ಮೈಸೂರು: ಮೈಸೂರಿನ ರಸ್ತೆಯಲ್ಲಿ ವ್ಯಕ್ತಿಯೊಬ್ಬರನ್ನು ಅಡ್ಡಗಟ್ಟಿ ಹಲ್ಲೆ ನಡೆಸಿ ಸುಲಿಗೆ ಮಾಡಿದ್ದ ನಾಲ್ವರು ಖದೀಮರನ್ನು ಮೇಟಗಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮೈಸೂರಿನ ಬಿಎಂಶ್ರೀ ನಗರದ ವಿಷ್ಣು (19), ಆರ್.ಗಿರೀಶ (19), ಭೈರವೇಶ್ವರ ನಗರದ ಯಶವಂತ (22), ಮೈಸೂರು ತಾಲ್ಲೂಕು ಶ್ಯಾದನಹಳ್ಳಿ ಗ್ರಾಮದ ಅಜಿತ್ ಕುಮಾರ್ (19) ಬಂಧಿತರಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕಳೆದ ಮಾರ್ಚ್ 4 ರಂದು ರಾತ್ರಿ ಸಮಯದಲ್ಲಿ ವ್ಯಕ್ತಿಯೊಬ್ಬರು ಮೇಟಗಳ್ಳಿ ಕೈಗಾರಿಕಾ ಪ್ರದೇಶದ ಮಹೇಶ್ ಪಿ.ಯು. ಕಾಲೇಜು ರಸ್ತೆಯಲ್ಲಿ ಹೋಗುತ್ತಿದ್ದಾಗ ಅವರನ್ನು ನಾಲ್ವರು ಅಡ್ಡಗಟ್ಟಿ, ಹಲ್ಲೆ ಮಾಡಿ 28 ಸಾವಿರ ನಗದು, 25 ಗ್ರಾಂ ತೂಕದ ಚಿನ್ನದ ಸರ ಮತ್ತು ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದರು.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಮೇಟಗಳ್ಳಿ ಠಾಣೆ ಪೊಲೀಸರು, ಖಚಿತ ಮಾಹಿತಿ ಮೇರೆಗೆ ಶಾದನಹಳ್ಳಿಯಲ್ಲಿರುವ ತೋಟದ ಮನೆಯ ಮೇಲೆ ದಾಳಿ ಮಾಡಿ ಈ ನಾಲ್ವರನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಕೃತ್ಯವೆಸಗಿರುವುದಾಗಿ ಒಪ್ಪಿಕೊಂಡಿದ್ದಾರೆ. ಬಂಧಿತರಿಂದ 14,000 ರೂ. ನಗದು, 1 ಮೊಬೈಲ್ ಫೋನ್ ಹಾಗೂ ಕೃತ್ಯಕ್ಕೆ ಬಳಸಿದ್ದ 2 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಒಂಟಿಯಾಗಿ ಓಡಾಡುವವರನ್ನೇ ಗುರಿಯಾಗಿಸಿಕೊಂಡು ಸುಲಿಗೆ ಮಾಡುತ್ತಿದ್ದ ನಾಲ್ವರ ಬಂಧನ
ಡಿಸಿಪಿ ಗೀತಾ ಪ್ರಸನ್ನ, ಎನ್.ಆರ್.ಠಾಣೆ ಎಸಿಪಿ ಶಿವಶಂಕರ್ ಅವರ ಮಾರ್ಗದರ್ಶನದಲ್ಲಿ ಮೇಟಗಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಎ.ಮಲ್ಲೇಶ್, ಎಎಸ್‌ಗಳಾದ ವಿಶ್ವನಾಥ್, ನಾಗರಾಜನಾಯ್ಕ್, ಎಎಸ್‌ಐಗಳಾದ ಪೊನ್ನಪ್ಪ, ಅನಿಲ್ ಶಂಕಪಾಲ್, ಸಿಬ್ಬಂದಿಯವರಾದ ದಿವಾಕರ, ಪ್ರಶಾಂತ್‌ಕುಮಾರ್, ಕೃಷ್ಣ, ಲಿಖಿತ್, ಆಶಾ, ಚೇತನ್, ಲಿಂಗರಾಜಪ್ಪ, ಎಂ.ಕಾಂತ, ರಮೇಶ, ಸುರೇಶ್, ಜೀವನ್, ಗೌರಿಶಂಕರ್, ಹನುಮಂತ ಕಲ್ಲೇದ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
Comments are closed.