ಬೆಂಗಳೂರು: ಕೌಟುಂಬಿಕ ಕಲಹ ವಿಚಾರವಾಗಿ ಬೆಸ್ಕಾಂ ಮಹಿಳಾ ಉದ್ಯೋಗಿಯಾದ ಹೆಂಡತಿಯ ಸಹೋದರಿಯನ್ನು ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ವರದಿಯಾಗಿದೆ.
ರಾಮಮೂರ್ತಿನಗರದ ಮುತ್ತು ಮಾರಿಯಮ್ಮ ದೇಗುಲ ಸಮೀಪದಲ್ಲಿ ನೆಲೆಸಿದ್ದ ಲಾವಣ್ಯ(37) ಕೊಲೆಯಾದ ಮಹಿಳೆ. ಲಾವಣ್ಯ ಸಹೋದರಿಯ ಪತಿ ವಿಜಯ್ ಎಂಬಾತ ಕೊಲೆ ಮಾಡಿ ನಂತರ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆತ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಬೆಸ್ಕಾಂನಲ್ಲಿ ಕ್ಲರ್ಕ್ ಆಗಿದ್ದ ಲಾವಣ್ಯ ಅವರ ಸಹೋದರಿಯನ್ನು ವಿವಾಹವಾಗಿದ್ದ ವಿಜಯ್, ಯಾವುದೇ ಕೆಲಸ ಇಲ್ಲದೇ ಓಡಾಡಿಕೊಂಡಿದ್ದ. ಕಳೆದ ಕೆಲ ತಿಂಗಳಿಂದ ಪತ್ನಿಗೆ ಕಿರುಕುಳ ನೀಡುತ್ತಿದ್ದ.
ಈ ಹಿನ್ನೆಲೆಯಲ್ಲಿ ವಿಜಯ್ ವಿರುದ್ಧ ಬಸವನಗುಡಿ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ತನ್ನ ವಿರುದ್ಧ ದೂರು ದಾಖಲಾಗಲು ಪತ್ನಿ ಸಹೋದರಿ ಲಾವಣ್ಯ ಕಾರಣವೆಂದು ತಿಳಿದು ದೂರು ವಾಪಸ್ ಪಡೆಯುವಂತೆ ಒತ್ತಡ ಹಾಕುತ್ತಿದ್ದ. ಭಾನುವಾರ ಇದೇ ವಿಚಾರವಾಗಿ ಮಾತನಾಡಲು ಲಾವಣ್ಯ ಅವರ ಮನೆಗೆ ವಿಜಯ್ ತೆರಳಿದ್ದ. ಬೆಳಗ್ಗೆ 10 ಗಂಟೆ ಸುಮಾರಿಗೆ ಮಾತನಾಡುವ ವೇಳೆ ಜಗಳವಾಗಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ.
ಆಗ ಮನೆಯಲ್ಲಿದ್ದ ಚಾಕು ತೆಗೆದುಕೊಂಡು ಲಾವಣ್ಯಗೆ ಇರಿದ ಆರೋಪಿ, ನಂತರ ಚಾಕುವಿನಿಂದ ಇರಿದುಕೊಂಡು ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.