ಕರ್ನಾಟಕ

ವಿವಾಹಪೂರ್ವ ಗರ್ಭಧರಿಸಿ ಮೃತಪಟ್ಟ ಯುವತಿ: ಇಬ್ಬರು ಯುವಕರ‌ ಪೈಕಿ ‘ಅಪ್ಪ’ನ ಪತ್ತೆಗೆ ಡಿಎನ್‌ಎ ಪರೀಕ್ಷೆ..!

Pinterest LinkedIn Tumblr

ಶಿವಮೊಗ್ಗ: ವಿವಾಹದ ಮೊದಲೇ ಗರ್ಭ ಧರಿಸಿ ಹೆರಿಗೆ ನಂತರ ಯುವತಿ ಹಾಗೂ‌ ಗರ್ಭದಲ್ಲೇ ಶಿಶು ಮೃತಪಟ್ಟಿರುವ ಘಟನೆ ನಡೆದಿದ್ದು ಯುವತಿಯ ಗರ್ಭ ಧಾರಣೆಗೆ ಯಾರು ಕಾರಣರೆಂದು ತಿಳಿಯಲು ಶಿವಮೊಗ್ಗ ಪೊಲೀಸರು ಡಿಎನ್‌ಎ ಪರೀಕ್ಷೆಗೆ ಮುಂದಾಗಿದ್ದಾರೆ.

ತಾಲೂಕಿನ ಕುಂಸಿ ಗ್ರಾಮದ 20 ವರ್ಷ ವಯಸ್ಸಿನ ಯುವತಿಯೊಬ್ಬರು ಇತ್ತೀಚೆಗೆ ಮೃತಪಟ್ಟಿದ್ದು, ಪೋಷಕರು ಕುಂಸಿ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ.

ಇಬ್ಬರು ಯುವಕರ‌ ಮೇಲೆ ಗುಮಾನಿಯಿರುವ ಕಾರಣ ಗರ್ಭದಲ್ಲೇ ಮೃತಪಟ್ಟ ಶಿಶುವಿನ ಮತ್ತು ಬಾಣಂತಿಯ ಡಿಎನ್‌ಎ ಮಾದರಿ ಸಂಗ್ರಹಿಸಲಾಗಿದ್ದು, ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ಬಳಿಕವಷ್ಟೇ ಯುವತಿಯ ಗರ್ಭ ಧಾರಣೆಗೆ ಕಾರಣರು ಯಾರು ಎಂಬ ವಿಚಾರ ಬೆಳಕಿಗೆ ಬರಲಿದೆ. ತಿಂಗಳಾಗಿತ್ತು.

(ಸಾಂದರ್ಭಿಕ ಚಿತ್ರ)

ಘಟನೆ ವಿವರ: ಕಳೆದ ಶುಕ್ರವಾರ ರಾತ್ರಿ ಯುವತಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಆದರೆ, ಆಕೆ ಗರ್ಭ ಧರಿಸಿರುವ ವಿಚಾರ‌ ಗೌಪ್ಯವಾಗಿಟ್ಟಿದ್ದರಿಂದ ಮನೆಯಲ್ಲಿ ಯಾರಿಗೂ ತಿಳಿದಿರಲಿಲ್ಲ. ಅಸಿಡಿಟಿ ಸಮಸ್ಯೆಗಾಗಿ‌ ಮನೆ‌ಮದ್ದು ನೀಡಲಾಗಿತ್ತು. ಮಾರನೇ ದಿನ ನೋವು ಇನ್ನಷ್ಟು ಹೆಚ್ಚಾಗಿದ್ದು ರಕ್ತ ಸ್ರಾವ ಆಗುತ್ತಿರುವುದನ್ನು ಗಮನಿಸಿದ ಪೋಷಕರು, ಆಶಾ ಕಾರ್ಯಕರ್ತೆಗೆ ಮಾಹಿತಿ ನೀಡಿದ್ದಾರೆ. ಅವರು ಬಂದು ಪರೀಕ್ಷಿಸಿ ಶಿವಮೊಗ್ಗದ ಜಿಲ್ಲಾ ಮೆಗ್ಗಾನ್‌ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ.

ಆಸ್ಪತ್ರೆಯ ಹೆರಿಗೆ ಮತ್ತು ಸ್ತ್ರೀ ರೋಗ ಚಿಕಿತ್ಸಾ ಘಟಕಕ್ಕೆ ಆಕೆಯನ್ನು ದಾಖಲಿಸಿದ್ದು, ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಹೆರಿಗೆ ಮಾಡಿಸಲಾಗಿದೆ. ಹೊಟ್ಟೆಯಲ್ಲಿದ್ದ ಹೆಣ್ಣು ಮಗು ಗರ್ಭದಲ್ಲಿಯೇ ಮೃತಪಟ್ಟಿದೆ. ಬಾಣಂತಿಯು ತೀವ್ರ ರಕ್ತ ಸ್ರಾವದಿಂದ ಬಳಲಿ ಸಂಜೆ 4.45ರ ಸುಮಾರಿಗೆ ಮೃತ ಪಟ್ಟಿದ್ದಾಳೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಯುವತಿಯು ಬಿಕಾಂ ವಿದ್ಯಾಭ್ಯಾಸ ಅರ್ಧಕ್ಕೆ ನಿಲ್ಲಿಸಿದ್ದಳು. ಕುಂಸಿ ಗ್ರಾಮದಲ್ಲಿದ್ದಾಗ ಯುವಕನೊಬ್ಬ ಮದುವೆಯಾಗುವಂತೆ ಪೀಡಿಸುತ್ತಿದ್ದ ಎನ್ನಲಾಗಿದೆ. ತದನಂತರ ಯುವತಿಯು ಮೈಸೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುವುದಕ್ಕಾಗಿ ಹೋಗಿದ್ದಳು. ಅಲ್ಲಿ ಯುವತಿಯೊಬ್ಬಳ ರೂಮಿನಲ್ಲಿದ್ದಳು. ಕಳೆದ ಡಿಸೆಂಬರ್‌ನಲ್ಲಿ ಯುವಕನೊಬ್ಬನನ್ನು ಆಕೆ ಮನೆಗೆ ಕರೆದುಕೊಂಡು ಬಂದಿದ್ದು, ಆ ಯುವಕನನ್ನು ತನ್ನೊಂದಿಗೆ‌ ಕೆಲಸ‌ಮಾಡುವಾತ ಎಂದು ಕುಟುಂಬದವರಿಗೆ ಪರಿಚಯಿಸಿದ್ದಳು. 8 ದಿನ ಯುವತಿಯ ಮನೆಯಲ್ಲಿಯೇ ಇದ್ದ ಯುವಕ ಹಾಗೂ ಈಕೆ ಇಬ್ಬರೂ ನಂತರ ವಾಪಸ್‌ ಮೈಸೂರಿಗೆ ಹೋಗಿದ್ದರು. ಕೊರೊನಾ ಹೆಚ್ಚಾದ ಕಾರಣಕ್ಕೆ ಮಾರ್ಚ್ ತಿಂಗಳಿನಲ್ಲಿ ಆಕೆ ಕುಂಸಿಗೆ ಒಬ್ಬಳೇ ವಾಪಸ್ ಬಂದಿದ್ದಳು. ಹೊಟ್ಟೆ ಮುಂದೆ ಬಂದಿರುವ ಬಗ್ಗೆ ಪ್ರಶ್ನಿಸಿದ್ದಕ್ಕೆ ಹೊಟ್ಟೆ ಉಬ್ಬರಿಸಿದೆ ಎಂದು ಹಾರಿಕೆ ಉತ್ತರ ನೀಡಿದ್ದಳು ಎಂದು ತಿಳಿದುಬಂದಿದೆ.

 

Comments are closed.