ಕರ್ನಾಟಕ

ಪುರುಷರು ಮಾಡುವ ತಪ್ಪಿಗೆ ಮಹಿಳೆಯರು ಯಾಕೆ ತಪ್ಪಿತಸ್ಥರಾಗಬೇಕು?- ನಟಿ ರಮ್ಯಾ ಪ್ರಶ್ನೆ

Pinterest LinkedIn Tumblr

ಬೆಂಗಳೂರು: ಮೈಸೂರು ವಿದ್ಯಾರ್ಥಿ ಅತ್ಯಾಚಾರ ಪ್ರಕರಣದ ಕುರಿತು ನಡೆಯುತ್ತಿರುವ ಚರ್ಚೆಯ ಬೆನ್ನಲ್ಲೇ ಇದೀಗ ಸ್ಯಾಂಡಲ್ ವುಡ್ ನಟಿ ರಮ್ಯಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪ್ರತಿ ಬಾರಿಯೂ ಪುರುಷರು ಮಾಡಿದ ತಪ್ಪಿಗೆ ಮಹಿಳೆಯರನ್ನೇ ಯಾಕೆ ತಪ್ಪಿತಸ್ಥರನ್ನಾಗಿ ಮಾಡಲಾಗುತ್ತದೆ ಎಂದು ಪ್ರಶ್ನಿಸಿದ್ದಾರೆ.

ತಮ್ಮ ಸೋಷಿಯಲ್ ಮೀಡಿಯಾದ ಅಧೀಕೃತ ಫೇಸ್ಬುಕ್ ಖಾತೆಯಲ್ಲಿ ಈ ಬಗ್ಗೆ ಬರೆದಿರುವ ರಮ್ಯಾ, ‘ಮಹಿಳೆಯರ ಮೇಲೆ ಪುರುಷರಿಂದಾಗುವ ಪ್ರತಿಯೊಂದು ಅಪರಾಧಕ್ಕೂ ಮಹಿಳೆಯರನ್ನೇ ದೂಷಿಸಲಾಗುತ್ತದೆ. ಅದು ಅತ್ಯಾಚಾರವಾಗಲಿ ಅಥವಾ ದೈಹಿಕ ಅಥವಾ ಮಾನಸಿಕ ದೌರ್ಜನ್ಯವೇ ಆಗಲಿ.. ಮಹಿಳೆಯರಾದ ನಾವೇ ದೂಷಣೆಗೆ ಒಳಗಾಗುತ್ತೇವೆ. ಇದು ನಿನ್ನದೇ ತಪ್ಪು, ನೀನು ಹಾಗೆ ಹೇಳಬಾರದಿತ್ತು, ನೀನು ಹಾಗೆ ಮಾಡಬಾರದಿತ್ತು, ನೀನು ಅದನ್ನ ಧರಿಸಬಾರದಿತ್ತು, ನಿನ್ನ ಉಡುಪು ತೀರಾ ಬಿಗಿಯಾಗಿದೆ ಮತ್ತು ತೀರಾ ಚಿಕ್ಕದಾಗಿದೆ, ತೀರಾ ತಡವಾಗಿ ನೀನು ಮನೆಯಿಂದ ಹೊರಗೆ ಹೋಗಬಾರದಿತ್ತು, ನೀನು ಮೇಕಪ್ ಧರಿಸಬಾರದಿತ್ತು, ಕೆಂಪು ಲಿಪ್ ಸ್ಕಿಕ್ ಯಾಕೆ ಹಾಕೊಂಡಿದ್ದೆ – ಇದನ್ನೆಲ್ಲ ನಾವು ಆಗಾಗ ಕೇಳುತ್ತಲೇ ಇರುತ್ತೇವೆ! ಯಾಕೆ? ಯಾಕಂದರೆ, ಪುರುಷರು ಪುರುಷರಾಗಿಯೇ ಇರುತ್ತಾರೆ. ನಾವು ಮಾತ್ರ ಬದಲಾಗಬೇಕು. ನಾವು ಮಾತ್ರ ಕಾಂಪ್ರೊಮೈಸ್ ಆಗಬೇಕು. ನಾವು ಮಾತ್ರ ಅಡ್ಜಸ್ಟ್ ಮಾಡಿಕೊಳ್ಳಬೇಕು. ನಾವು ಎಲ್ಲವನ್ನೂ ಸಹಿಸಿಕೊಳ್ಳಬೇಕು. ಇಲ್ಲ..! ಇನ್ನಾಗಲ್ಲ..! ಈ ನಾನ್‌ ಸೆನ್ಸ್‌ಗೆ ಈ ಕೂಡಲೆ ಪೂರ್ಣವಿರಾಮ ಇಡಿ! ನಿಜ ಹೇಳಬೇಕು ಅಂದ್ರೆ, ನಾನು ಇದನ್ನು ಮಾಡಿದ್ದೇನೆ. ನನ್ನ ಸ್ನೇಹಿತರೂ ಕೂಡ. ಆಪಾದನೆಯನ್ನು ಹೊತ್ತುಕೊಂಡಿದ್ದೇವೆ. ಆದರೆ ಇನ್ಮುಂದೆ ಇದನ್ನೆಲ್ಲಾ ಸಹಿಸಲು ಸಾಧ್ಯವಿಲ್ಲ. ಮಹಿಳೆಯರ ಮೇಲಿನ ಅಪರಾಧಗಳ ಬಗ್ಗೆ ಕುರುಡರಾಗಿರಬೇಡಿ. ಬದಲಾಗಿ ಈ ಬಗ್ಗೆ ಧ್ವನಿಯೆತ್ತಿ’ ಎಂದು ಬರೆದುಕೊಂಡಿದ್ದಾರೆ.

 

Comments are closed.