ಬೆಂಗಳೂರು (ಸೆಪ್ಟೆಂಬರ್ 2): ಕೊರೋನಾ ವೈರಸ್ ಹರಡುವಿಕೆ ಹೆಚ್ಚಿದ ಬೆನ್ನಲ್ಲೇ ಬಹುತೇಕ ಆರ್ಥಿಕ ವ್ಯವಹಾರಗಳು ಸ್ಥಗಿತಗೊಂಡಿದ್ದವು. ರಿಯಲ್ ಎಸ್ಟೇಟ್ ಸೇರಿ ಸಾಕಷ್ಟು ಉದ್ಯಮಗಳು ನೆಲಕಚ್ಚಿದ್ದವು. ಇದರ ನೇರ ಪರಿಣಾಮ ಚಿನ್ನದ ಮಾರುಕಟ್ಟೆಯ ಮೇಲೆ ಉಂಟಾಗಿತ್ತು. ಜನರು ಚಿನ್ನದ ಮೇಲೆ ಹೂಡಿಕೆ ಮಾಡಲು ಮುಂದೆ ಬಂದಿದ್ದರು. ಈಗ ನಿಧಾನವಾಗಿ ಆರ್ಥಿಕ ಚಟುವಟಿಕೆಗಳು ಚೇತರಿಕೆ ಪಡೆದುಕೊಳ್ಳುತ್ತಿವೆ. ಈ ಮಧ್ಯೆ ಚಿನ್ನದ ಬೆಲೆಯಲ್ಲಿ ಏರಿಕೆ ಕಾಣಲು ಆರಂಭವಾಗಿದೆ. ಮಂಗಳವಾರ ಆಭರಣ ಚಿನ್ನ 10 ಗ್ರಾಂಗೆ 380 ರೂಪಾಯಿ ಏರಿಕೆ ಕಂಡಿದೆ. ಈ ಮೂಲಕ ಬೆಲೆ 49,180 ರೂಪಾಯಿ ಆಗಿದೆ. ಇನ್ನು, 24 ಕ್ಯಾರೆಟ್ನ 10 ಗ್ರಾಂ ಚಿನ್ನದ ದರ 410 ರೂಪಾಯಿ ಏರಿಕೆ ಕಂಡಿದ್ದು, 53,650 ರೂಪಾಯಿ ಆಗಿದೆ.
ಕೆಲ ದಿನಗಳ ಕಾಲ ಬೆಳ್ಳಿ ದರ ಇಳಿಕೆ ಕಂಡಿತ್ತು. ನಂತರ ಮತ್ತೆ ಬೆಳ್ಳಿ ದರದಲ್ಲಿ ಜಿಗಿತ ಕಂಡಿತ್ತು. ಈ ಮೂಲಕ ಕೆಜಿ ಬೆಳ್ಳಿಗೆ 70 ಸಾವಿರದ ಗಡಿ ದಾಟಿತ್ತು. ನಂತರ ಸತತವಾಗಿ ಬೆಳ್ಳಿ ಬೆಲೆಯಲ್ಲಿ ಇಳಿಕೆ ಕಂಡಿತ್ತು. ಮಂಗಳವಾರ ಬೆಳ್ಳಿ ದರ ಮತ್ತೆ ಏರಿಕೆ ಕಂಡಿದೆ. 2100 ರೂಪಾಯಿ ಜಿಗಿತ ಕಂಡಿದ್ದು, 68,700 ರೂಪಾಯಿ ಆಗಿದೆ.
ಅನೇಕ ವಿಚಾರಗಳು ಚಿನ್ನದ ಬೆಲೆಯನ್ನು ನಿರ್ಧರಿಸುತ್ತವೆ. ಹಣ ದುಬ್ಬರ, ಅಂತಾರಾಷ್ಟ್ರೀಯ ಮಾರುಕಟ್ಟೆ ಬೆಲೆ, ಬಡ್ಡಿ ದರ, ಜ್ಯುವೆಲರಿ ಮಾರುಕಟ್ಟೆ ಮತ್ತು ವ್ಯಾಪಾರ ಯುದ್ಧಗಳು ಚಿನ್ನದ ಬೆಲೆ ಏರಿಳಿತಕ್ಕೆ ನೇರ ಕಾರಣವಾಗುತ್ತವೆ. ಸದ್ಯ ಕೊರೋನಾ ವೈರಸ್ ಇರುವುದರಿಂದ ಜನರಿಗೆ ಬೇರೆಲ್ಲೂ ಹೂಡಿಕೆ ಮಾಡಲು ಕ್ಷೇತ್ರಗಳು ಸಿಗುತ್ತಿಲ್ಲ. ಹೀಗಾಗಿ, ಚಿನ್ನದ ಮೇಲೆ ಹೂಡಿಕೆ ಮಾಡುತ್ತಿದ್ದಾರೆ. ಇದರಿಂದ ಸಹಜವಾಗಿಯೇ ಚಿನ್ನದ ದರದಲ್ಲಿ ಏರಿಕೆ ಕಂಡಿತ್ತು.
ಮತ್ತೆ ಏರಿಕೆ ಕಾಣಲಿದೆ ಚಿನ್ನ?:
ವಿಶ್ವದ ಆರ್ಥಿಕತೆ ತಲೆಕೆಳೆಗಾಗಿದೆ. ಹೀಗಾಗಿ ಯಾವ ಮಾರುಕಟ್ಟೆಯ ಮೇಲೂ ಖಚಿತವಾಗಿ ಏನನ್ನೂ ಹೇಳಲೂ ಸಾಧ್ಯವಾಗುತ್ತಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಚಿನ್ನದ ದರ ಇನ್ನೂ ಏರಿಕೆ ಆಗಲಿದೆ ಎಂದು ತಜ್ಞರು ಹೇಳುತ್ತಿದ್ದಾರೆ.
Comments are closed.