೈದ್ಯರ ಸಂಘದ ಅಧ್ಯಕ್ಷ ದೇವಿ ಆನಂದ್ ಅವರು ಸಚಿವ ಸುಧಾಕರ್ ಹೇಳಿಕೆಗೆ ಖಂಡನೆ ವ್ಯಕ್ತಪಡಿಸಿದರು. ಪ್ರಶಾಂತ್ ಮಿಶ್ರಾ ವರ್ಗಾವಣೆ ಸ್ವಾಗತ. ತನಿಖೆ ನಂತರ ಸಸ್ಪಂಡ್ ಪ್ರಕ್ರಿಯೆ ನಮಗೂ ಅಪ್ಲೈ ಆಗಬೇಕು. ಆರೋಗ್ಯ ಇಲಾಖೆ ಅಧಿಕಾರಿಗಳೇ ನೋಡಲ್ ಆಫಿಸರ್‌ಗಳಾಗಲಿ. ಅವರ ಮಧ್ಯಪ್ರವೇಶ ಬೇಡ. ಕೆಎಎಸ್ ಐಎಎಸ್ ಅಧಿಕಾರಿಗಳು ಕೊರೋನಾ ನೋಡಲ್ ಆಫಿಸರ್​​ಗಳಾಗುವುದು ಬೇಡ. ಗುತ್ತಿಗೆ ಆಧಾರದ ಮೇಲೆ ಅರೆಕಾಲಿಕ ವೈದ್ಯಕೀಯ ಸಿಬ್ಬಂದಿ ಹಾಗೂ ಗ್ರೂಪ್ ಡಿ ನೌಕರರನ್ನು ನೇಮಕ ಮಾಡಿಕೊಳ್ಳಬೇಕು. ಪ್ರಕರಣ ವರದಿ ಬರೋವರೆಗೂ ಕಪ್ಪು ಪಟ್ಟಿ ಧರಿಸಿ ಕರ್ತವ್ಯಕ್ಕೆ ಹಾಜರಾಗಲು ನಿರ್ಧರಿಸಿದ್ದಾರೆ ಎಂದರು.

ಆದ್ರೆ ಸರ್ಕಾರದ ಸ್ಪಂದನೆ ನಮಗೆ ಸಮಾಧಾನ ತಂದಿಲ್ಲ. ಸರ್ಕಾರ ನಮ್ಮ ಬೇಡಿಕೆಗಳಿಗೆ ಸ್ವಲ್ಪಮಟ್ಟಿಗೆ ಸ್ಪಂದಿಸಿದೆ. ಜಿಲ್ಲಾ ಪಂಚಾಯಿತಿ ಸಿಇಒ ಅವರನ್ನು ವರ್ಗಾವಣೆ ಮಾಡಿದೆ.ಆದ್ರೆ ನಾವು ಸಸ್ಪೆಂಡ್ ಮಾಡಬೇಕು ಅಂತ ಕೇಳಿದ್ದೇವೆ. ಸಸ್ಪೆಂಡ್ ಮಾಡುವವರೆಗೂ ಕಪ್ಪುಪಟ್ಟಿ ಧರಿಸಿ ಕೆಲಸ ಮಾಡುತ್ತೇವೆ. ನಾಗೇಂದ್ರ ಅವರ ತಂದೆ, ತಾಯಿಗೆ ವಯಸ್ಸಾಗಿದೆ. ಅಕ್ಕ, ಪತ್ನಿ ದುಃಖದಲ್ಲಿದ್ದಾರೆ. ಈ ಕಾರಣಕ್ಕಾಗಿ ಅವರು ಪ್ರತಿಭಟನೆಗೆ ಬಂದಿಲ್ಲ. ಕೋವಿಡ್ ಪೀಕ್‌ನಲ್ಲಿ ಇರುವಾಗ ಮುಷ್ಕರ ಮಾಡುವುದು ಸರಿಯಲ್ಲ ಅಂತ ಪ್ರತಿಭಟನೆಯಿಂದ ಹಿಂದೆ ಸರಿದಿದ್ದೇವೆ. ಆದ್ದರಿಂದ ನಾಳೆಯಿಂದ ನಾವು ಕರ್ತವ್ಯಕ್ಕೆ ಹಾಜರಾಗುತ್ತೇವೆ. ನಮ್ಮ ಬೇಡಿಕೆ ಈಡೇರಲೇಬೇಕು. ನಮ್ಮವರೇ ನೋಡಲ್ ಅಧಿಕಾರಿಗಳಾಬೇಕು. ರವೀಂದ್ರ ಅವರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು ನಾಗೇಂದ್ರ ಅವರೊಂದಿಗಿನ ಸ್ನೇಹದಿಂದ. ಇದು ರಾಜಕೀಯ ವಿಚಾರ ಆಗಿರಲಿಲ್ಲ. ಡಾ.ನಾಗೇಂದ್ರ ಅವರ ಸಾವಿಗೆ ನ್ಯಾಯದ ರೂಪದಲ್ಲಿ ವೈದ್ಯರ ಸಾವಿನ ಬಗ್ಗೆ ಪ್ರತಿಭಟನೆ ಮಾಡಿದ್ದೇವೆ. ಇದು ರಾಜಕೀಯ ಆಗಲು ಬಿಡುವುದಿಲ್ಲ ಎಂದು ನ್ಯೂಸ್‌18ಗೆ ಡಾ.ದೇವಿ ಆನಂದ್ ಹೇಳಿದರು.

Comments are closed.