ಬೆಂಗಳೂರು: ರಾಜ್ಯದಲ್ಲಿ ಕೊರೊನಾ 2ನೇ ಅಲೆ ಕಡಿಮೆಯಾಗುತ್ತಿದ್ದು ಬಹುತೇಕ ಚಟುವಟಿಕೆಗೆ ಶರತ್ತುಬದ್ಧ ವಿನಾಯತಿ ನೀಡಿ ವಾರಗಳೇ ಕಳೆದಿದ್ದು ಜನಜೀವನ ಸಾಮಾನ್ಯ ಸ್ಥಿತಿಗೆ ಮರಳುತ್ತಿರುವ ಬೆನ್ನಲ್ಲೇ ಶಾಲಾ-ಕಾಲೇಜುಗಳನ್ನು ಪುನರಾರಂಭಿಸಬೇಕೆಂಬ ಒತ್ತಾಯಕ್ಕೆ ಪೂರಕವಾಗಿ ಪುನರಾರಂಭದ ಬಗ್ಗೆ ಶಿಕ್ಷಣ ಸಚಿವ ಸುರೇಶ್‌ಕುಮಾರ್ ಇಂದು (ಜೂ.28 ಸೋಮವಾರ) ಉನ್ನತ ಮಟ್ಟದ ಸಭೆ ನಡೆಸಲಿದ್ದಾರೆ.
ಕೊರೋನಾ ಕಾರಣದಿಂದ ಕಳೆದ ಒಂದೂವರೆ ವರ್ಷದಿಂದ ಮುಚ್ಚಿರುವ ಶಾಲೆಗಳನ್ನು ಆರಂಭಿಸುವಂತೆ ತಜ್ಞರ ಸಮಿತಿಯು ವರದಿ ನೀಡಿದೆ. ಕಾಲೇಜುಗಳನ್ನು ವಿದ್ಯಾರ್ಥಿಗಳಿಗೆ ಕೊರೊನಾ ಲಸಿಕೆ ನೀಡಿದ ನಂತರ ಜುಲೈ ಇಲ್ಲವೆ ಆಗಸ್ಟ್‌ನಲ್ಲಿ ಆರಂಭಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವರು ಈಗಾಗಲೇ ಹೇಳಿದ್ದಾರೆ. ಶಾಲೆಗಳ ಪುನರಾರಂಭಕ್ಕೆ ಒತ್ತಡಗಳು ಹೆಚ್ಚಿವೆ.
ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಶಾಲೆಗಳ ಪುನರಾರಂಭದ ಬಗ್ಗೆ ಚರ್ಚಿಸಲು ಶಿಕ್ಷಣ ಸಚಿವ ಸುರೇಶ್‌ಕುಮಾರ್ ಶಿಕ್ಷಣ ಇಲಾಖೆಯ ಉನ್ನತಾಧಿಕಾರಿಗಳು, ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು, ಜಿಲ್ಲಾ ಆರೋಗ್ಯಾಧಿಕಾರಿಗಳು, ಜಿಪಂ ಸಿಇಓಗಳು ಹಾಗೂ ಡಿಡಿಪಿಐಗಳ ಜತೆ ವೀಡಿಯೊ ಕಾನ್ಫರೆನ್ಸ್ ಮೂಲಕ ಚರ್ಚೆ ನಡೆಸುವರು.
ಈ ಸಭೆಯಲ್ಲಿ ದೇಶದ ಇತರ ರಾಜ್ಯಗಳಲ್ಲಿ ಶಾಲೆಗಳನ್ನು ತೆರೆಯಲು ತೆಗೆದುಕೊಂಡಿರುವ ಮುಂಜಾಗೃತಾ ಕ್ರಮಗಳು, ಹಾಗೆಯೇ ರಾಜ್ಯದಲ್ಲೂ ಶಾಲೆಗಳನ್ನು ಪುನರಾರಂಭಿಸಬಹುದೇ, ಆನ್‌ಲೈನ್ ತರಗತಿಯ ಬದಲು ಭೌತಿಕ ತರಗತಿಗಳನ್ನು ನಡೆಸುವುದು ಸೂಕ್ತವೇ ಎಂಬಿತ್ಯಾದಿ ವಿಚಾರಗಳ ಬಗ್ಗೆ ಚರ್ಚೆಗಳು ನಡೆಯಲಿದೆ.ಕೊರೊನಾ ಸೋಂಕಿನ ಪ್ರಮಾಣ ಕಡಿಮೆ ಇರುವ ಜಿಲ್ಲೆಗಳಲ್ಲಿ ಶಾಲೆಗಳನ್ನು ತೆರೆಯಲು ಸಾಧ್ಯವೇ ಎಂಬ ಬಗ್ಗೆಯೂ ಚರ್ಚೆಗಳು ನಡೆಯಲಿದ್ದು, ಮೊದಲಿಗೆ ವಿದ್ಯಾಗಮ ಯೋಜನೆಯನ್ನು ಆರಂಭಿಸಿ ನಂತರ ಪಾಳಿ ಪದ್ಧತಿಯಲ್ಲಿ ತರಗತಿಗಳನ್ನು ಆರಂಭಿಸುವುದು ಸೂಕ್ತವೇ ಎಂಬ ಬಗ್ಗೆಯೂ ಈ ಸಭೆಯಲ್ಲಿ ಚರ್ಚೆಗಳು ನಡೆಯಲಿವೆ.
(ಸಾಂದರ್ಭಿಕ ಚಿತ್ರಗಳು)
ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಿರ್ಧಾರ…
ಜುಲೈ ಮೂರನೇ ವಾರದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ನಡೆಸಲು ಸಿದ್ಧತೆಗಳು ನಡೆದಿದ್ದು, ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ದಿನಾಂಕ ಈ ಸಭೆಯಲ್ಲಿ ಅಂತಿಮಗೊಳ್ಳುವ ಸಾಧ್ಯತೆಗಳಿವೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಶಿಕ್ಷಣ ಇಲಾಖೆ ಈಗಾಗಲೇ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
Comments are closed.