ಬೆಂಗಳೂರು: ವಿಧಾನಮಂಡಲ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲ ವಜುಬಾಯಿ ವಾಲಾ ಭಾಷಣ ಆರಂಭಿಸುತ್ತಿದ್ದಂತೆಯೇ ಕಾಂಗ್ರೆಸ್ ಸದಸ್ಯರು ಬೆಳಗಾವಿಯಲ್ಲಿ ಅಧಿವೇಶನ ನಡೆಸದ ಸರ್ಕಾರದ ವಿರುದ್ಧ ಭಿತ್ತಿಪತ್ರ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.
ಉತ್ತರ ಕರ್ನಾಟಕ ನಿರ್ಲಕ್ಷ್ಯ, ಬೆಳಗಾವಿಯಲ್ಲಿ ಅಧಿವೇಶನ ನಡೆಸಿ ಮುಂತಾದ ಭಿತ್ತಿಪತ್ರ ಪ್ರದರ್ಶಿಸಿ ರಾಜ್ಯಪಾಲರ ಭಾಷಣದ ವೇಳೆ ಕಾಂಗ್ರೆಸ್ ಸದಸ್ಯರು ಘೋಷಣೆ ಕೂಗಿದರು. ಕೆಲವು ಹೊತ್ತು ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಸದಸ್ಯರು ಬಳಿಕ ಭಾಷಣ ಆಲಿಸಿದರು.
ಭಾಷಣ ಆರಂಭಿಸಿದ ರಾಜ್ಯಪಾಲರು ಅಗಲಿದ ನಾಯಕರಿಗೆ ಸಂತಾಪ ಸೂಚಿಸಿದರು. ಬಳಿಕ ಭಾಷಣವನ್ನು ಮುಂದವರೆಸಿ, ಕೊರೊನಾ ವಿರುದ್ಧ ರಾಜ್ಯದ ಜನರು ಹೋರಾಡಿದ್ದಾರೆ. ಕೊರೊನಾ ವಿರುದ್ಧದ ಹೋರಾಟದಲ್ಲಿ ಸರ್ಕಾರ ಯಶಸ್ವಿ ಕಂಡಿದೆ. ಸರ್ಕಾರದ ನಿಯಮಗಳನ್ನ ಜನ ಅಚ್ಚುಕಟ್ಟಾಗಿ ಪಾಲಿಸಿದ್ದಾರೆ. ರಾಜ್ಯದಲ್ಲಿರೋ ಕೊರೊನಾ ವಾರಿಯರ್ಸ್‌ಗೆ ಧನ್ಯವಾದ. ಕೊರೊನಾಗೆ ಬಲಿಯಾದ ವಾರಿಯರ್ಸ್‌ಗೆ 30 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಲಾಗಿದೆ ಎಂದು ಹೇಳಿದರು.
ವೈದ್ಯಕೀಯ ಕ್ಷೇತ್ರದಲ್ಲಿ ರಾಜ್ಯ ಮುಂಚೂಣಿಯಲ್ಲಿದೆ. ರಾಜ್ಯದ ಆಸ್ಪತ್ರೆಗಳನ್ನು ಸಾಕಷ್ಟು ಅಭಿವೃದ್ಧಿ ಮಾಡಲಾಗಿದೆ ಜೊತೆಗೆ ಲಾಕ್ಡೌನ್ ವೇಳೆ ಜನರಿಗೆ ಸಾಕಷ್ಟು ವ್ಯವಸ್ಥೆ ಮಾಡಲಾಗಿದೆ. ಜನರಿಗೆ ಸಮಸ್ಯೆ ಆಗದಂತೆ ಸರ್ಕಾರ ಕ್ರಮ ಕೈಗೊಂಡಿತ್ತು. ಸಂಕಷ್ಟದಲ್ಲಿದ್ದ ಜನರಿಗೆ ನಮ್ಮ ಸರ್ಕಾರ ಪರಿಹಾರ ಕಲ್ಪಿಸಿತ್ತು.
ರಾಜ್ಯ ಸರ್ಕಾರ ರೈತರ ಕಲ್ಯಾಣಕ್ಕೆ ಹಲವು ಯೋಜನೆಗಳನ್ನು ನೀಡಿದೆ. ರಾಜ್ಯದಲ್ಲಿ ಉದ್ಯೋಗ ಸೃಷ್ಟಿ ಪ್ರಮಾಣ ಹೆಚ್ಚಾಗುತ್ತಿದೆ. ವಿದ್ಯುತ್ ಉತ್ಪಾದನೆಯಲ್ಲಿ ಅಭಿವೃದ್ಧಿ ಸಾಧಿಸಿದ್ದೇವೆ. ಫಸಲ್ ಬಿಮಾ ಯೋಜನೆ ಅನುಷ್ಠಾನದಲ್ಲಿ ಯಶಸ್ವಿಯಾಗಿದ್ದೇವೆ ಎಂದು ವಿಧಾನ ಮಂಡಲ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲ ವಿ.ಆರ್ ವಾಲಾ ಮಾತನಾಡಿದರು.
80 ಲಕ್ಷಕ್ಕಿಂತ ಹೆಚ್ಚು ಆರ್’ಟಿ-ಪಿಸಿಆರ್ ಪರೀಕ್ಷೆ ಮಾಡಲಾಗಿದೆ. ದೇಶದಲ್ಲಿಯೇ ಅತಿ ಹೆಚ್ಚು ಕೋವಿಡ್ ಪರೀಕ್ಷೆ ಮಾಡಲಾಗಿದೆ. 1.36 ಲಕ್ಷ ಕೊರೊನಾ ಸೋಂಕಿತರಿಗೆ ಉಚಿತ ಚಿಕಿತ್ಸೆ ನೀಡಲಾಗಿದೆ.ರೂ. 248 ಕೋಟಿ ವೆಚ್ಚದಲ್ಲಿ ಉಚಿತ ಚಿಕಿತ್ಸೆ ನೀಡಲಾಗಿದೆ.
ದಾಸೋಹ ಯೋಜನೆಯಡಿ ಉಚಿತವಾಗಿ ಪಡಿತರ ವಿತರಣೆ ಮಾಡಲಾಗಿದೆ. 8,919 ಕುಟಂಬಗಳಿಗೆ ಉಚಿತವಾಗಿ 10 ಕೆಜಿ ಅಕ್ಕಿ, 5 ಕೆಜಿ ಗೋಧಿ ವಿತರಣೆ ಮಾಡಲಾಗಿದೆ. ಆಟೋ ಚಾಲಕರು, ಮಡಿವಾಳರಿಗೆ ಹಣಕಾಸು ನೆರವು ನೀಡಲಾಗಿದೆ. 63,59,000 ಫಲಾನುಭವಿಗಳಿಗೆ ಹಣಕಾಸು ನೆರವು ಹಾಗೂ ರೂ. 5,372 ಕೋಟಿ ನೀಡಲಾಗಿದೆ.
16.45 ಲಕ್ಷ ಕಾರ್ಮಿಕರಿಗೆ ರೂ.824 ಕೋಟಿ ನೀಡಲಾಗಿದೆ. 11,770 ಚರ್ಮ ಕುಶಲ ಕರ್ಮಿಗಳಿಗೆ ತಲಾ ರೂ.5 ಸಾವಿರ ಧನ ಸಹಾಯ ಮಾಡಲಾಗಿದೆ. ಕಿಸಾನ್ ಸಮ್ಮಾನ್ ಯೋಜನೆಯಡಿ 51 ಲಕ್ಷ ರೈತರಿಗೆ ತಲಾ 2,000 ಹೆಚ್ಚುವರಿ ಹಣ ನೀಡಿದ್ದೇವೆ. ಇದಕ್ಕಾಗಿ ಒಟ್ಟು ರೂ. 1,020 ಕೋಟಿ ನೀಡಲಾಗಿದೆ. ರಾಜ್ಯ ಸರ್ಕಾರ ಕನಿಷ್ಠ ಬೆಂಬಲ ನೀಡಿ 61,379 ಮೆಟ್ರಿಕ್ ಟನ್ ಭತ್ತ, 1.93 ಮೆಟ್ರಿಕ್ ಟನ್ ರಾಗಿ ಹಾಗೂ 9,256 ಮೆಟ್ರಿಕ್ ಟನ್ ಜೋಳ ಖರೀದಿ ಮಾಡಲಾಗಿದೆ ಎಂದು ತಿಳಿಸಿದರು.
ರಾಜ್ಯ ಸರ್ಕಾರ 17,863 ಕೊಟಿ ರೂ.ಗಳನ್ನು ಪರಿಶಿಷ್ಟ ಜಾತಿ ಹಾಗೂ 7754 ಕೊಟಿ ರೂ.ಗಳನ್ನು ಪರಿಶಿಷ್ಟ ಪಂಗಡದ ಅಭಿವೃದ್ಧಿಗಾಗಿ ನೀಡಿದೆ. ವಿವಿಧ ನಿಗಮಗಳ ಮೂಲಕ 15837 ಜನರಿಗೆ ವಿವಿಧ ಆರ್ಥಿಕ ಸೌಲಭ್ಯಗಳನ್ನು ಒದಗಿಸಲಾಗಿದೆ. ಭೂ ಒಡೆತನ ಯೋಜನೆಯಡಿಯಲ್ಲಿ 3061 ಎಕರೆ ಭೂಮಿಯನ್ನು ಖರೀದಿಸಿ ಫಲಾನುಭವಿಗಳಿಗೆ ನೀಡಲಾಗಿದೆ.
ಬೋಧನೆಯ ಗುಣಮಟ್ಟವನ್ನು ಉತ್ತಮಗೊಳಿಸಲು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವಸತಿ ಶಾಲೆಗಳಿಗೆ ಹೊಸದಾಗಿ 1021 ಬೋಧಕ ಮತ್ತು ಬೋಧಕೇತರ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಕರ್ನಾಟಕ ನಾವೀನ್ಯತೆ ಪ್ರಾಧಿಕಾರವನ್ನು ರಚಿಸಿದೆ.
ನಾವೀನ್ಯತೆಯನ್ನು ಸಂಯೋಜಿಸಲು, ಹೂಡಿಕೆಗಳನ್ನು ಉತ್ತೇಜಿಸಲು, ಕಾರ್ಯತಂತ್ರ ರೂಪಿಸಲು ಬ್ರಾಂಡಿಂಗ್ ಅನ್ನು ಹೆಚ್ಚಿಸಲು ಹಾಗೂ ಜಾಗತಿಕ ನಾವೀನ್ಯತೆ ಸಹಕಾರತ್ವವನ್ನು ಹೆಚ್ಚಿಸಲು ಹಾಗೂ ಪ್ರಸ್ತಾವಿಸಲು ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಮಾದರಿಯಲ್ಲಿ ಕರ್ನಾಟಕ ಡಿಜಿಟಲ್ ಹಣಕಾಸು ಮಿಷನ್ ರೂಪಿಸಲಾಗಿದೆ. ಬೆಂಗಳೂರಿನ ಹೊರಗೆ ಮಾಹಿತಿ ತಂತ್ರಜ್ಞಾನವನ್ನು ಉತ್ತೇಜಿಸುವುದಕ್ಕಾಗಿ ವಿಶೇಷ ಗಮನ ಕೇಂದ್ರೀಕರಿಸುವುದರೊಂದಿಗೆ ಹೊಸ ಮಾಹಿತಿ ತಂತ್ರಜ್ಞಾನ ನೀತಿ-2020-25 ಅನ್ನು ಘೋಷಿಸಿದೆ.
46,378 ಮಳೆ ನೀರು ಕೊಯ್ಲು ನಿರ್ಮಿಸಲಾಗಿದೆ. ಪ್ರಧಾನಿ ಕೃಷಿ ಸಿಂಚಾಯಿ ಯೋಜನೆಯಡಿ ನಿರ್ಮಾಣ ಮಾಡಲಾಗಿದೆ. ಮಳೆಯಾಶ್ರಿತ ಪ್ರದೇಶದ 2.76 ಲಕ್ಷ ರೈತರಿಗೆ ಅನುಕೂಲ ಮಾಡಿಕೊಟ್ಟಿದೆ. 2.10 ಕೋಟಿ ಜಮೀನುಗಳ ಬೆಳೆ ಸಮೀಕ್ಷೆ ಮಾಡಿದ್ದು, ಇದರಲ್ಲಿ 80 ಲಕ್ಷ ರೈತರೇ ಖುದ್ದು ಸಮೀಕ್ಷೆ ಮಾಡಿದ್ದಾರೆ.
32,878 ಹೆಕ್ಟೇರ್ ಪ್ರದೇಶಕ್ಕೆ ಹನಿ ನೀರಾವರಿ ಯೋಜನೆ ಮಾಡಲಾಗಿದೆ. ರಾಮನಗರ, ಚಿಕ್ಕಬಳ್ಳಾಪುರ, ಬೆಂಗಳೂರು, ಮಂಡ್ಯ, ಕೊಪ್ಪಳ, ಬೆಳಗಾವಿ, ಉಡುಪಿ ಜಿಲ್ಲೆಗಳ ಕೆರೆಗಳಿಗೆ ಸಂಸ್ಕರಿಸಿದ ನೀರು ತುಂಬುವುದಕ್ಕೆ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯಪಾಲರು ಜಂಟಿ ಅಧಿವೇಶನದಲ್ಲಿ ಮಾತನಾಡಿದರು.
Comments are closed.