ಕರ್ನಾಟಕ

ಬೆಂಗಳೂರಿನ ನಾಗರಬಾವಿಯ ಉಸುರು ಫೌಂಡೇಷನ್‌ ವೃದ್ಧಾಶ್ರಮದಲ್ಲಿ ವೃದ್ಧೆಯ ಕೊಲೆ

Pinterest LinkedIn Tumblr

ಬೆಂಗಳೂರು: ನಾಗರಬಾವಿಯ ಉಸುರು ಫೌಂಡೇಷನ್‌ ವೃದ್ಧಾಶ್ರಮದಲ್ಲಿ ವೃದ್ಧೆಯೊಬ್ಬರಿಗೆ ಊಟ ನೀಡದೆ ಕತ್ತಲು ಕೋಣೆಯಲ್ಲಿ ಬಂಧಿಸಿ, ಹಲ್ಲೆ ಮಾಡಿ ಕೊಲೆಗೈಯ್ಯಲಾಗಿದೆ. ಈ ಸಂಬಂಧ ಆರು ಆರೋಪಿಗಳನ್ನು ಆರ್‌. ಎಂ. ಸಿ. ಯಾರ್ಡ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಉಸುರು ಫೌಂಡೇಷನ್‌ನಲ್ಲಿದ್ದ ಕಮಲಮ್ಮ (82) ಕೊಲೆಯಾದ ವೃದ್ಧೆ. ಕೊಲೆಯಾದ ಮಹಿಳೆಯ ಪುತ್ರ ಜಿ. ಕೆ. ರಾಮಚಂದ್ರ ನೀಡಿದ ದೂರಿನ ಮೇರೆಗೆ ಉಸುರು ಫೌಂಡೇಷನ್‌ ವೃದ್ಧಾಶ್ರಮದ ಮಾಲೀಕ ಯೋಗೇಶ್‌, ವಾರ್ಡನ್‌ ಭಾಸ್ಕರ್‌, ಮಂಜು, ಸಿಬ್ಬಂದಿ ಜಾನ್‌ ಹಾಗೂ ಪ್ರೇಮಾ, ವಸಂತ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.

ಏನಿದು ಘಟನೆ?: ರಾಮಚಂದ್ರ ಅವರು ತನ್ನ ತಾಯಿ ಕಮಲಮ್ಮ ಅವರಿಗೆ ಮರೆವು ಕಾಯಿಲೆಯಿದ್ದ ಕಾರಣ ಒಂದು ವರ್ಷದ ಹಿಂದೆ ನಾಗರಬಾವಿಯ ಉಸುರು ಫೌಂಡೇಷನ್‌ ವೃದ್ಧಾಶ್ರಮಕ್ಕೆ ಸೇರಿಸಿದ್ದರು. ಆಶ್ರಮದ ಮಾಲೀಕ ಕಮಲಮ್ಮ ಅವರಿಗೆ ಚಿಕಿತ್ಸೆ ಕೊಡಿಸುವುದರ ಜತೆಗೆ ಅವರನ್ನು ಜೋಪಾನವಾಗಿ ನೋಡಿಕೊಳ್ಳುವ ಭರವಸೆಯನ್ನೂ ನೀಡಿದ್ದರು. ಇದಕ್ಕೆ ರಾಮಚಂದ್ರ ಪ್ರತಿ ತಿಂಗಳು ಹತ್ತು ಸಾವಿರ ರೂ. ಪಾವತಿಸುತ್ತಿದ್ದರು.

ಆದರೆ, ಕಳೆದು 20 ದಿನಗಳ ಹಿಂದೆ ಪುತ್ರನಿಗೂ ಮಾಹಿತಿ ನೀಡದೆ ವೃದ್ಧೆಯನ್ನು ನಾಗರಬಾವಿಯಿಂದ ಕಂಠೀರವ ಸ್ಟುಡಿಯೋ ಶಾಖೆಗೆ ವರ್ಗಾಯಿಸಿದ್ದರು. ಬಳಿಕ ಆಗಸ್ಟ್ 7ರಂದು ಯೋಗೇಶ್‌, ರಾಮಚಂದ್ರ ಅವರಿಗೆ ಕರೆ ಮಾಡಿ ‘ನಿಮ್ಮ ತಾಯಿಯ ಆರೋಗ್ಯ ತೀರಾ ಹದಗೆಟ್ಟಿದೆ. ಅವರನ್ನು ಅಂಬ್ಯುಲೆನ್ಸ್‌ನಲ್ಲಿಆಸ್ಪತ್ರೆಗೆ ಕರೆದೊಯ್ಯಲಾಗುತ್ತಿದೆ’ ಎಂದು ತಿಳಿಸಿದರು.

ಇದರಿಂದ ಗಾಬರಿಗೊಂಡ ರಾಮಚಂದ್ರ, ಆಶ್ರಮಕ್ಕೆ ಬಂದು ತನ್ನ ತಾಯಿ ವಾಸವಿದ್ದ ಕೊಠಡಿ ಪರಿಶೀಲಿಸಿದ್ದಾರೆ. ಅಲ್ಲಿ ತಾಯಿ ಇಲ್ಲದಿದ್ದಾಗ ಪಕ್ಕದ ಕೊಠಡಿ ನೋಡಿದಾಗ ಅಲ್ಲಿ ರಕ್ತದ ಕಲೆಗಳು ಕಂಡುಬಂದಿವೆ. ಅನುಮಾನದ ಮೇಲೆ ಫೌಂಡೇಷನ್‌ನ ಸಿಬ್ಬಂದಿಯನ್ನು ಕೇಳಿದಾಗ ಒಬ್ಬೊಬ್ಬರು ಒಂದೊಂದು ಉತ್ತರ ನೀಡಿದ್ದಾರೆ.

ಫೌಂಡೇಶನ್‌ ಮಾಲೀಕ ಯೋಗೇಶ್‌ಗೆ ಕರೆ ಮಾಡಿ ಕೇಳಿದಾಗ, ಕಮಲಮ್ಮ ಅವರ ಮೃತದೇಹ ಅಂಬ್ಯುಲೆನ್ಸ್‌ನಲ್ಲಿ ಇರುವುದಾಗಿ ತಿಳಿಸಿದ್ದಾರೆ. ಬಳಿಕ ಮೃತದೇಹ ಪರಿಶೀಲಿಸಿದಾಗ ತಲೆ ಮತ್ತು ಕಿವಿ ಭಾಗದಲ್ಲಿ ಗಾಯವಾಗಿರುವುದು ಕಂಡು ಬಂದಿದೆ. ಅಲ್ಲದೆ, ಕೈಗಳಲ್ಲಿ ರಕ್ತದ ಕಲೆಗಳಾಗಿದ್ದವು.

ಈ ಬಗ್ಗೆ ಸಿಬ್ಬಂದಿ ಜಾನ್‌ ಅವರನ್ನು ಕೇಳಿದಾಗ ಕಮಲಮ್ಮ ಹಾಗೂ ವಸಂತಾ ಎಂಬುವರನ್ನು ಒಂದೇ ಕೊಠಡಿಯಲ್ಲಿ ಇರಿಸಲಾಗಿತ್ತು. ಈ ವೇಳೆ ಇಬ್ಬರ ನಡುವೆ ಗಲಾಟೆಯಾಗಿ ವಸಂತಾ ಅವರು ಕಮಲಮ್ಮನನ್ನು ಕೊಲೆ ಮಾಡಿದ್ದಾರೆ ಎಂದು ತಿಳಿಸಿದ್ದಾನೆ. ಸಂಶಯಗೊಂಡ ರಾಮಚಂದ್ರ, ಆರ್‌.ಎಂ.ಸಿ. ಯಾರ್ಡ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಕತ್ತಲೆ ಕೋಣೆಯಲ್ಲಿ ಕೊಲೆ: ಮರೆವಿನ ಕಾಯಿಲೆಯಿಂದ ಬಳಲುತ್ತಿದ್ದ ಕಮಲಮ್ಮ ಆಶ್ರಮದಲ್ಲಿ ಹೆಚ್ಚಾಗಿ ಕೂಗಾಡುತ್ತಿದ್ದರಂತೆ. ಇವರನ್ನು ನಿಯಂತ್ರಣದಲ್ಲಿರಿಸಲು ಇವರ ಜತೆ ಗಲಾಟೆ ಮಾಡುತ್ತಿದ್ದ ಇಬ್ಬರು ಮಹಿಳೆ ಸೇರಿದಂತೆ ಮೂವರನ್ನು ಒಂದೇ ರೂಮಿನಲ್ಲಿ ಕೂಡಿ ಹಾಕಿದ್ದರು ಎನ್ನಲಾಗಿದೆ.

ಅನ್ನ, ನೀರು ಕೊಡದೇ ಒಂದು ದಿನ ಕತ್ತಲೆ ರೂಮಿನಲ್ಲಿಯೇ ಇರಿಸಲಾಗಿದೆ. ಹಸಿವಿನಿಂದ ಬಳಲುತ್ತಿದ್ದ ಕಮಲಮ್ಮ, ಮತ್ತಷ್ಟು ಜೋರಾಗಿ ಕಿರುಚಿಕೊಂಡಾಗ ಜತೆಯಲ್ಲಿದ್ದ ವಸಂತಾ ಎಂಬುವರು ಅಲ್ಲೇ ಇದ್ದ ಕುರ್ಚಿಯಿಂದ ಕಮಲಮ್ಮನಿಗೆ ಹಲ್ಲೆ ಮಾಡಿದ್ದಾರೆ. ಪರಿಣಾಮ ರಕ್ತಸ್ರಾವವಾಗಿ ಸ್ಥಳದಲ್ಲೇ ವೃದ್ಧೆ ಪ್ರಾಣ ಬಿಟ್ಟಿದ್ದಾರೆ.

ಈ ವಿಚಾರ ಆಶ್ರಮದವರಿಗೆ ಗೊತ್ತಾಗುತ್ತಿದ್ದಂತೆಯೇ ಕೊಲೆಯಾಗಿರುವ ವಿಷಯ ಮರೆಮಾಚಲು ಶವವನ್ನು ಬಚ್ಚಿಟ್ಟಿದ್ದಾರೆ. ತನಿಖೆ ಕೈಗೊಂಡಿದ್ದ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ಕಮಲಮ್ಮ ಇದ್ದ ಕೊಠಡಿಗೂ ಕೊಲೆಯಾದ ಸ್ಥಳ ಬೇರೆ ಬೇರೆಯದಾಗಿತ್ತು. ಈ ವೇಳೆ, ಪೊಲೀಸರು ಹುಡುಕಾಟ ನಡೆಸಿದಾಗ ಕತ್ತಲೆ ಕೋಣೆಯೊಂದು ಪತ್ತೆಯಾಗಿದೆ. ಅಲ್ಲಿ ರಕ್ತದ ಕಲೆ ಹಾಗೂ ಹತ್ಯೆಯಾಗಿರುವ ಕುರುಹು ಹಾಗೂ ಸಿಬ್ಬಂದಿಯ ಅನುಮಾನಾಸ್ಪದ ವರ್ತನೆ ಕಂಡು ಆರೋಪಿಗಳನ್ನು ಗುಮಾನಿ ಮೇರೆಗೆ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದಾಗ ಸತ್ಯ ಬಾಯ್ಬಿಟ್ಟಿದ್ದಾರೆ.

Comments are closed.