ಬೆಂಗಳೂರು: ಎಟಿಎಂಗೆ ತುಂಬಬೇಕಿದ್ದ ಹಣ ಎಗರಿಸಿ ಎಸ್ಕೇಪ್ ಆಗಿದ್ದ ಆರೋಪಿಯನ್ನು ಕೊನೆಗೂ ಬೆಂಗಳೂರಿನ ಸುಬ್ರಹ್ಮಣ್ಯನಗರ ಪೊಲೀಸರು ಬಂಧಿಸಿದ್ದಾರೆ.
ಮಂಡ್ಯ ಮೂಲದ ಯೋಗೇಶ್ ಬಂಧಿತ ಆರೋಪಿ. ಸೆಕ್ಯೂರ್ ವ್ಯಾಲ್ಯೂ ಎಜೆನ್ಸಿಯಲ್ಲಿ ಡ್ರೈವರ್ ಆಗಿದ್ದ ಯೋಗೇಶ್ ಫೆಬ್ರವರಿ 3ರಂದು ಎಟಿಎಂಗೆ ತುಂಬಬೇಕಿದ್ದ 64 ಲಕ್ಷ ಹಣವನ್ನು ಕದ್ದು ಪರಾರಿಯಾಗಿದ್ದ. ಈ ಘಟನೆ ಸುಬ್ರಹ್ಮಣ್ಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು. ಸದ್ಯ ಆರೋಪಿ ಪತ್ತೆಗಾಗಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದು ಕೊನೆಗೂ ಮೈಸೂರಿನ ಲಾಡ್ಜ್‌ವೊಂದರಲ್ಲಿ ಖದೀಮ ಸಿಕ್ಕಿ ಬಿದ್ದಿದ್ದಾನೆ.
ಎಟಿಎಂ ವಾಹನದ ಚಾಲಕನಾಗಿದ್ದ ಆರೋಪಿ ಯೋಗೇಶ್ಗೆ ಹೆಂಡತಿ, ಮಕ್ಕಳಿದ್ದಾರೆ. ಆದ್ರೂ ಕೂಡ ಆತ ಫೆ.3ರಂದು ಎಟಿಎಂಗೆ ತುಂಬಬೇಕಿದ್ದ ಹಣ ಕದ್ದು ಅತ್ತೆ ಮಗಳ ಜತೆ ಪರಾರಿಯಾಗಿದ್ದ. ಸುಮಾರು 64 ಲಕ್ಷ ರೂಪಾಯಿ ಎಗರಿಸಿ ಎಸ್ಕೇಪ್ ಆಗಿದ್ದ. ಬಳಿಕ ದಿಕ್ಕು ತೋಚದೆ ಆಶ್ರಯಕ್ಕಾಗಿ ಸ್ನೇಹಿತರನ್ನು ಸಂಪರ್ಕಿಸಿದ್ದ. ಈ ವೇಳೆ ಕಾರ್ಯಾಚರಣೆ ನಡೆಸುತ್ತಿದ್ದ ಪೊಲೀಸರ ತಂಡ ಆರೋಪಿ ಕಾಲ್ ಟ್ರ್ಯಾಕ್ ಮಾಡಿದ್ದಾನೆ.
ಆಗ ಆರೋಪಿ ಮೈಸೂರಿನ ಲಾಡ್ಜ್‌ವೊಂದರಲ್ಲಿ ತಲೆಮರಿಸಿಕೊಂಡಿರುವ ಸುಳಿವು ಸಿಕ್ಕಿದ್ದು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ಯೋಗೇಶ್ ಬಂಧನ ಬಳಿಕ ಆತ ಕದ್ದಿದ್ದ 64 ಲಕ್ಷ ರೂಪಾಯಿಯಲ್ಲಿ ಕೇವಲ 15 ಸಾವಿರ ರೂ ಮಾತ್ರ ಪತ್ತೆಯಾಗಿದೆ. ಉಳಿದ ಹಣದ ಬಗ್ಗೆ ಆರೋಪಿ ಮಾಹಿತಿ ಹಂಚಿಕೊಳ್ಳುತ್ತಿಲ್ಲ. ಹಣದ ಬಗ್ಗೆ ಮಾಹಿತಿ ಬಾಯ್ಬಿಡದೆ ಸತಾಯಿಸುತ್ತಿದ್ದಾನೆ. ಹೀಗಾಗಿ ಸುಬ್ರಮಣ್ಯನಗರ ಪೊಲೀಸರು ಈ ಬಗ್ಗೆ ಆರೋಪಿ ಬಳಿ ವಿಚಾರಣೆ ಮುಂದುವರೆಸಿದ್ದಾರೆ.
Comments are closed.