ತುಮಕೂರು: ಗಂಡನೊಬ್ಬ ತನ್ನ ಹೆಂಡತಿಯನ್ನು ದೊಣ್ಣೆಯಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ತುಮಕೂರು ಜಿಲ್ಲೆ ಕೊರಟಗೆರೆಯಲ್ಲಿ ನಡೆದಿದೆ.
ಮೃತಪಟ್ಟ ಮಹಿಳೆಯನ್ನು 32 ವರ್ಷದ ಹಜರತ್ ಭಾನು ಎಂದು ಗುರುತಿಸಲಾಗಿದೆ. ಆರೋಪಿ ಪತಿಯನ್ನು ಚಾಂದ್ ಪಾಷಾ ಎಂದು ಗುರುತಿಸಲಾಗಿದ್ದು, ಈಗ ಆತ ಪೊಲೀಸರ ವಶದಲ್ಲಿದ್ದಾನೆ.
ಚಾಂದ್ ಪಾಷಾಗೆ ಈ ಮೊದಲೇ ಒಂದು ಮದುವೆಯಾಗಿದ್ದು, ಮೊದಲ ಪತ್ನಿಯನ್ನೂ ಈತನೇ ಸಾಯಿಸಿ, ಬಳಿಕ ಗ್ಯಾಸ್ ಸ್ಟೌವ್ ಸ್ಪೋಟವಾಗಿದೆ ಅನ್ನೋ ನಾಟಕವಾಡಿದ್ದ ಅಂತಾ ಕುಟುಂಬಸ್ಥರು ಆರೋಪಿಸಿದ್ದಾರೆ. ಈಗ ಮೊದಲ ಪತ್ನಿಯ ಮಗಳ ಮದುವೆಗೆ ಅಂತಾ ನಿವೇಶನ ಮಾರಲು ಹೊಂಚು ಹಾಕಿದ್ದ ಚಾಂದ್ ಪಾಷಾ ಗೆ ಎರಡನೇ ಪತ್ನಿ ಹಜರತ್ ಭಾನು ಸಹಿ ಹಾಕಿರಲಿಲ್ಲ. ಇದೇ ವಿಚಾರವಾಗಿ ಕಳೆದ ಕೆಲ ದಿನಗಳಿಂದ ಚಾಂದ್ ಪಾಷಾ ಹಾಗೂ ಹಜರತ್ ಭಾನು ನಡುವೆ ಜಗಳ ನಡೆಯುತ್ತಿತ್ತು.
ಗಂಡ-ಹೆಂಡತಿ ನಡುವೆ ಮನಸ್ತಾಪ ಹೆಚ್ಚಾಗಿ, ತಡರಾತ್ರಿ ಮನೆಯಲ್ಲಿ ಮಲಗಿದ್ದ ಹೆಂಡತಿ ಹಜರತ್ ಭಾನು ಮತ್ತು ಮಗ ಮಹಮ್ಮದ್ ಅಲಿ ಮೇಲೆ ಆರೋಪಿ ಚಾಂದ್ ಪಾಷಾ ದೊಣ್ಣೆಯಿಂದ ಭೀಕರವಾಗಿ ಹಲ್ಲೆ ನಡೆಸಿದ್ದಾನೆ. ಹಲ್ಲೆಯ ರಭಸಕ್ಕೆ ಪತ್ನಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ, ಪುತ್ರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪರಿಸ್ಥಿತಿ ಗಂಭೀರವಾಗಿದೆ.
ಆರೋಪಿ ಚಾಂದ್ ಪಾಷಾನನ್ನ ಕೊರಟಗೆರೆ ಪೊಲೀಸರು ಬಂಧಿಸಿದ್ದು, ವಿಚಾರಣೆ ಮುಂದುವರೆಸಿದ್ದಾರೆ. ಬೆಳ್ಳಂಬೆಳಗ್ಗೆ ನಡೆದ ಮಹಿಳೆಯ ಕೊಲೆ ಕೊರಟಗೆರೆ ಜನತೆಯನ್ನು ಬೆಚ್ಚಿ ಬೀಳಿಸಿದೆ. ಪತ್ನಿಯ ಜೊತೆ ಮಲಗಿದ್ದ ಮಗನನ್ನೂ ಕರುಣೆ ಇಲ್ಲದೇ ಕೊಲೆ ಮಾಡಲು ಯತ್ನಿಸಿದ್ದ ಪಾಪಿ ತಂದೆಗೆ ತಕ್ಕ ಶಿಕ್ಷೆಯಾಗಬೇಕಿದೆ.
Comments are closed.