ಮಂಡ್ಯ: ಮಂಡ್ಯದ ಪಾಂಡವಪುರ ಪೊಲೀಸರು ಐದು ವರ್ಷದ ಕೊಲೆ ಪ್ರಕರಣ ಭೇದಿಸುವಲ್ಲಿ ಕಡೆಗೂ ಯಶ ಸ್ವಿಯಾಗಿದ್ದಾರೆ. 5 ವರ್ಷದ ಹಿಂದೆ ಪತ್ನಿಯನ್ನೇ ಕೊಲೆ ಗೈದು ಊರಿನಲ್ಲಿ ಓಡಾಡಿಕೊಂಡಿದ್ದ ಪತಿಯನ್ನು ಬಂಧಿಸಿ ಜೈಲಿಗೆ ಅಟ್ಟುವ ಮೂಲಕ ನಿಗೂಢವಾಗಿ ನಾಪತ್ತೆ ಯಾಗಿದ್ದ ದಲಿತ ಯುವತಿ ಮೇಘಶ್ರೀ ಪ್ರಕರಣವನ್ನು ಭೇಧಿಸಿ ಸಾವಿಗೆ ನ್ಯಾಯ ಕೊಡಿ ಸಿದ್ದಾರೆ. ಹೌದು, ಇತ್ತೀಚೆಗೆ ಮಂಡ್ಯ ಜಿಲ್ಲೆಯಲ್ಲಿ ದಲಿತ ಯುವತಿ ಮೇಘಶ್ರೀಯ ಪ್ರಕರಣ ಸಾಕಷ್ಟು ಸದ್ದು ಮಾಡಿತ್ತು. ಗಂಡನ ಮನೆಯಲ್ಲಿದ್ದ ತನ್ನ ಮಗಳು ನಿಗೂಢವಾಗಿ ನಾಪತ್ತೆಯಾಗಿದ್ದಾಳೆ ಹುಡುಕಿಕೊಡಿ ಎಂದು ಮೇಘಶ್ರೀ ತಾಯಿ ಮಹದೇವಮ್ಮ ಮಂಡ್ಯ ಜಿಲ್ಲೆಯ ಪೊಲೀಸ್ ಎಸ್ಪಿ ಸೇರಿ ಮಹಿಳಾ ಆಯೋಗಕ್ಕೆ ದೂರುಕೊಟ್ಟಿದ್ದರು.
ಅಲ್ಲದೆ ಮಗಳನ್ನು ಗಂಡನ ಮನೆಯವರು ಕೊಲೆ ಮಾಡಿರಬೇಕೆಂಬ ಅನುಮಾನ ವ್ಯಕ್ತಪಡಿಸಿದ್ದರು. ಇದು ಜಿಲ್ಲೆಯಲ್ಲಿ ಮರ್ಯಾದೆ ಹತ್ಯೆ ಪ್ರಕರಣ ಎಂದು ಕೂಡ ಹೇಳಲಾಗಿತ್ತು. ದಲಿತ ಯುವತಿ ಆಗಿದ್ದ ಮೇಘಶ್ರೀಯನ್ನು ಸವರ್ಣೀಯ ಯುವಕನಾಗಿದ್ದ ಪಾಂಡವಪುರ ತಾಲೂಕಿನ ಸ್ವಾಮಿಗೌಡ ಎಂಬಾತ ಕಳೆದ ಐದು ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದ. ಅಲ್ಲದೆ ತನ್ನೂರಿಗೆ ಈಕೆಯನ್ನು ಕರೆ ತಂದಿದ್ದ. ಕೊಲೆಯಾದ ಮೇಘಶ್ರೀ ಅಂದಿನಿಂದ ಕುಟುಂಬದ ಸಂಪರ್ಕ ಕಳೆದು ಕೊಂಡಿದ್ದಳು. ಮಗಳ ಬಗ್ಗೆ ಮಾಹಿತಿ ಸಿಗದೆ ಮೇಘಶ್ರೀ ತಾಯಿ ಅಲ್ಲಿ ಇಲ್ಲಿ ಹುಡಿಕಿ ಬಳಿಕ ಸುಮ್ಮನಾಗಿದ್ದರು.
ಆರು ತಿಂಗಳ ಬಳಿಕ ಒಮ್ಮೆ ಅಕ್ಕನ ಮದುವೆಗೆಂದು ಊರಿಗೆ ಬಂದಿದ್ದ ಮೇಘಶ್ರಿ ತಾನು ಪ್ರೀತಿಸಿ ಮದುವೆಯಾಗಿರುವುದಾಗಿ ಗಂಡನನ್ನು ಪರಿಚಯಿಸಿ ಹೇಳಿ ಹೋಗಿದ್ದಳು. ಆದರೆ ಎಲ್ಲಿದ್ದೇನೆಂಬ ವಿಳಾಸ ಮಾತ್ರ ಹೇಳಿರಲಿಲ್ಲ. ಇನ್ನು ಅದಾದ ಬಳಿಕ ಮಗಳು ಸುಳಿವೇ ಇರಲಿಲ್ಲ. ಮಗಳ ಫೋನ್ ನಂಬರ್ ಕೂಡ ಸಂಪರ್ಕ ಕಡಿದು ಕೊಂಡಿತ್ತು. ಇದರಿಂದ ಕಂಗಾಲಾಗಿದ್ದ ತಾಯಿಗೆ ಇತ್ತೀಚೆಗೆ ಮನೆ ಸ್ವಚ್ಚಗೊಳಿಸುವಾಗ ಮಗಳ ಗಂಡನ ವೋಟರ್ ಐಡಿ ಕಾರ್ಡ್ ಸಿಕ್ಕಿದ್ದು, ಅಲ್ಲಿರುವ ವಿಳಾಸಕ್ಕೆ ಹೋಗಿ ವಿಚಾರಿಸಿದಾಗ ತನ್ನ ಮಗಳು ಬದುಕಿರದ ಬಗ್ಗೆ ಒಂದಿಷ್ಟು ಮಾಹಿತಿ ಸಿಕ್ಕಿತ್ತಾದರೂ ಸಾಕ್ಷ್ಯ ಇರಲಿಲ್ಲ.
ಮೊದಲು ಪಾಂಡವಪುರ ಠಾಣೆಗೆ ದೂರು ನೀಡಿದರೂ ಸಾಕ್ಷ್ಯ ಇಲ್ಲದ ಕಾರಣಕ್ಕೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರಲಿಲ್ಲ. ಕಡೆಗೆ ದಲಿತ ಸಂಘಟನೆಗಳು ಈ ಬಗ್ಗೆ ಪ್ರತಿಭಟನೆ ಹೋರಾಟ ಮತ್ತು ಮರ್ಯಾದೆ ಹತ್ಯೆಯ ಬಗ್ಗೆ ಅರೋಪ ಮಾಡುತ್ತಿದ್ದ ಕಾರಣ ಪಾಂಡವವುರ ಪೊಲೀಸರು ಎಚ್ಚೆತ್ತು ಆರೋಪಿಯನ್ನು ಠಾಣೆಗೆ ಕರೆ ತಂದು ವಿಚಾರಣೆ ನಡೆಸಿದ್ದಾರೆ.
ಈ ವೇಳೆ ಆರೋಪಿ ಸ್ವಾಮಿಗೌಡ ಸತ್ಯ ಬಾಯ್ಬಿಟ್ಟಿದ್ದಾನೆ. ಐದು ವರ್ಷದ ಹಿಂದೆಯೇ ಮೇಘಶ್ರೀಯನ್ನು ಕೊಲೆ ಮಾಡಿ ಶವವನ್ನು ವಿಸಿ ನಾಲೆಗೆ ಎಸೆದಿದ್ದರ ಬಗ್ಗೆ ಮಾಹಿತಿ ನೀಡಿದ್ದಾನೆ. ಆರೋಪಿಯ ಮಾಹಿತಿ ಆಧರಿಸಿ ಪಾಂಡವಪುರ ಪೊಲೀಸರು ತಮ್ಮ ಠಾಣೆಯಲ್ಲಿ ದಾಖಲಾಗಿದ್ದ ಅಪರಿಚಿತ ಶವದ ಮಾಹಿತಿ ಕಲೆ ಹಾಕಿದಾಗ ಐದು ವರ್ಷದ ಹಿಂದೆ ನಾಲೆಯಲ್ಲಿ ಅಪರಿಚಿತ ಯುವತಿ ಶವ ಸಿಕ್ಕಿದ್ದ ಮಾಹಿತಿ ಇದ್ದು, ಪೊಲೀಸರೇ ಆ ಶವವನ್ನು ಅಂತ್ಯ ಸಂಸ್ಕಾರ ಮಾಡಿದ್ದ ಬಗ್ಗೆ ದಾಖಲೆ ಇದ್ದಿದ್ದರಿಂದ ಆರೋಪಿ ಪತಿಯನ್ನು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ.
ಒಟ್ಟಾರೆ ಈ ಮೂಲಕ ಮಂಡ್ಯದಲ್ಲಿ ಸಾಕಷ್ಟು ಸಂಚಲನ ಮೂಡಿಸಿದ್ದ ದಲಿತ ಯುವತಿ ಮೇಘಶ್ರೀ ನಾಪತ್ತೆ ಪ್ರಕರಣವನ್ನು ಪಾಂಡವಪುರ ಪೊಲೀಸರು ಭೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೆ ಪ್ರೀತಿಸಿ ಮದುವೆಯಾಗಿದ್ದ ಪತ್ನಿಯನ್ನು ಕೊಲೆಗೈದು ಊರಿನಲ್ಲಿ ಆರಾಮಾವಾಗಿ ಓಡಾಡಿಕೊಂಡಿದ್ದ ಆರೋಪಿ ಪತಿಯನ್ನು ಬಂಧಿಸುವ ಮೂಲಕ ಮೇಘಶ್ರೀ ಸಾವಿಗೆ ನ್ಯಾಯ ಕೊಡಿಸಿದ್ದಾರೆ.
Comments are closed.