ಹೊಸದಿಲ್ಲಿ: ರಾಜ್ಯಕ್ಕೆ ಹೆಚ್ಚಿನ ಆಕ್ಸಿಜನ್ ಪೂರೈಕೆ ಮಾಡಬೇಕೆಂಬ ಕರ್ನಾಟಕ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದ ಕೇಂದ್ರ ಸರ್ಕಾರಕ್ಕೆ ಮುಖಭಂಗವಾಗಿದೆ. ಕರ್ನಾಟಕದ ವೈದ್ಯಕೀಯ ಲಿಕ್ವಿಡ್ ಆಕ್ಸಿಜನ್‌ನ ದೈನಂದಿನ ಕೋಟಾದ ಮಿತಿಯನ್ನು 1200 ಮೆಟ್ರಿಕ್ ಟನ್‌ಗೆ ಹೆಚ್ಚಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿತ್ತು. ಇದನ್ನು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ಆದರೆ ಸುಪ್ರೀಂಕೋರ್ಟ್ ಈ ಅರ್ಜಿಯನ್ನು ತಿರಸ್ಕರಿಸಿದೆ.
ಹೈಕೋರ್ಟ್ ಸೂಕ್ತವಾಗಿ ಅಂದಾಜು ಮಾಡಿ, ಚೆನ್ನಾಗಿ ಪರಿಗಣಿಸಿ ಈ ಆದೇಶ ನೀಡಿದೆ ಎಂದು ಆರಂಭದಲ್ಲಿಯೇ ರಾಜ್ಯ ಹೈಕೋರ್ಟ್ ಆದೇಶವನ್ನು ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಎತ್ತಿಹಿಡಿದರು. ‘ಕರ್ನಾಟಕದ ನಾಗರಿಕರು ತತ್ತರಿಸಲು ನಾವು ಬಿಡುವುದಿಲ್ಲ’ ಎಂದು ಅವರು ಕೇಂದ್ರದ ಪರ ಹಾಜರಿದ್ದ ಸಾಲಿಸಿಟರ್ ಜನರಲ್‌ಗೆ ಹೇಳಿದರು.
ಹೈಕೋರ್ಟ್ ತನ್ನ ಬೇಡಿಕೆಯನ್ನು ಸರಿಯಾಗಿ ಪರಿಶೀಲಿಸಿದೆ. ಹೈಕೋರ್ಟ್ ನಿರ್ದೇಶನದಲ್ಲಿ ತಾನು ಮಧ್ಯಪ್ರವೇಶ ಮಾಡುವುದಿಲ್ಲ. ಕೇಂದ್ರದ ಮನವಿಯನ್ನು ಪುರಸ್ಕರಿಸಲು ನಮಗೆ ಯಾವ ಕಾರಣವೂ ಕಾಣಿಸುತ್ತಿಲ್ಲ ಎಂದು ಕೋರ್ಟ್ ತಿಳಿಸಿತು.
ಈ ಬಿಕ್ಕಟ್ಟಿನ ಸನ್ನಿವೇಶದಲ್ಲಿ ಕೇಂದ್ರದ ಆಕ್ಸಿಜನ್ ಹಂಚಿಕೆ ಯೋಜನೆಯಲ್ಲಿ ಹೈಕೋರ್ಟ್‌ಗಳು ಹಸ್ತಕ್ಷೇಪ ಮಾಡುತ್ತಿರುವುದಕ್ಕೆ ತಮ್ಮ ಆಕ್ಷೇಪ ಇರುವುದು ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದರು.
‘ಪ್ರತಿ ರಾಜ್ಯಕ್ಕೂ ಆಕ್ಸಿಜನ್ ಬೇಕಿದೆ. ಆದರೆ ನನ್ನ ಕಳವಳ ಇರುವುದು ಹೈಕೋರ್ಟ್‌ಗಳು ಅದಕ್ಕೆ ಆದೇಶಿಸುತ್ತಿರುವುದರ ಬಗ್ಗೆ. ಹೈಕೋರ್ಟ್‌ಗಳು ಇದನ್ನು ಆರಂಭಿಸಿದರೆ ಸಮಸ್ಯೆ ಎದುರಾಗಲಿದೆ. ಸಮಸ್ಯೆ ಬಗೆಹರಿಸಲು ಕೇಂದ್ರ ಸರ್ಕಾರವು ಕರ್ನಾಟಕದ ಅಧಿಕಾರಿಗಳ ಜತೆಗೂಡಿ ಮಾತನಾಡಲು ಸಿದ್ಧವಿದೆ’ ಎಂದು ಅವರು ತಿಳಿಸಿದರು.
ಕರ್ನಾಟಕ ಹೈಕೋರ್ಟ್ ಅಜಾಗರೂಕತೆಯಿಂದೇನೂ ಈ ಆದೇಶ ಹೊರಡಿಸಿಲ್ಲ. ಅದು ಕನಿಷ್ಠ 1100 ಮೆಟ್ರಿಕ್ ಟನ್ ಆಕ್ಸಿಜನ್ ಬೇಡಿಕೆ ಇದೆ ಎಂಬ ರಾಜ್ಯದ ಅಂದಾಜನ್ನು ಆಧಾರವಾಗಿಟ್ಟುಕೊಂಡಿದೆ. ರಾಜ್ಯದ ಬೇಡಿಕೆಯನ್ನು ಪರಿಗಣಿಸುವಂತೆ ಹೈಕೋರ್ಟ್ ಮೊದಲು ಸೂಚನೆ ನೀಡಿತ್ತು. ಆಕ್ಸಿಜನ್ ಕೋಟಾವನ್ನು ಸಮರ್ಪಕವಾಗಿ ಹೆಚ್ಚಿಸಿಲ್ಲ ಎನ್ನುವುದು ಗಮನಕ್ಕೆ ಬಂದಿದ್ದರಿಂದ ಮರುದಿನ ಆದೇಶ ಹೊರಡಿಸಿದೆ ಎಂದು ಸುಪ್ರೀಂಕೋರ್ಟ್ ಹೇಳಿತು.
ಚಾಮರಾಜನಗರ, ಕಲಬುರ್ಗಿ ಮುಂತಾದೆಡೆ ಆಕ್ಸಿಜನ್ ಕೊರತೆಯಿಂದ ರೋಗಿಗಳು ಮೃತಪಟ್ಟ ಘಟನೆಗಳನ್ನು ಪರಿಗಣಿಸಿ ಹೈಕೋರ್ಟ್ ಈ ಆದೇಶ ನೀಡಿದೆ ಎನ್ನುವುದುನ್ನು ನ್ಯಾಯಮೂರ್ತಿ ಚಂದ್ರಚೂಡ ಗಮನಿಸಿದರು. ‘ನ್ಯಾಯಮೂರ್ತಿಗಳು ಮಾನವರ ಸಂಕಷ್ಟಗಳನ್ನು ಕೂಡ ನೋಡುತ್ತಿದ್ದಾರೆ. ಹೈಕೋರ್ಟ್‌ಗಳು ಸುಮ್ಮನೇ ತಮ್ಮ ಕಣ್ಣುಗಳನ್ನು ಮುಚ್ಚಿಕೊಂಡಿರಲು ಸಾಧ್ಯವಿಲ್ಲ’ ಎಂದರು.
ಈ ಆದೇಶದಲ್ಲಿ ಸುಪ್ರೀಂಕೋರ್ಟ್ ಮಧ್ಯಪ್ರವೇಶ ಮಾಡುವುದಿಲ್ಲ ಎನ್ನುವುದನ್ನು ತಿಳಿದ ತುಷಾರ್ ಮೆಹ್ತಾ, ಆಕ್ಸಿಜನ್‌ನ ಸಂಪೂರ್ಣ ಕೋಟಾಗಳನ್ನು ಹೈಕೋರ್ಟ್‌ಗಳಿಗೇ ರವಾನಿಸಲು ಸಿದ್ಧ. ಹೈಕೋರ್ಟ್ ಅದನ್ನು ವಿತರಿಸಲಿ ಎಂದರು.
3.95 ಲಕ್ಷ ಪ್ರಕರಣಗಳ ನಡುವೆಯೂ ಕರ್ನಾಟಕ 1700 ಟನ್ ಆಕ್ಸಿಜನ್‌ಗೆ ಕೋರಿದೆ. 1100 ಟನ್ ಕನಿಷ್ಠ ಅಗತ್ಯವಾಗಿದೆ. ಕೋರ್ಟ್ ಇದನ್ನೆಲ್ಲ ಸಮರ್ಪಕವಾಗಿ ಗಮನಿಸಿಯೇ ಈ ಆದೇಶ ನೀಡಿದೆ ಎಂದು ಚಂದ್ರಚೂಡ್ ಹೇಳಿದರು.
Comments are closed.