ಕರ್ನಾಟಕ

ಜೈಲಿನಲ್ಲಿರುವ ನಟಿಯರಿಗೆ ಜಾಮೀನು ನೀಡಲು ನ್ಯಾಯಾಧೀಶರಿಗೆ ಬಾಂಬ್‌ ಬೆದರಿಕೆ ಹಾಕಿದ ಪ್ರಕರಣಕ್ಕೆ ಹೊಸ ತಿರುವು..!

Pinterest LinkedIn Tumblr


ಬೆಂಗಳೂರು: ಡ್ರಗ್ಸ್‌ ಕೇಸ್‌ನಲ್ಲಿ ಜೈಲು ಸೇರಿರುವ ನಟಿಯರಿಗೆ ಜಾಮೀನು ನೀಡುವಂತೆ ವಿಶೇಷ ನ್ಯಾಯಾಧೀಶರಿಗೆ ಬಾಂಬ್ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ಕೌಟುಂಬಿಕ ಕಲಹ ಬಾಂಬ್‌ ಬೆದರಿಕೆ ಪತ್ರಕ್ಕೆ ಕಾರಣವಾಗಿದೆ ಎಂದು ಶಂಕಿಸಲಾಗಿದೆ. ರಕ್ತಸಂಬಂಧಿಯನ್ನು ತೊಂದರೆಯಲ್ಲಿ ಸಿಲುಕಿಸುವುದಕ್ಕೆ ಅವರ ಎದುರಾಳಿ ಕುಟುಂಬ ಈ ಕೃತ್ಯ ಎಸಗಿದೆ ಎಂದು ಹೇಳಲಾಗಿದೆ. ಆದರೆ, ಹೆಚ್ಚಿನ ಮಾಹಿತಿಯನ್ನು ಪೊಲೀಸರು ಬಹಿರಂಗಪಡಿಸಿಲ್ಲ.

ಪ್ರಕರಣದ ವಿಚಾರಣೆಗಾಗಿ ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆಯಲಾಗಿದ್ದು, ಅವರನ್ನು ಬೆಂಗಳೂರಿಗೆ ಕರೆತರಲಾಗುವುದು ಎಂದು ಹೆಸರು ಹೇಳಲು ಇಚ್ಛಿಸದ ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಡ್ರಗ್ಸ್‌ ಮಾಫಿಯಾ ಪ್ರಕರಣದ ವಿಚಾರಣೆ ನಡೆಸುತ್ತಿರುವ ಎನ್‌ಡಿಪಿಎಸ್‌ ವಿಶೇಷ ನ್ಯಾಯಾಧೀಶರಿಗೆ ಸೋಮವಾರ ಬೆದರಿಕೆ ಪತ್ರ ಹಾಗೂ ಡಿಟೊನೇಟರ್‌ ಒಳಗೊಂಡ ಪಾರ್ಸಲ್‌ ಬಂದಿತ್ತು. ಪತ್ರದಲ್ಲಿ ಇಬ್ಬರು ನಟಿಯರು ಹಾಗೂ ಡಿಜೆ ಹಳ್ಳಿ ಗಲಭೆಯಲ್ಲಿ ಬಂಧಿತರಾಗಿರುವ ಆರೋಪಿಗಳಿಗೆ ಜಾಮೀನು ನೀಡುವಂತೆ ಒತ್ತಾಯಿಸಿದ್ದರು.

ತಮ್ಮ ಬೇಡಿಕೆ ಈಡೇರಿಸದಿದ್ದರೆ ಬಾಂಬ್‌ ಸ್ಫೋಟಿಸುವುದಾಗಿ ಪತ್ರ ಬರೆಯಲಾಗಿತ್ತು. ಪತ್ರದಲ್ಲಿ ಉಗ್ರ ಸಂಘಟನೆಯ ಹೆಸರನ್ನು ಉಲ್ಲೇಖಿಸಲಾಗಿತ್ತು. ತನಿಖೆ ನಡೆಸಿದ ಬಳಿಕ ಪಾರ್ಸಲ್‌ನಲ್ಲಿ ಯಾವುದೇ ಬಾಂಬ್‌ ಇಲ್ಲ ಎಂದು ಗೊತ್ತಾಗಿದೆ. ಕೆಲವು ವೈರ್‌ಗಳಿಂದ ಮಾಡಿದ್ದ ಡಿಟೋನೇಟರ್‌ ತರ ಕಾಣುವ ಆಕೃತಿಯನ್ನು ಪಾರ್ಸಲ್‌ ಕಳಿಸಲಾಗಿತ್ತು.

ಪೊಲೀಸರು ಪತ್ರದ ಬೆನ್ನತ್ತಿದಾಗ ಅದು ತುಮಕೂರು ಜಿಲ್ಲೆಯ ಚೇಳೂರಿನಿಂದ ಕಳುಹಿಸಲಾಗಿದೆ ಎಂಬುದು ಗೊತ್ತಾಗಿದೆ. ಇಬ್ಬರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

Comments are closed.