ಮಹಾರಾಷ್ಟ್ರ, ಕೇರಳ, ತಮಿಳುನಾಡು, ಕರ್ನಾಟಕ, ಪಂಜಾಬ್ ಹಾಗೂ ಗುಜರಾತ್ ಸೇರಿದಂತೆ 6 ರಾಜ್ಯಗಳಿಂದ ಶೇ. 85 ರಷ್ಟು ಕೊರೋನಾ
ನವದೆಹಲಿ: ಮಹಾರಾಷ್ಟ್ರ, ಕೇರಳ, ತಮಿಳುನಾಡು, ಕರ್ನಾಟಕ, ಪಂಜಾಬ್ ಹಾಗೂ ಗುಜರಾತ್ ಸೇರಿದಂತೆ 6 ರಾಜ್ಯಗಳಿಂದ ಶೇ. 85 ರಷ್ಟು ಕೊರೋನಾ ಪಾಸಿಟಿವ್ ಪ್ರಕರಣಗಳು ವರದಿಯಾಗುತ್ತಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ ತಿಳಿಸಿದೆ.
ಈ ಆರು ರಾಜ್ಯಗಳಲ್ಲೇ ಅತಿ ಹೆಚ್ಚು ಪ್ರಕರಣಗಳು ವರದಿಯಾಗುತ್ತಿರುವುದರಿಂದ ಕೇಂದ್ರ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಅದರಲ್ಲೂ ಮಹಾರಾಷ್ಟ್ರದ ಸ್ಥಿತಿ ಆತಂಕ ಮೂಡಿಸಿದೆ. ಇದು ಇತರ ರಾಜ್ಯಗಳಿಗೆ ಎಚ್ಚರಿಕೆಯ ಗಂಟೆ ಎಂದಿದೆ.
ದೇಶದಲ್ಲಿ ಕಳೆದ 24 ಗಂಟೆಯಲ್ಲಿ ಒಟ್ಟು 23,285 ಹೊಸ ಪ್ರಕರಣಗಳು ದಾಖಲಾಗಿದ್ದು, ಇದರೊಂದಿಗೆ ಕೋವಿಡ್ -19 ಆಕ್ಟಿವ್ ಪ್ರಕರಣಗಳ ಸಂಖ್ಯೆ 1,97,237ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
“ದೇಶದ ಒಟ್ಟು ಸಕ್ರಿಯ ಪ್ರಕರಣಗಳಲ್ಲಿ ಐದು ರಾಜ್ಯಗಳಲ್ಲಿ ಒಟ್ಟು ಶೇ. 82.96 ರಷ್ಟಿದ್ದು, ಮಹಾರಾಷ್ಟ್ರ ಮತ್ತು ಕೇರಳ ಎರಡು ರಾಜ್ಯಗಳಲ್ಲಿ ಭಾರತದ ಒಟ್ಟು ಸಕ್ರಿಯ ಪ್ರಕರಣಗಳಲ್ಲಿ ಶೇಕಡಾ 71.69 ರಷ್ಟಿದೆ” ಎಂದು ಸಚಿವಾಲಯ ತಿಳಿಸಿದೆ.
ಮಹಾರಾಷ್ಟ್ರದಲ್ಲಿ ಇಂದು ಅತಿ ಹೆಚ್ಚು ಅಂದರೆ 14,317 ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ನಂತರ ಕೇರಳದಲ್ಲಿ 2,133 ಹಾಗೂ ಪಂಜಾಬ್‌ನಲ್ಲಿ 1,305 ಹೊಸ ಪ್ರಕರಣಗಳು ವರದಿಯಾಗಿವೆ ಎಂದು ಸಚಿವಾಲಯ ತಿಳಿಸಿದೆ.
ಈ ಮಧ್ಯೆ ದೇಶದ ಕೋವಿಡ್ ಚೇತರಿಕೆ ಪ್ರಮಾಣ ಶೇಕಡ 96.85ಕ್ಕೆ ಇಳಿದಿದೆ. ಕಳೆದ 24 ತಾಸಿನಲ್ಲಿ 15 ಸಾವಿರಕ್ಕೂ ಹೆಚ್ಚು ಸೋಂಕಿತರು ಚೇತರಿಸಿಕೊಳ್ಳುವುದರೊಂದಿಗೆ ಈವರೆಗೆ ಗುಣಮುಖರಾದವರ ಸಂಖ್ಯೆ 1 ಕೋಟಿ 9 ಲಕ್ಷ 53 ಸಾವಿರಕ್ಕೆ ಏರಿದೆ.
ಆದರೂ, ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ನಿರಂತರವಾಗಿ ಏರುತ್ತಲೇ ಇದೆ. ಅನೇಕ ರಾಜ್ಯಗಳಲ್ಲಿ ಸಕ್ರಿಯ ಪ್ರಕರಣಗಳಲ್ಲಿ ಹೆಚ್ಚು ಏರಿಕೆ ಕಂಡುಬರುತ್ತಿದೆ. ಸದ್ಯ, ದೇಶದಲ್ಲಿ 1,97,237 ಸಕ್ರಿಯ ಪ್ರಕರಣಗಳಿವೆ. ಇವು ಈವರೆಗೆ ದೃಢಪಟ್ಟ ಒಟ್ಟು ಪ್ರಕರಣಗಳ ಪೈಕಿ ಶೇ 1.74 ರಷ್ಟಾಗಿವೆ.
Comments are closed.