ಬೆಂಗಳೂರು : ಕೊರೋನಾ ಚಿಕಿತ್ಸೆಗಾಗಿ ಪರದಾಟ, ಶವಗಳ ಸಾಗಾಟದ ವೇಳೆ ಕೇಳಿ ಬಂದ ಅತಿ ದೊಡ್ಡ ಆರೋಪ ಆಂಬ್ಯುಲೆನ್ಸ್ ವಾಹನಗಳ ಸುಲಿಗೆ. ರೋಗಿಗಳನ್ನು ಆಸ್ಪತ್ರೆಗೆ ಕರೆದೊಯ್ಯಲು, ಪಾರ್ಥಿವ ಶರೀರಗಳನ್ನು ಸಾಗಿಸಲು ಆಂಬ್ಯುಲೆನ್ಸ್ ಚಾಲಕರು ಸಾವಿರಾರು ರೂಪಾಯಿ ಬೇಡಿಕೆ ಇಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಶವಗಳನ್ನು ಸಾಗಿಸಲು ಆಂಬ್ಯುಲೆನ್ಸ್ ಸೇವೆಯನ್ನು ಉಚಿತವಾಗಿ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ಜೊತೆಗೆ ರೋಗಿಗಳನ್ನು ಸಾಗಿಸಲೂ ಬೇಕಾಬಿಟ್ಟಿ ಹಣ ಕೇಳುವಂತಿಲ್ಲ. ಆಂಬ್ಯುಲೆನ್ಸ್ ಸೇವೆಗೂ ಸರ್ಕಾರ ದರ ನಿಗದಿ ಮಾಡಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.
ವಿಧಾನಸೌಧದಲ್ಲಿ ಸಭೆ ನಡೆಸಿದ ಬಳಿಕ ಮಾತನಾಡಿದ ಸಚಿವರು, ಶವ ಸಾಗಿಸುವ ಆಂಬ್ಯುಲೆನ್ಸ್ ಸೇವೆಯನ್ನು ಉಚಿತವಾಗಿ ನೀಡಲಾಗುವುದು. ಯಾರೂ ಕೂಡ ಹಣ ಪಡೆಯುವಂತಿಲ್ಲ. ಅಸ್ಥಿ ನೀಡುವಾಗಲೂ ಹಣ ಪಡೆಯುವಂತಿಲ್ಲ. ಚಾಲಕರು ಹಣ ಪಡೆದರೆ ಮೂರು ವರ್ಷ ಡ್ರೈವಿಂಗ್ ಲೈಸೆನ್ಸ್ ರದ್ದು ಮಾಡಲಾಗುವುದು ಎಂದು ಎಚ್ಚರಿಕೆ ಸಂದೇಶವನ್ನು ರವಾನಿಸಿದರು. ಇನ್ನು ಸಭೆಯಲ್ಲಿ ಮುಖ್ಯವಾಗಿ ಬ್ಲ್ಯಾಕ್ ಫಂಗಸ್, ರೆಮಿಡಿಸಿವಿರ್ ಔಷಧದ ಬಗ್ಗೆ ಚರ್ಚೆ ನಡೆಸಲಾಯಿತು. ವಿವಿಧ ಅಧಿಕಾರಿಗಳ ಜೊತೆ ಚರ್ಚಿಸಿದ್ದೇನೆ. ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ 1,050 ಡೋಸ್ ಔಷಧ ಬಂದಿದೆ. ರಾಜ್ಯದಲ್ಲಿ ರೆಮಿಡಿಸಿವಿರ್ ಕೊರತೆ ಸದ್ಯಕ್ಕಿಲ್ಲ, ಕೇಳಿದಷ್ಟು ರೆಮಿಡಿಸಿವಿರ್ ಕೊಡುವ ವ್ಯವಸ್ಥೆ ಇದೆ.
ಮೊದಲು18ರಿಂದ 20ಸಾವಿರ ರೆಮಿಡಿಸಿವಿರ್ ಅಗತ್ಯವಿತ್ತು. ಈಗ 5 ಸಾವಿರ ರೆಮಿಡಿಸಿವಿರ್ ಮಾತ್ರ ಬೇಕಿದೆ. ದಿನಕಳೆದಂತೆ ರೆಮಿಡಿಸಿವಿರ್ ಬೇಡಿಕೆ ಕಡಿಮೆ ಆಗುತ್ತಿದೆ. ರಾಜ್ಯದಲ್ಲಿ ಈವರೆಗೆ 150 ಮಂದಿ ಬ್ಲ್ಯಾಕ್ ಫಂಗಸ್ ಕಾಯಿಲೆಗೆ ತುತ್ತಾಗಿದ್ದು, ಅವರಿಗೆ ಅಗತ್ಯ ಚಿಕಿತ್ಸೆ ಕೊಡಲಾಗುತ್ತದೆ. ಬ್ಲ್ಯಾಕ್ ಫಂಗಸ್ ಔಷಧಿ ಸಂಬಂಧ ಕೇಂದ್ರ ಸಚಿವ ಸದಾನಂದಗೌಡರಿಗೂ ಮನವಿ ಮಾಡಿದ್ದೇನೆ ಎಂದು ತಿಳಿಸಿದರು.
ರಾಜ್ಯದಲ್ಲಿ ಆಕ್ಸಿಜನ್ ಬೆಡ್ ಕೊರತೆ ಎಲ್ಲೂ ಇಲ್ಲ, ಆಕ್ಸಿಜನ್ ಸಾಂದ್ರಕ ಬೆಡ್ಗಳು ಖಾಲಿ ಇವೆ. ಬೆಡ್ ಸಮಸ್ಯೆ ಸದ್ಯಕ್ಕೆ ಬಗೆಹರಿದಿದೆ, ಒತ್ತಡ ಕಡಿಮೆ ಆಗಿದೆ. ಟೆಸ್ಟಿಂಗ್ ಕಡಿಮೆ ಮಾಡಿರುವ ಆರೋಪವನ್ನು ತಳ್ಳಿ ಹಾಕಿದ ಸಚಿವ ಆರ್.ಅಶೋಕ್ ಹಳ್ಳಿ ಹಳ್ಳಿಗೆ ತೆರಳಿ ಟೆಸ್ಟ್ ಮಾಡಿಸಲು ತೀರ್ಮಾನಿಸಿರುವುದಾಗಿ ತಿಳಿಸಿದರು. ಜಿಲ್ಲಾಧಿಕಾರಿಗಳು ತಂಡ ಮಾಡಿ ಕಳಿಸಲಾಗುತ್ತದೆ. ಪ್ರತಿ ಹಳ್ಳಿಗೆ ಎರಡು ದಿನಕ್ಕೊಮ್ಮೆ ತಂಡ ಹೋಗಲಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಿದೆ. ವೈದ್ಯಾಧಿಕಾರಿಗಳೇ ಹಳ್ಳಿಗೆ ನಡೆಯಿರಿ ಎಂಬ ಯೋಜನೆ ಮಾಡಲಿದ್ದೇವೆ ಎಂದರು.
ಇನ್ನು ಒಂದು ಸಾವಿರ ಅನಾಥ ಶವಗಳ ಅಸ್ಥಿ ಸರ್ಕಾರದ ಬಳಿ ಇದೆ. ಮೃತರ ಸಂಬಂಧಿಕರು ಮೊಬೈಲ್ ಸ್ವಿಚ್ ಆಫ್ ಇದೆ. ನಾವು ಅಸ್ಥಿ ತೆಗೆದುಕೊಳ್ಳಲು ಮನವಿ ಮಾಡುತ್ತಿದ್ದೇವೆ. ಆದರೆ ಅವರವರ ಪರಿಸ್ಥಿತಿದಿಂದ ಅಸ್ಥಿ ಪಡೆಯುತ್ತಿಲ್ಲ. ಹೀಗಾಗಿ ಸರ್ಕಾರವೇ ಸಂಸ್ಕಾರ ಮಾಡಲು ತೀರ್ಮಾನಿಸಿದೆ. ಕಂದಾಯ ಇಲಾಖೆ ಗೌರವಯುತವಾಗಿ ಸಂಸ್ಕಾರ ಮಾಡಲಿದೆ. ಬಡವ ಬಲ್ಲಿದ ಎಂದು ಭೇದ ಭಾವ ಮಾಡಲ್ಲ. ಪಂಚಭೂತಗಳಲ್ಲಿ ಲೀನವಾಗುವಂತೆ ನೀರಿನಲ್ಲಿ ಸಂಪ್ರದಾಯಬದ್ಧವಾಗಿ ವಿಸರ್ಜನೆ ಮಾಡಲಿದ್ದೇವೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.
ಸಾವಿನ ವಿಚಾರದಲ್ಲಿ ರಾಜಕೀಯ ಮಾಡಬಾರದು. ರಾಜಕೀಯ ಮಾಡಿದವರು ಮೂಲೆ ಸೇರಿದ್ದಾರೆ. ವಿಪಕ್ಷ ನಾಯಕರು ಅಧಿಕಾರಿಗಳ ಸಭೆ ನಡೆಸಲು ಬರುವುದಿಲ್ಲ. ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೇ ಈ ಪತ್ರ ಬರೆದಿದ್ದರು.ಪತ್ರ ಬರೆದು ಮಾಹಿತಿ ಪಡೆಯಲಿ ಎಂದು ವಿಪಕ್ಷ ನಾಯಕರಿಗೆ ತಿರುಗೇಟು ನೀಡಿದರು.
Comments are closed.