ಬೆಂಗಳೂರು: ಆಸ್ತಿ ತೆರಿಗೆ ಪಾವತಿ ಮಾಡದ ಹಿನ್ನೆಲೆಯಲ್ಲಿ ಬೆಂಗಳೂರಿನ ಹೃದಯ ಭಾಗದಲ್ಲಿರುವ ಅತೀದೊಡ್ಡ ಮಂತ್ರಿಮಾಲ್ ಗೆ ಬೀಗ ಬಿದ್ದಿದೆ.
27 ಕೋಟಿ ರೂ. ತೆರಿಗೆ ಬಾಕಿ..
27 ಕೋಟಿ 22 ಲಕ್ಷ 6 ಸಾವಿರದ 302 ರೂಪಾಯಿ ಆಸ್ತಿ ತೆರಿಗೆ ಕಟ್ಟದೆ ಮಂತ್ರಿ ಮಾಲ್ ಮಾಲೀಕರು ಬಾಕಿ ಉಳಿಸಿಕೊಂಡಿದ್ದರು. ಆಸ್ತಿ ತೆರಿಗೆ ಪಾವತಿಸುವಂತೆ ಈ ಹಿಂದೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಲವು ಬಾರಿ ನೊಟೀಸ್ ನೀಡಿತ್ತು. ಆದರೆ ಮಾಲ್ ಮಾಲೀಕರು ಕ್ಯಾರೇ ಎಂದಿರಲಿಲ್ಲ. ಈ ನಿಟ್ಟಿನಲ್ಲಿ ಇಂದು ಕಠಿಣ ಕ್ರಮಕ್ಕೆ ಮುಂದಾದ ಬಿಬಿಎಂಪಿ ಮಾಲ್ ನ ಮುಖ್ಯ ದ್ವಾರಕ್ಕೆ ಬೀಗ ಹಾಕಿದೆ.
ಇಂದು ಬೆಳಗ್ಗೆ ಸಿಬ್ಬಂದಿಯೊಂದಿಗೆ ಮಂತ್ರಿ ಮಾಲ್ ಗೆ ತೆರಳಿದ ಬಿಬಿಎಂಪಿ ಜಂಟಿ ಆಯುಕ್ತ ಶಿವಸ್ವಾಮಿ ಮುಖ್ಯ ದ್ವಾರಕ್ಕೆ ಬೀಗ ಹಾಕಿದ್ದು ಮಾಲ್ ಗೆ ಹೋದ ಗ್ರಾಹಕರು ವಾಪಸ್ ಆಗಿದ್ದಾರೆ. ಬೀಗ ಜಡಿದಿರುವ ಪಾಲಿಕೆ ಮುಂದೆ ಮುಖ್ಯ ಆಯುಕ್ತರ ನಿರ್ಧಾರದಂತೆ ಕ್ರಮ ತೆಗೆದುಕೊಳ್ಳಲಿದೆ.
ಸದ್ಯಕ್ಕೆ 5 ಕೋಟಿ ರೂಪಾಯಿ ಆಸ್ತಿ ತೆರಿಗೆಯನ್ನು ಕಟ್ಟಬೇಕಾಗಿದ್ದು, ಅದಕ್ಕೆ ಒಪ್ಪದೆ ಹೋದರೆ ಮಾಲ್ ನ ವಸ್ತುಗಳನ್ನು ವಶಪಡಿಸಿಕೊಳ್ಳಲು ಕಾನೂನಿನಲ್ಲಿ ಅವಕಾಶವಿದೆ ಎಂದು ಜಂಟಿ ಆಯುಕ್ತ ಶಿವಸ್ವಾಮಿ ತಿಳಿಸಿದ್ದಾರೆ. ಸ್ಥಳದಲ್ಲಿ ಪೊಲೀಸ್ ಭದ್ರತೆಯನ್ನು ಕಲ್ಪಿಸಲಾಗಿದೆ.
ಈ ಹಿಂದೆ ಆಸ್ತಿ ತೆರಿಗೆ ಪಾವತಿಗೆ ಮಾಲ್ ಆಡಳಿತ ಮಂಡಳಿ ಬಿಬಿಎಂಪಿಗೆ ಚೆಕ್ ನೀಡಿದ್ದು ಅದು ಬೌನ್ಸ್ ಆಗಿತ್ತು. ಈ ಹಿನ್ನೆಲೆಯಲ್ಲಿ ಚೆಕ್ ಬೌನ್ಸ್ ಕೇಸು ದಾಖಲಿಸಲಾಗಿದ್ದು ಈ ಬಗ್ಗೆ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ.
Comments are closed.