ಬೆಂಗಳೂರು: ವಿಧಾನ ಪರಿಷತ್ತಿಗೆ ಆಯ್ಕೆಯಾಗಿರುವ ಎಚ್ ವಿಶ್ವನಾಥ್, ಆರ್ ಶಂಕರ್ ಹಾಗೂ ಎಂಟಿಬಿ ನಾಗರಾಜು ಅವರಿಗೆ ಸಚಿವ ಸ್ಥಾನ ನೀಡಿದಲ್ಲಿ ಅದು ನ್ಯಾಯಾಲಯದ ಅಂತಿಮ ತೀರ್ಪಿಗೆ ಒಳಪಟ್ಟಿರಲಿದೆ ಎಂದು ಹೈಕೋರ್ಟ್ ಬುಧವಾರ ಮಧ್ಯಂತರ ಆದೇಶ ಹೊರಡಿಸಿದೆ.
ಮೂವರು ನೂತನ ಎಂಎಲ್ಸಿಗಳಿಗೆ ಸಚಿವ ಸ್ಥಾನ ನೀಡದಂತೆ ನಿರ್ದೇಶನ ನೀಡಬೇಕೆಂದು ಕೋರಿ ವಕೀಲ ಎ ಹರೀಶ್ ಹಾಗೂ ಮತ್ತಿತರರು ಸಲ್ಲಿಸಿದ್ದ ಪಿಐಎಲ್ ಕುರಿತು ಸಿಜೆ ಎಎಸ್ ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಅಂತಿಮ ವಿಚಾರಣೆಯನ್ನು ನ.19ಕ್ಕೆ ಮುಂದೂಡಿತು.
ಅರ್ಜಿದಾರರ ಪರ ವಾದಿಸಿದ ಸುಪ್ರೀಂ ಕೋರ್ಟ್ ಹಿರಿಯ ನ್ಯಾಯವಾದಿ ಪ್ರಶಾಂತ್ ಭೂಷಣ್, “ಈ ಮೂವರಿಗೆ ಶೀಘ್ರದಲ್ಲೇ ಸಚಿವ ಸ್ಥಾನ ನೀಡುವ ಸಾಧ್ಯತೆ ಇದೆ ಎಂಬ ಮಾಹಿತಿ ಇದೆ. ಅನರ್ಹರಾದವರು ಮರು ಆಯ್ಕೆಯಾಗಲು ಮಾತ್ರ ಅವಕಾಶವಿದೆ. ಆದರೆ ಎಚ್ ವಿಶ್ವನಾಥ್ ನಾಮನಿರ್ದೇಶಿತ ಶಾಸಕರಾಗಿದ್ದು ಆಯ್ಕೆಯೇ ಸಂವಿಧಾನ ಬಾಹಿರವಾಗಿದೆ. ಎಂಟಿಬಿ ನಾಗರಾಜ್, ಆರ್ ಶಂಕರ್ ಚುನಾವಣೆಯಲ್ಲಿ ಸ್ಪರ್ಧಿಸದೆ ಹಿಂಬಾಗಿಲಿನಿಂದ ಆಯ್ಕೆಯಾಗಿದ್ದಾರೆ. ಇದೀಗ ಸಚಿವ ಸ್ಥಾನ ನೀಡಲಾಗುತ್ತಿದೆ. ಈ ಕುರಿತ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸರಕಾರ ಅನಗತ್ಯ ವಿಳಂಬ ಮಾಡುತ್ತಿದೆ. ಹಾಗಾಗಿ ಸೂಕ್ತ ಮಧ್ಯಂತರ ಆದೇಶ ನೀಡಬೇಕು,” ಎಂದು ಕೋರಿದರು.
ಎಚ್ ವಿಶ್ವನಾಥ್ ಪರ ವಕೀಲ ಅಶೋಕ್ ಹಾರನಹಳ್ಳಿ, “ಸಂವಿಧಾನದ ಶೆಡ್ಯೂಲ್ ಹತ್ತರಲ್ಲಿ ಸಚಿವರಾಗಲು ಶಾಸಕರಾಗಿರಬೇಕೆಂದು ಸ್ಪಷ್ಟವಾಗಿ ಹೇಳಲಾಗಿದೆ. ಅದರಂತೆ ವಿಧಾನ ಪರಿಷತ್ ಸದಸ್ಯರು ಸಚಿವರಾಗಬಹುದು. ಯಾವ ನಿಯಮವೂ ಉಲ್ಲಂಘನೆಯಾಗಿಲ್ಲ,” ಎಂದರು.
ಇದಕ್ಕೆ ನ್ಯಾಯಪೀಠ, “ಸರಕಾರ ವಿಳಂಬ ಮಾಡದೆ ಆಕ್ಷೇಪಣೆ ಸಲ್ಲಿಸಬೇಕು ಹಾಗೂ ಆಯ್ಕೆ ಸಂಬಂಧಿತ ಕಡತಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಬೇಕು,” ಎಂದು ಸರಕಾರಿ ವಕೀಲರಿಗೆ ಸೂಚಿಸಿತು.
Comments are closed.