ಕರ್ನಾಟಕ

ಎಲ್ಲಿವರೆಗೆ ನನಗೆ ಮೋದಿ-ಅಮಿತ್ ಶಾ ಬೆಂಬಲ ಇರುತ್ತೋ, ಅಲ್ಲಿಯವರೆಗೂ ಸಾವಿರಾರು ಕೇಸ್​ಗಳನ್ನು ಎದುರಿಸಲು ನಾನು ಸಿದ್ದ: ಯಡಿಯೂರಪ್ಪ

Pinterest LinkedIn Tumblr

ಬೆಂಗಳೂರು: ಡಿನೋಟಿಫಿಕೇಶನ್ ಆರೋಪದಲ್ಲಿ ನಾನು ಜಾಮೀನಿನ ಮೇಲಿದ್ದೇನೆ ಎಂದು ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ. ಈ ದೇಶದಲ್ಲಿ ಯಾರು ಬೇಲ್ ಮೇಲೆ ಇಲ್ಲ ಹೇಳಿ? ನಿಮ್ಮ ರಾಷ್ಟ್ರೀಯ ನಾಯಕರ ಮೇಲೆ ಆರೋಪ ಇಲ್ಲವೇ? ನಿಮ್ಮ ರಾಜ್ಯಾಧ್ಯಕ್ಷರ ಮೇಲೆ ಆರೋಪ ಇಲ್ಲವೇ? ಅವರು ಬೇಲ್ ಮೇಲೆ ಇಲ್ಲವೇ? ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿಧಾನಸಭಾ ಅಧಿವೇಶನದಲ್ಲಿ ಸಿದ್ದರಾಮಯ್ಯನವರಿಗೆ ಖಡಕ್ ಆಗಿ ಪ್ರಶ್ನಿಸಿದ್ದಾರೆ.

ಅಲ್ಲದೆ, ನಿಮ್ಮನ್ನು ವಿರೋಧ ಪಕ್ಷದ ಸ್ಥಾನದಲ್ಲೇ ಕೂರುವಂತೆ ಮಾಡಲು ನಾವು ಪಣ ತೊಟ್ಟಿದ್ದೇವೆ ಎಂದು ಸದನದಲ್ಲಿ ಶಪಥ ಮಾಡಿದ್ದಾರೆ.

ಇವತ್ತಿನ ಕಾಲದಲ್ಲಿ ಆರ್​ಟಿಐ ಮೂಲಕ ಮುಖ್ಯಮಂತ್ರಿಗಳ ಮೇಲೆ ಕೇಸ್ ಹಾಕೋದು ಸಾಮಾನ್ಯ. ನಾವು ಮನಸು ಮಾಡಿದರೆ ಯಾರ ಮೇಲೆ ಬೇಕಾದರೂ ಸುಳ್ಳು ಕೇಸ್ ಹಾಕಬಹುದು. ಆದರೆ ನಾವು ಹಾಗೆ ಮಾಡೋದಿಲ್ಲ. ಎಲ್ಲಿವರೆಗೆ ನನಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಬೆಂಬಲ ಇರುತ್ತೋ, ಕೇಂದ್ರ ಗೃಹ ಸಚಿವರ ಬೆಂಬಲ ಇರುತ್ತೋ, ಜನರ ಆಶೀರ್ವಾದ ಇರುತ್ತೋ ಅಲ್ಲಿಯವರೆಗೂ ಇಂತಹ ಸಾವಿರಾರು ಕೇಸ್​ಗಳನ್ನು ಎದುರಿಸಲು ನಾನು ಸಿದ್ದನಿದ್ದೇನೆ. ಈಗಾಗಲೇ ಇಂತಹ ಕೇಸ್​ಗಳನ್ನು ಎದುರಿಸಿ ಬಂದಿದ್ದೇನೆ. ಮುಂದೆಯೂ ಎದುರಿಸಿ, ನಾನು ಪ್ರಾಮಾಣಿಕ ಎಂದು ಸಾಬೀತು ಪಡಿಸುತ್ತೇನೆ. ಮುಂಬರುವ ಚುನಾವಣೆಯಲ್ಲಿ ನಿಮ್ಮನ್ನು ಸೋಲಿಸುತ್ತೇವೆ. ನಿಮ್ಮನ್ನು ಶಾಶ್ವತವಾಗಿ ವಿರೋಧ ಪಕ್ಷದಲ್ಲಿ ಕೂರಿಸಲು ನಾವು ಪಣ ತೊಡುತ್ತೇವೆ ಎಂದು ಸಿಎಂ ಯಡಿಯೂರಪ್ಪ ಸಿದ್ದರಾಮಯ್ಯನವರಿಗೆ ಸವಾಲು ಹಾಕಿದ್ದಾರೆ.

ರಾಜ್ಯ ವಿಧಾನಸಭಾ ಅಧಿವೇಶನದ ಕೊನೆಯ ದಿನವಾದ ಇಂದು ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಯಿತು. ಸಿಎಂ ಯಡಿಯೂರಪ್ಪ ತಮ್ಮ ಸರ್ಕಾರದ ಯೋಜನೆ, ಸಾಧನೆಗಳ ಬಗ್ಗೆ ಮಾಹಿತಿ ನೀಡಿದರು. ಆದರೆ, ಸಿಎಂ ಯಡಿಯೂರಪ್ಪನವರ ಉತ್ತರದಿಂದ ಸಮಾಧಾನಗೊಳ್ಳದ ಕಾಂಗ್ರೆಸ್ ಶಾಸಕರು ಸದನದಿಂದ ಹೊರನಡೆದ ಘಟನೆಯೂ ನಡೆಯಿತು.

ಯುಗಾದಿಯ ನಂತರ ಸಿಎಂ ಸ್ಥಾನದಿಂದ ಯಡಿಯೂರಪ್ಪ ಕೆಳಗಿಳಿಯಲಿದ್ದಾರೆ ಎಂದು ಬಿಜೆಪಿಯವರೇ ಹೇಳುತ್ತಿದ್ದಾರೆ. ಹಾಗಾದರೆ, ಯಡಿಯೂರಪ್ಪ ಯಾವಾಗ ರಾಜೀನಾಮೆ ಕೊಡ್ತಾರೆ? ಎಂದು ಸಿದ್ದರಾಮಯ್ಯ ಲೇವಡಿ ಮಾಡಿದ್ದರು. ಅದಕ್ಕೂ ತಿರುಗೇಟು ನೀಡಿರುವ ಸಿಎಂ ಯಡಿಯೂರಪ್ಪ, ಇನ್ನು 6 ತಿಂಗಳಲ್ಲ, ಎಷ್ಟೇ ವರ್ಷಗಳು ಕಳೆದರೂ ನಮ್ಮ ನಾಯಕರ ಬೆಂಬಲ ಇರೋವರೆಗೂ ಇಂತಹ ಕೇಸ್​ಗಳನ್ನು ಎದುರಿಸಲು ನಾನು ಸಿದ್ದನಿದ್ದೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನನ್ನ ಮೇಲಿನ ಡಿನೋಟಿಫಿಕೇಷನ್ ಕೇಸ್ ಸುಪ್ರೀಂ ಕೋರ್ಟ್​ನಲ್ಲಿದೆ, ರಾಜೀನಾಮೆ ಕೊಡಿ ಎಂದು ಸಿದ್ದರಾಮಯ್ಯ ಹೇಳುತ್ತಿದ್ದೀರ. ನೀವು ಅಡ್ವೋಕೇಟ್ ಆಗಿದ್ದವರು. ನಿಮಗೂ ಕೇಸ್​ಗಳ ಬಗ್ಗೆ ಗೊತ್ತಿದೆ. ಬಿಡಿಎನಲ್ಲಿ ರಿಡೂ ಎಂದು ಸಾವಿರಾರು ಎಕರೆ ಡಿನೋಟಿಫೈ ಮಾಡಿದ್ದೀರಿ. ಕಾಂಗ್ರೆಸ್ ರಾಷ್ಟ್ರೀಯ ನಾಯಕರ ಮೇಲೆ ಎಷ್ಟು ಕೇಸ್ ಇಲ್ಲ? ಹಾದಿಬೀದಿಯಲ್ಲಿ‌ ಹೋಗುವವರೆಲ್ಲ ಆರ್ ಟಿಐ ಮೂಲಕ ಮಾಹಿತಿ ತೆಗೆದುಕೊಳ್ಳುತ್ತಾರೆ. ಇದರಿಂದ ಏನು ಸಾಧನೆ ಮಾಡೋಕೆ ಆಗಲ್ಲ ಎಂದಿದ್ದಾರೆ.

ಯಡಿಯೂರಪ್ಪ ರಾಜೀನಾಮೆ ಕೊಡ್ತಾರಾ ಅಂತ ಎಲ್ಲರೂ ಕಾಯುತ್ತಿದ್ದಾರೆ. ಆದರೆ, ಪ್ರಧಾನಿ ಮೋದಿ ಬೆಂಬಲ ಎಲ್ಲಿಯವರೆಗೆ ಇರುತ್ತದೋ, ಕೇಂದ್ರ ಗೃಹ ಸಚಿವರ ಬೆಂಬಲ ಇರುತ್ತದೋ, ರಾಜ್ಯದ ಜನರ ಬೆಂಬಲ ಎಲ್ಲಿಯವರೆಗೆ ಇರುತ್ತದೋ ಅಲ್ಲಿಯವರೆಗೆ ನಾನು ಮುಖ್ಯಮಂತ್ರಿಯಾಗಿ ಇರುತ್ತೇನೆ. ನಾನು ಇಂತಹ ನೂರು ಕೇಸ್ ಹಾಕಿದರೂ ಎದುರಿಸಲು ಸಿದ್ಧನಿದ್ದೇನೆ. ಆದರೆ, ನೀವು ವಿರೋಧ ಪಕ್ಷದಲ್ಲೇ ಇರುವಂತೆ ಮಾಡುತ್ತೇನೆ. ತಪ್ಪುಗಳನ್ನು ತಿದ್ದಬೇಡಿ ಎಂದು ಹೇಳುವುದಿಲ್ಲ. ಆದರೆ ರಾಜ್ಯಪಾಲರ ಭಾಷಣ ಸುಳ್ಳು ಎಂದು ಹೇಳಬೇಡಿ ಎಂದು ಸಿದ್ದರಾಮಯ್ಯನವರ ಹೇಳಿಕೆಗೆ ಸಿಎಂ ತಿರುಗೇಟು ನೀಡಿದ್ದಾರೆ.

ಸಿದ್ದರಾಮಯ್ಯನವರೇ, ನೀವು ನನ್ನನ್ನು ಆಪರೇಷನ್ ಕಮಲದ ಜನಕ ಎಂದೆಲ್ಲ ಟೀಕೆ ಮಾಡಿದ್ದೀರಿ. 2006ರಲ್ಲಿ ನೀವು ಚಾಮುಂಡೇಶ್ವರಿ ಕ್ಷೇತ್ರದಿಂದ ಗೆದ್ದು, ರಾಜೀನಾಮೆ ಕೊಟ್ಟು ಕಾಂಗ್ರೆಸ್​ಗೆ ಆಪರೇಷನ್ ಆಗಿರಲಿಲ್ಲವೇ? ಹಾಲಿನ ಉತ್ಪಾದನೆ ಹೆಚ್ಚಳ ನನ್ನ ಸರ್ಕಾರದಲ್ಲಿ ಆಗಿದ್ದು ಅಂದಿದ್ದೀರಿ. ಹೌದಪ್ಪ, ಇದು ನಿನ್ನಿಂದನೇ ಆಗಿದ್ದು ಎಂದು ನಾನು ಒಪ್ಪಿಕೊಳ್ಳುತ್ತೇನೆ. ಆದರೆ, ಹಾಲಿಗೆ ಪ್ರೋತ್ಸಾಹ ಧನ ಕೊಡಲು ತೀರ್ಮಾನ ಮಾಡಿದ್ದೇ ನಾನು. ಅದು ಪ್ರಾರಂಭ ಆಗಿದ್ದು ನನ್ನಿಂದ ಅನ್ನೋದನ್ನು ಮರೆಯಬೇಡಿ ಎಂದು ಸಿಎಂ ಯಡಿಯೂರಪ್ಪ ನೆನಪಿಸಿದ್ದಾರೆ.

ಕಲ್ಯಾಣ ಕರ್ನಾಟಕ ಭಾಗದ ಜನರ ಕನಸನ್ನು ನನಸು ಮಾಡೋದು ಎಲ್ಲರ ಜವಾಬ್ದಾರಿ. ಹೀಗಾಗಿ, ಇನ್ನೆರಡು ವರ್ಷಗಳಲ್ಲಿ ಅನುಭವ ಮಂಟಪ ಪೂರ್ಣಗೊಳ್ಳಲಿದೆ. ಅದಕ್ಕೆ 600 ಕೋಟಿ ಖರ್ಚು ಮಾಡಲು ನಾನು ಸಿದ್ದನಿದ್ದನಿದ್ದೇನೆ. ಅದನ್ನು ಬರುವ ಬಜೆಟ್​ನಲ್ಲಿ ಘೋಷಣೆ ಮಾಡುತ್ತೇನೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

Comments are closed.