ಶಿವಮೊಗ್ಗ: ಸಾಗರದ ಜೋಡಿ ಕೊಲೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಹೊಸ ಪ್ರಿಯಕರನಿಂದ ಹಳೆ ಪ್ರಿಯಕರನನ್ನು ಮಹಿಳೆ ಕೊಲೆ ಮಾಡಿಸಿರುವುದು ಇದೀಗ ಬೆಳಕಿಗೆ ಬಂದಿದೆ.
ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆ ಪ್ರಕರಣದಲ್ಲಿ ಬಂಧಿತನಾಗಿದ್ದ ಆರೋಪಿ ತಪ್ಪಿಸಿಕೊಳ್ಳಲು ಯತ್ನಿಸಿದ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಯ ಬಲಗಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಪೊಲೀಸರ ಗನ್ ಮತ್ತೆ ಸದ್ದು ಮಾಡಿದೆ. ಜಿಲ್ಲೆಯ ಸಾಗರ ತಾಲೂಕಿನ ಹಳೆ ಇಕ್ಕೇರಿ ಸಮೀಪ ಘಟನೆ ನಡೆದಿದೆ. ಗುಂಡೇಟಿಗೆ ಒಳಗಾದ ಆರೋಪಿ ಭರತ್ ಇದೀಗ ಸಾಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇದೀಗ ಪ್ರಕರಣದ ಪ್ರಮುಖ ಆರೋಪಿ ಶೃತಿಯನ್ನು ಸಹ ಪೊಲೀಸರು ಬಂಧಿಸಿದ್ದಾರೆ.
ಅ.11 ರಂದು ಸಾಗರ ತಾಲೂಕಿನ ಹಳೆ ಇಕ್ಕೇರಿಯಲ್ಲಿ ಬಂಗಾರಮ್ಮ (60), ಪ್ರವೀಣ್ (35) ತಾಯಿ ಮಗನನ್ನು ಮನೆಯಲ್ಲಿ ಮಲಗಿದ್ದ ವೇಳೆಯಲ್ಲಿಯೇ ಮೃತ ಪ್ರವೀಣನ ಪತ್ನಿ ಹಾಗೂ 10 ತಿಂಗಳ ಮಗುವಿನ ಎದುರಿನಲ್ಲಿಯೇ ಕೊಲೆ ಮಾಡಲಾಗಿತ್ತು. ಆದರೆ ಕೊಲೆಗೆ ನಿಖರ ಕಾರಣ ಗೊತ್ತಾಗಿರಲಿಲ್ಲ. ಘಟನೆ ನಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜ್ ಹಾಗೂ ಸಾಗರ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದರು.
ಪ್ರಕರಣ ಭೇದಿಸುವುದು ಆರಂಭದಲ್ಲಿ ಪೊಲೀಸರಿಗೆ ತಲೆ ನೋವಾಗಿತ್ತು. ಕೊಲೆ ಏಕೆ ನಡೆದಿದೆ ಎಂಬ ಅನುಮಾನ ಕಾಡಲಾರಂಭಿಸಿತ್ತು. ಕೊಲೆಯಾದವರು ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದವರು. ಅಷ್ಟೊಂದು ಸ್ಥಿತಿವಂತರಲ್ಲ. ಜೊತೆಗೆ ಕೊಲೆ ಮಾಡಿದ ನಂತರ ಮನೆಯಿಂದ ಯಾವ ವಸ್ತುವನ್ನು ತೆಗೆದುಕೊಂಡು ಹೋಗಿಲ್ಲ. ಅಲ್ಲದೇ ಮನೆಯಲ್ಲಿಯೇ ಇದ್ದ ಹತ್ಯೆಯಾದ ಪ್ರವೀಣನ ಪತ್ನಿ ಹಾಗೂ ಆತನ ಮಗುವನ್ನು ಏನೂ ಮಾಡಿಲ್ಲ. ಹೀಗಿರುವಾಗ ಕೊಲೆ ಏಕೆ ನಡೆದಿದೆ ಎಂಬುದು ಪೊಲೀಸರಿಗೆ ಯಕ್ಷ ಪ್ರಶ್ನೆಯಾಗಿತ್ತು. ಹೀಗಾಗಿ ಈ ಪ್ರಕರಣ ಭೇದಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಾಂತರಾಜ್ ಅವರು ವಿಶೇಷ ಪೊಲೀಸ್ ತಂಡ ರಚಿಸಿದ್ದರು. ಪೊಲೀಸರು ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸಿದ್ದರು. ಮೊದಲಿಗೆ ಹತ್ಯೆಯಾದ ಪ್ರವೀಣನ ಪತ್ನಿ ರೋಹಿಣಿ ಮೇಲೆಯೇ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದರು. ಈಕೆಗೆ ಏನಾದರೂ ಬೇರೆ ಸಂಬಂಧ ಇದೆಯಾ? ಇದಕ್ಕಾಗಿ ಏನಾದರೂ ಕೊಲೆ ನಡೆದಿದೆಯಾ? ಎಂದು ವಿಚಾರಣೆ ನಡೆಸಿದ್ದರು. ಪ್ರವೀಣನ ಪತ್ನಿಗೆ ಆ ರೀತಿ ಯಾವುದೇ ಸಂಬಂಧ ಇರಲಿಲ್ಲ, ಕೊಲೆ ಮಾಡಿಲ್ಲ ಎಂಬುದು ಬಳಿಕ ತಿಳಿಯಿತು.
ಪ್ರಕರಣದ ಬೆನ್ನತ್ತಿದ್ದ ಪೊಲೀಸರಿಗೆ ತನಿಖೆ ವೇಳೆ ಈ ಕೊಲೆಗೆ ಬೇರೆಯದ್ದೇ ವಿಷಯ ಇದೆ ಎಂಬ ಮಾಹಿತಿ ದೊರೆಯಿತು. ಕೊಲೆಯಾದ ಪ್ರವೀಣನಿಗೆ ನೆರೆ ಮನೆ ನಿವಾಸಿಯಾದ ಶೃತಿ ಜೊತೆ ಪ್ರೀತಿ ಇತ್ತು. ಆದರೆ ಪ್ರವೀಣ ಶೃತಿಗೆ ಕೈಕೊಟ್ಟು ರೋಹಿಣಿಯನ್ನು ವಿವಾಹವಾಗಿ ಸಂಸಾರ ನಡೆಸುತ್ತಿದ್ದ. ಇದಕ್ಕೆ ಶೃತಿ ಪ್ರವೀಣನ ವಿರುದ್ಧ ಕೋಪಗೊಂಡಿದ್ದಳು. ನಂತರ ಶೃತಿ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಳು. ಈ ವೇಳೆ ಶೃತಿಗೆ ಭರತ್ ಎಂಬ ಯುವಕನ ಪರಿಚವಾಗಿದೆ. ಇಬ್ಬರ ಪರಿಚಯ, ಗೆಳೆತನ ನಂತರ ಪ್ರೀತಿಯಾಗಿ ಮಾರ್ಪಟ್ಟಿದೆ. ಮಾಜಿ ಪ್ರಿಯಕರ ಪ್ರವೀಣನಿಂದ ತನಗಾದ ಅನ್ಯಾಯವನ್ನು ಹೊಸ ಪ್ರಿಯಕರ ಭರತ್ ನ ಬಳಿ ಶೃತಿ ನಿವೇದಿಸಿಕೊಂಡಿದ್ದಾಳೆ. ಅಲ್ಲದೆ ಮೊದಲು ಪ್ರವೀಣ್ ಹಾಗೂ ಶೃತಿ ಪ್ರೀತಿ ಮಾಡುತ್ತಿದ್ದ ಸಂದರ್ಭದ ಇಬ್ಬರ ಖಾಸಗಿ ವಿಡಿಯೋ ಪ್ರವೀಣ್ ಬಳಿ ಇತ್ತು. ವಿಡಿಯೋ ಇಟ್ಟುಕೊಂಡು ಪ್ರವೀಣ್ ಬೆದರಿಕೆ ಹಾಕುತ್ತಿದ್ದ. ಹೀಗಾಗಿ ಶೃತಿ ತನ್ನ ಹೊಸ ಪ್ರಿಯತಮ ಭರತ್ ನ ಸಹಾಯ ಪಡೆದು ಆತನಿಂದಲೇ ಪ್ರವೀಣ್ ಹಾಗೂ ಆತನ ತಾಯಿ ಬಂಗಾರಮ್ಮ ಇಬ್ಬರನ್ನು ಕೊಲೆ ಮಾಡಿಸಿದ್ದಾಳೆ ಎಂಬುದು ತನಿಖೆ ವೇಳೆ ತಿಳಿದಿದೆ.
ಆರೋಪಿ ಭರತ್ ನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಬಳಿಕ ಪೊಲೀಸರು ಆರೋಪಿ ಭರತ್ ನನ್ನು ಮಹಜರ್ ನಡೆಸಲು ಸ್ಥಳಕ್ಕೆ ಕರೆದುಕೊಂಡು ಹೋಗಿದ್ದರು. ಮಹಜರ್ ನಡೆಸಿ ವಾಪಸ್ ಬರುವ ವೇಳೆ ಆರೋಪಿ ಭರತ್ ಮೂತ್ರ ವಿಸರ್ಜನೆ ಮಾಡುವುದಾಗಿ ಪೊಲೀಸರ ಬಳಿ ಹೇಳಿ ಜೀಪಿನಿಂದ ಕೆಳಗಡೆ ಇಳಿದು ಹೋಗಿದ್ದಾನೆ. ಪೊಲೀಸ್ ಕಾನ್ಸ್‍ಟೇಬಲ್ ಒಬ್ಬರು ಸಹ ಈತನನ್ನು ಹಿಂಬಾಲಿಸಿದ್ದರು. ಆರೋಪಿ ಭರತ್ ಪೊಲೀಸರನ್ನು ತಳ್ಳಿ ಹಲ್ಲೆ ಮಾಡಿ ತಪ್ಪಿಸಿಕೊಂಡು ಹೋಗಲು ಯತ್ನಿಸಿದ್ದಾನೆ. ಈ ವೇಳೆ ಸ್ಥಳದಲ್ಲಿಯೇ ಇದ್ದ ಡಿಸಿಆರ್ ಬಿ ಇನ್ಸ್ ಪೆಕ್ಟರ್ ಕುಮಾರ್ ಸ್ವಾಮಿ ಅವರು ಆರೋಪಿ ಭರತ್ ನ ಬಲಗಾಲಿಗೆ ಗುಂಡು ಹಾರಿಸಿದ್ದಾರೆ. ಘಟನೆಯಿಂದ ಗಾಯಗೊಂಡಿರುವ ಆರೋಪಿ ಭರತ್ ಗೆ ಸಾಗರ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.
Comments are closed.