ಚಿತ್ರದುರ್ಗ: ಆಗಾಗ ಭಯಬೀಳುತ್ತಿದ್ದ 2 ವರ್ಷದ ಪುಟ್ಟ ಹೆಣ್ಣುಮಗುವಿಗೆ ಮಾಂತ್ರಿಕ ಬೆತ್ತದಿಂದ ಬಾರಿಸಿದ ಕಾರಣ ಪ್ರಾಣಬಿಟ್ಟ ಘಟನೆ ಹೊಳಲ್ಕೆರೆ ತಾಲೂಕಿನ ಅಜ್ಜಿಕ್ಯಾತನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮಗಳು ಬೆಚ್ಚಿಬೀಳುತ್ತಿದ್ದುದನ್ನು ನೋಡಿದ ತಂದೆ-ತಾಯಿ, ಪರಿಹಾರ ಕೇಳಲು ಮಗುವನ್ನು ಮಾಟಗಾರ ರಾಕೇಶ್ ಎಂಬುವನ ಬಳಿ ಕರೆದುಕೊಂಡು ಹೋಗಿದ್ದರು.
ಗ್ರಾಮದ ನಿವಾಸಿಗಳಾದ ಪ್ರವೀಣ್-ಬೇಬಿ ದಂಪತಿಯ 2 ವರ್ಷದ ಮಗಳು ಪೂರ್ಣಿಕಾ ಇತ್ತೀಚೆಗೆ ಪದೇಪದೆ ಭಯಬೀಳುತ್ತಿದ್ದಳು. ಈ ರಾಕ್ಷಸ ಮಗುವಿಗೆ ಯಾರೋ ಮಾಟ, ಮಂತ್ರ ಮಾಡಿಸಿದ್ದಾರೆ, ದೆವ್ವ ಹಿಡಿದಿದೆ ಎಂದು ಹೇಳಿದ್ದಾನೆ. ಅಷ್ಟೇ ಅಲ್ಲ, ತಂದೆ-ತಾಯಿಯನ್ನು ಹೊರಗೆ ಕಳಿಸಿ, ದೆವ್ವ ಬಿಡಿಸುವ ನೆಪದಲ್ಲಿ ಅಷ್ಟು ಚಿಕ್ಕ ಮಗುವಿಗೆ ಬೆತ್ತದಿಂದ ಮನಸೋಇಚ್ಛೆ ಬಾರಿಸಿದ್ದಾನೆ.
ಪದೇಪದೆ ಗಾಬರಿ ಆಗುತ್ತಿದ್ದ ಮಗು ಪೂರ್ಣಿಕಾ ಬಗ್ಗೆ ಪರಿಹಾರ ಕೇಳಲು ಮಾಟಗಾರನ ಬಳಿ ಹೋದಾಗ ಮಗುವಿನ ಮೈಯಲ್ಲಿ ದೆವ್ವ ಇದೆ ಬಿಡಿಸಬೇಕು ಎಂದು ಹೇಳಿದ್ದಾನೆ. ಇದನ್ನು ನಂಬಿದ ದಂಪತಿ ದೆವ್ವ ಬಿಡಿಸುವಂತೆ ಕೇಳಿಕೊಂಡಾಗ ಅವರಿಬ್ಬರನ್ನೂ ಹೊರಗೆ ಕಳುಹಿಸಿ ಬೆತ್ತ ತೆಗೆದುಕೊಂಡು ಮಗುವಿಗೆ ಮನಸೋ ಇಚ್ಛೆ ಬಾರಿಸಿದ್ದಾನೆ. ರಾಕೇಶ್ನ ಹೊಡೆತಕ್ಕೆ ತತ್ತರಿಸಿದ ಮಗು ಅಲ್ಲಿಯೇ ಪ್ರಾಣಬಿಟ್ಟಿದೆ.
ಅಜ್ಜಿಕ್ಯಾತನಹಳ್ಳಿ ನಿವಾಸಿ ಆಗಿರುವ ರಾಕೇಶ್ಗೆ ಇನ್ನೂ 19 ವರ್ಷ. ಓದು, ವಿದ್ಯೆಯಿಲ್ಲದ ಈತ ತಾನೊಬ್ಬ ಯಲ್ಲಮ್ಮ ದೇವಿ ಆರಾಧಕ ಎಂದು ಹೇಳಿಕೊಂಡಿದ್ದ. ದೆವ್ವ, ಭೂತ, ಗಾಳಿ ಬಿಡಿಸುತ್ತೇನೆ ಎಂದು ಜನರನ್ನು ನಂಬಿಸಿದ್ದ. ಅಜ್ಜಿಕ್ಯಾತನಹಳ್ಳಿ ಸೇರಿ ಸುತ್ತಮುತ್ತಲಿನ ಹಲವು ಹಳ್ಳಿಯ ಜನರು ರಾಕೇಶ್ನನ್ನು ನಂಬಿದ್ದರು. ಈತ ಅದನ್ನೇ ಕಾಯಕ ಮಾಡಿಕೊಂಡು ಹಣ ಪೀಕುತ್ತಿದ್ದ. ಈ ಘಟನೆ ಸಂಬಂಧ ಪಾಲಕರು ನೀಡಿದ ದೂರಿನ ಅನ್ವಯ ಪೊಲೀಸರು ರಾಕೇಶ್ನನ್ನು ಬಂಧಿಸಿದ್ದಾರೆ.
Comments are closed.