ಕರ್ನಾಟಕ

ಮೇ 2 ರ ಬಳಿಕ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಖಚಿತ; ಉತ್ತರ ಕರ್ನಾಟಕದವರೇ ಮುಂದಿನ CM: ಯತ್ನಾಳ್ ಭವಿಷ್ಯ

Pinterest LinkedIn Tumblr

ಬೆಂಗಳೂರು: ಮೇ 2 ರ ಬಳಿಕ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಖಚಿತವಾಗಿದ್ದು, ಉತ್ತರ ಕರ್ನಾಟಕದವರೇ ಮುಂದಿನ ಮುಖ್ಯಮಂತ್ರಿಯಾಗುತ್ತಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭವಿಷ್ಯ ನುಡಿದಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್, ಪಕ್ಷದ ಹಿರಿಯ ನಾಯಕರಾಗಿರುವ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರಿಗೆ ಎಲ್ಲವೂ ಗೊತ್ತಿದೆ. ಆದರೂ ಅವರಿಂದ ಏನೂ ಮಾಡಲು ಸಾಧ್ಯವಾಗುತ್ತಿಲ್ಲ. ಯಡಿಯೂರಪ್ಪ ವಿರುದ್ಧ ಧ್ವನಿಯೆತ್ತಿದ್ದಕ್ಕೆ ನನಗೆ 60 ದಿವಸಗಳ ಹಿಂದೇನೇ ನೊಟೀಸ್ ಕೊಟ್ಟಿದ್ದರಾದರೂ ನನ್ನ ಮೇಲೆ ಪಕ್ಷದಿಂದ ಕ್ರಮ ಜರುಗಿಸಲಾಗಲಿಲ್ಲ. ಇದೆಲ್ಲವನ್ನು ನೋಡಿದರೆ ನನ್ನ ಹಿಂದೆ ದೊಡ್ಡ ಶಕ್ತಿ ಕೆಲಸ ಮಾಡುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ.

ಬಿಜೆಪಿಯ ನಿಷ್ಠಾವಂತ ಶಾಸಕರೆಲ್ಲ ನನ್ನ ಬೆಂಬಲಕ್ಕೆ ನಿಂತಿದ್ದಾರೆ. ಪಂಚಮಸಾಲಿ ಸಮುದಾಯದವರು ಸಹ ಯಡಿಯೂರಪ್ಪ ವಿರುದ್ಧ ಸಿಟ್ಟಿಗೆದ್ದಿದ್ದಾರೆ. ಏ.17 ರ ನಂತರ ಬಹಳ ಮಂದಿ ಯಡಿಯೂರಪ್ಪ ವಿರುದ್ಧ ರೊಚ್ಚಿಗೇಳುತ್ತಾರೆ. ಯಡಿಯೂರಪ್ಪ ಸೂರ್ಯಚಂದ್ರ ಇರುವವರೆಗೂ ಯಡಿಯೂರಪ್ಪ ಮುಖ್ಯಮಂತ್ರಿಯಾಗಿರಲು ಹೇಗೆ ಸಾಧ್ಯ? ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕೊಟ್ಟಂತೆಯೇ ಯಡಿಯೂರಪ್ಪಗೆ 2 ವರ್ಷ ಅವಕಾಶ ನೀಡಿದ್ದಾರೆ. ಈ ಎರಡು ವರ್ಷ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಿದ್ದೇ ಹೆಚ್ಚಾಯಿತು ಎಂದು ಕಿಡಿಕಾರಿದರು.

ಬೆಳಗಾವಿಯಲ್ಲಿ ಪಂಚಮಸಾಲಿ ಹಾಗೂ ದೊಡ್ಡ ಸಮುದಾಯಗಳಿಗೆ ಸಚಿವ ಜಗದೀಶ್ ಶೆಟ್ಟರ್ ವಿರುದ್ಧ ಅಸಮಾಧಾನವಿದೆ. ಬೆಳಗಾವಿಯಲ್ಲಿ ನಡೆಯಲಿರುವ ಶರಣುಶರಣಾರ್ಥಿ ಸಭೆಯಲ್ಲಿ ಭಾಗಿಯಾಗುತ್ತಿದ್ದೇನೆ. ಉಪಚುನಾವಣಾ ಪ್ರಚಾರಕ್ಕೆ ನನ್ನನ್ನು ಆಹ್ವಾನಿಸಿಲ್ಲ. ಜಗದೀಶ್ ಶೆಟ್ಟರ್ ಮೇಲೆ ಏನೇ ಸಿಟ್ಟಿದ್ದರೂ ಯಡಿಯೂರಪ್ಪಗಾಗಿ ಮತ ನೀಡದೇ ಇದ್ದರೂ ಪ್ರಧಾನಿ ಮೋದಿ ಅವರ ನೇತೃತ್ವದ ಕೇಂದ್ರದ ಆಡಳಿತ ನೋಡಿ ಬಿಜೆಪಿಗೆ ಮತ ನೀಡಿ ಎಂದು ಮತದಾರರಲ್ಲಿ ಮನವಿ ಮಾಡುವುದಾಗಿ ಹೇಳಿದರು.

ಯಡಿಯೂರಪ್ಪ ವಿರುದ್ಧ ದೂರು ನೀಡೇ ಇಲ್ಲ ಎಂದು ಉಲ್ಟಾ ಹೊಡೆದಿರುವ ಸಚಿವ ಕೆ.ಎಸ್.ಈಶ್ವರಪ್ಪ ಕುರಿತು ಪ್ರತಿಕ್ರಿಯಿಸಿದ ಯತ್ನಾಳ್, ಇದನ್ನೆಲ್ಲ ನೋಡಿದರೆ ಯಾರ ಯಾರ ನಾಯಕತ್ವ ಎಷ್ಟಿದೆ ಎಂದು ಸ್ಪಷ್ಟವಾಗುತ್ತದೆ. ಯಡಿಯೂರಪ್ಪ ವಿರುದ್ಧ ದೂರು ನೀಡೇ ಇಲ್ಲ ಎಂದು ಉಲ್ಟಾ ಹೊಡೆದಿರುವ ಈಶ್ವರಪ್ಪಗೆ ಈ ಬಗ್ಗೆ ಪ್ರಶ್ನಿಸಬೇಕೇ ಹೊರತು ಈಶ್ವರಪ್ಪ ಹೇಳಿಕೆ ಬದಲಾವಣೆ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ಸೂಚ್ಯವಾಗಿ ಹೇಳಿದರು.

Comments are closed.