ಕರ್ನಾಟಕ

ಕಪಾಲ ಬೆಟ್ಟದಲ್ಲಿ 114 ಅಡಿ ಎತ್ತರದ ಏಸು ಪ್ರತಿಮೆ ನಿರ್ಮಾಣಕ್ಕೆ ಹೈಕೋರ್ಟ್ ತಡೆಯಾಜ್ಞೆ

Pinterest LinkedIn Tumblr


ರಾಮನಗರ: ಕಪಾಲಬೆಟ್ಟದಲ್ಲಿ ಯಾವುದೇ ಕಾರಣಕ್ಕೂ ಏಸು ಪ್ರತಿಮೆ ನಿರ್ಮಾಣ ಮಾಡುವುದಕ್ಕೆ ಬಿಡುವುದಿಲ್ಲವೆಂದು ಕನಕಪುರದಲ್ಲಿ ಈ ಹಿಂದೆ ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಗುಡುಗಿದ್ದರು. ಇದೀಗ ಹೈಕೋರ್ಟ್ ಇದರ ನಿರ್ಮಾಣಕ್ಕೆ ತಡೆಯಾಜ್ಞೆ ನೀಡಿದೆ.

ಈ ಕುರಿತಾಗಿ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರು ಸುದ್ದಿಗೋಷ್ಠಿ ನಡೆಸಿ ಕೋರ್ಟ್ ತೀರ್ಮಾನಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಹಾರೋಬೆಲೆಯ ಕಪಾಲಬೆಟ್ಟದಲ್ಲಿನ 10 ಎಕರೆ ಸರ್ಕಾರಿ ಗೋಮಾಳದಲ್ಲಿ ಏಸುಕ್ರಿಸ್ತನ 114 ಅಡಿ ಎತ್ತರದ ಬೃಹತ್ ಪ್ರತಿಮೆ ನಿರ್ಮಾಣ ಮಾಡಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಸಂಸದ ಡಿ.ಕೆ.ಸುರೇಶ್ ಮಾಸ್ಟರ್ ಪ್ಲ್ಯಾನ್ ರೂಪಿಸಿದ್ದರು. ಈಗಾಗಲೇ ಆ ಸರ್ಕಾರಿ ಜಾಗ ಕಪಾಲಬೆಟ್ಟ ಅಭಿವೃದ್ಧಿ ಟ್ರಸ್ಟ್ ಹೆಸರಿಗೆ ಮಂಜೂರು ಕೂಡ ಆಗಿರುವುದು ಗೊತ್ತಿರುವ ಸಂಗತಿ. ಆದರೆ ಇದಕ್ಕೆ ಬಿಜೆಪಿ ನಾಯಕರು ಸೇರಿದಂತೆ ಹಿಂದೂಪರ ಸಂಘಟನೆಗಳು ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದರು.

ಯಾವುದೇ ಕಾರಣಕ್ಕೂ ಇಲ್ಲಿ ಏಸುವಿನ ಪ್ರತಿಮೆ ನಿರ್ಮಾಣ ಮಾಡಬಾರದೆಂದು ಕನಕಪುರದಲ್ಲಿ ಹಿಂದೂ ಜಾಗರಣ ವೇದಿಕೆಯ ಸಹಯೋಗದೊಂದಿಗೆ ಬೃಹತ್ ಹೋರಾಟ ಕೂಡ ನಡೆಯಿತು. ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಅವು ಡಿ.ಕೆ.ಬ್ರದರ್ಸ್​​ ವಿರುದ್ಧ ಗುಡುಗಿದ್ದರು.

ಕಳೆದ 2019ರ ಡಿಸೆಂಬರ್ 26 ರಲ್ಲಿ ಏಸು ಕ್ರಿಸ್ತನ ಪ್ರತಿಮೆಗೆ ಶಿಲಾನ್ಯಾಸ ನೆರವೇರಿಸಿದ ಬಳಿಕ ಡಿಕೆಶಿ ವಿರುದ್ಧ ಹಲವು ಪ್ರತಿಭಟನೆಗಳು ನಡೆದವು. 2020ರ ಜನವರಿ 13 ರಂದು ಕನಕಪುರ ಚಲೋ ಹೆಸರಿನಲ್ಲಿ ಆರ್‌ಎಸ್‌ಎಸ್ ಪ್ರಭಾವಿ ಮುಖಂಡ ಕಲ್ಲಡ್ಕ ಪ್ರಭಾಕರ್ ಕನಕಪುರದಲ್ಲಿ ಡಿ.ಕೆ.ಬ್ರದರ್ಸ್​​ ವಿರುದ್ಧ ಗುಡುಗಿದ್ದರು. ಆದರೆ, ಈಗ ಹೈಕೋರ್ಟ್ ಪ್ರತಿಮೆ ನಿರ್ಮಾಣ ಮಾಡುವುದಕ್ಕೆ ತಡೆಯಾಜ್ಞೆ ನೀಡಿದೆ.

ಈ ಕುರಿತಾಗಿ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರು ರಾಮನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ನ್ಯಾಯಾಲಯದ ತೀರ್ಪಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಡಿ.ಕೆ.ಬ್ರದರ್ಸ್​​ ಧರ್ಮದ ವಿರುದ್ಧವಾಗಿ ಕೆಲಸ ಮಾಡಬಾರದು. ರಾಮನಗರ-ಮಂಡ್ಯ ಭಾಗದಲ್ಲಿ ಹಿಂದೂಗಳು ಮತಾಂತರವಾಗುತ್ತಿದ್ದಾರೆ. ಈ ಬಗ್ಗೆ ಗಮನಹರಿಸಬೇಕು. ಜೊತೆಗೆ ನಮ್ಮ ಪರವಾಗಿ ಸರ್ಕಾರ ನಿಲ್ಲದಿದ್ದರೂ ಕೂಡ ನಾವು ಕಾನೂನಿನ ಮೂಲಕ ಹೋರಾಟ ಮಾಡುತ್ತೇವೆ ಎಂದು ಹಿಂದು ಜಾಗರಣ ವೇದಿಕೆ ಜಿಲ್ಲಾಧ್ಯಕ್ಷ ಗಜೇಂದ್ರ ಸಿಂಗ್ ತಿಳಿಸಿದರು.

ಇನ್ನು 2011 ರ ಸುಪ್ರಿಂಕೋರ್ಟ್ ಆದೇಶದಂತೆ ಯಾವುದೇ ಸರ್ಕಾರಿ ಗೋಮಾಳವನ್ನ ಮತೀಯ ಸಂಘಟನೆಗಳಿಗೆ ಕೊಡಬಾರದೆಂದು ನಿಯಮವಿದೆ. ಆದರೆ, ಕನಕಪುರದ ಹಾರೋಬೆಲೆಯ ಕಪಾಲಬೆಟ್ಟದಲ್ಲಿ ನೀಡಲಾಗಿರುವ ಗೋಮಾಳ ಜಾಗವನ್ನ ಒಂದು ಟ್ರಸ್ಟ್‌ಗೆ ನೀಡಿರುವುದು ಯಾಕೆ ಎಂದು ಕೋರ್ಟ್ ಪ್ರಶ್ನೆ ಮಾಡಿದೆ. ಜೊತೆಗೆ ಸ್ಥಳೀಯ ಜನಪ್ರತಿನಿಧಿಗಳ ಭಾಗಿತ್ವವನ್ನ ಕೋರ್ಟ್ ಪ್ರಶ್ನೆ ಮಾಡಿದೆ.

ಯಾವುದೇ ಸಂಘಸಂಸ್ಥೆಯವರು ತಮಗೆ ಇಂತಹ ಜಾಗಬೇಕೆಂದು ಸರ್ಕಾರಕ್ಕೆ ಪತ್ರ ಬರೆಯಬೇಕು, ಜೊತೆಗೆ ಸ್ಥಳೀಯ ಜನಪ್ರತಿನಿಧಿಗಳಿಗೆ ಮನವಿ ಮಾಡಿ ಅವರ ಮುಖಾಂತರ ಸರ್ಕಾರಕ್ಕೆ ಪತ್ರದ ಮೂಲಕ ಮನವಿ ಮಾಡಿಸಬಹುದು. ನಂತರ ಆ ಪತ್ರದ ಬಗ್ಗೆ ಸರ್ಕಾರ ತೀರ್ಮಾಣ ಮಾಡಲಿದೆ, ಉದ್ದೇಶ ನ್ಯಾಯಯುತವಾಗಿದ್ದರೆ ಜಾಗವನ್ನ ಸರ್ಕಾರ ಮಂಜೂರು ಮಾಡಬಹುದು. ಆದರೆ ಇಲ್ಲಿ ಸಂಘಸಂಸ್ಥೆಯವರಿಗೂ ಮೊದಲೇ ಡಿ.ಕೆ.ಬ್ರದರ್ಸ್​​ ಸರ್ಕಾರಕ್ಕೆ ಈ ಜಾಗದ ವಿಚಾರವಾಗಿ ಪತ್ರ ಬರೆದಿದ್ದಾರೆ. ಹಾಗಾಗಿ ಕೋರ್ಟ್ ಈ ಅಂಶವನ್ನ ಪರಿಗಣಿಸಿ ಪ್ರತಿಮೆ ನಿರ್ಮಾಣಕ್ಕೆ ತಡೆಯಾಜ್ಞೆ ನೀಡಿದೆ ಎಂದು ಹಿಂ.ಜಾ.ವೇ ಜಿಲ್ಲಾ ಪ್ರಧಾನಕಾರ್ಯದರ್ಶಿ ಆರ್.ಸುರೇಶ್ ತಿಳಿಸಿದ್ದಾರೆ.

ಒಟ್ಟಾರೆ ಕಳೆದ ವರ್ಷದಿಂದ ಸಾಕಷ್ಟು ಚರ್ಚೆಯಲ್ಲಿದ್ದ ಕನಕಪುರದ ಹಾರೋಬೆಲೆಯ ಕಪಾಲಬೆಟ್ಟದ ಏಸುಪ್ರತಿಮೆ ನಿರ್ಮಾಣ ವಿಚಾರವಾಗಿ ಸದ್ಯಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿರುವುದು ಡಿ.ಕೆ.ಬ್ರದರ್ಸ್​​ಗೆ ಕೊಂಚ ಇರಿಸುಮುರುಸಾಗಿದೆ. ಆದರೆ, ಮುಂದಿನ ದಿನಗಳಲ್ಲಿ ಈ ಪ್ರತಿಮೆ ನಿರ್ಮಾಣ ವಿಚಾರ ಯಾವ ಹಂತ ತಲುಪಲಿದೆ ಎಂಬುದನ್ನ ಕಾಲವೇ ಉತ್ತರಿಸಬೇಕಿದೆ.

Comments are closed.