ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗು ಡಿ.ಕೆ.ಸುರೇಶ್ ಅವರ ಮನೆಯ ಮೇಲೆ ಇಂದು ಬೆಳಗ್ಗೆ ಸಿಬಿಐ ಅಧಿಕಾರಿಗಳು ನಡೆಸಿದ ದಾಳಿ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ರಾಜಕೀಯ ದ್ವೇಷದ ಕಾರಣಕ್ಕಾಗಿ ನಡೆದ ದಾಳಿ ಎಂದು ಖಂಡನೆ ವ್ಯಕ್ತಪಡಿಸಿದ್ದಾರೆ.
ಇಂದು ಬೆಳಗ್ಗೆ ಡಿ.ಕೆ. ಶಿವಕುಮಾರ್ ಅವರ ಬೆಂಗಳೂರಿನ ಸದಾಶಿವನಗರದಲ್ಲಿರುವ ಮನೆ ಹಾಗೂ ದೊಡ್ಡಾಲಹಳ್ಳಿಯಲ್ಲಿರುವ ಮನೆ ಮೇಲೂ ಸಿಬಿಐ ದಾಳಿ ನಡೆಸಲಾಗಿದೆ. ಜೊತೆಗೆ ಡಿಕೆಶಿ ಸಹೋದರ ಡಿ.ಕೆ. ಸುರೇಶ್ ಮನೆ ಮೇಲೂ ದಾಳಿ ನಡೆಸಲಾಗಿದೆ.
‘ಬಿಜೆಪಿ ಪಕ್ಷ ದ್ವೇಷ ರಾಜಕಾರಣ ಮಾಡುವುದು ಹೊಸತೇನಲ್ಲ. ಈ ಮೂಲಕ ಸಾರ್ವಜನಿಕರ ಗಮನ ಸೆಳೆಯುವುದನ್ನು ಆಗಾಗ ಮಾಡುತ್ತಲೇ ಇರುತ್ತದೆ. ಡಿ.ಕೆ. ಶಿವಕುಮಾರ್ ಅವರ ಮನೆ ಮೇಲೆ ನಡೆದಿರುವ ಸಿಬಿಐ ದಾಳಿ ಅದಕ್ಕೆ ತಾಜಾ ಉದಾಹರಣೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮನೆ ಮೇಲೆ ದಾಳಿ ನಡೆಸುವ ಮೂಲಕ ಆರ್ಆರ್ ನಗರ ಮತ್ತು ಶಿರಾ ಉಪಚುನಾವಣೆಯ ವೇಳೆ ಮತದಾರರ ಗಮನವನ್ನು ತನ್ನತ್ತ ಸೆಳೆಯಲು ಬಿಜೆಪಿ ಪ್ರಯತ್ನಿಸುತ್ತಿದೆ. ನಾವು ಉಪಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಬಾರದೆಂದು ಈ ದಾಳಿ ನಡೆಸಿರುವ ಬಿಜೆಪಿಯ ನಡೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಇದು ಬಿಜೆಪಿ ನಾಯಕರ ನೈತಿಕ ದಿವಾಳಿತನವನ್ನು ತೋರಿಸುತ್ತದೆ’ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಡಿ.ಕೆ. ಶಿವಕುಮಾರ್ ಭ್ರಷ್ಟಾಚಾರದಿಂದ ಹಣ ಗಳಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿಂದೆ ಐಟಿ ಮತ್ತು ಇಡಿ ಅಧಿಕಾರಿಗಳು ಕೂಡ ಡಿ.ಕೆ. ಶಿವಕುಮಾರ್ ಮನೆ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಡಿಕೆ ಶಿವಕುಮಾರ್ ಜೈಲು ಸೇರಿದ್ದರು. ಭ್ರಷ್ಟಾಚಾರದ ಆರೋಪದ ಹಿನ್ನೆಲೆಯಲ್ಲಿ ಈ ಪ್ರಕರಣದ ತನಿಖೆ ನಡೆಸುವಂತೆ ರಾಜ್ಯ ಸರ್ಕಾರ ಸಿಬಿಐಗೆ ಅನುಮತಿ ನೀಡಿತ್ತು.
Comments are closed.