ಬೆಂಗಳೂರು: ಬಿಟ್ ಕಾಯಿನ್ ದಂಧೆ ಪ್ರಕರಣದಲ್ಲಿ ಯಾರನ್ನು ರಕ್ಷಿಸುವ ಪ್ರಶ್ನೆಯಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಬಿಟ್ ಕಾಯಿನ್ ವಿಚಾರ ಅತ್ಯಂತ ಗಂಭೀರವಾಗಿದ್ದು, ಇದರಲ್ಲಿ ರಾಜಕಾರಣಿಗಳು, ಪೊಲೀಸ್ ಅಧಿಕಾರಿಗಳು ಸಹಿತ ಯಾರೇ ಭಾಗಿಯಾಗಿದ್ದರೂ ಪತ್ತೆ ಮಾಡಿ ಶಿಕ್ಷೆಗೊಳಪಡಿಸಲಾಗುವುದು.ಈ ವಿಚಾರವಾಗಿ ಸಿಐಡಿ ತನಿಖೆ ನಡೆಸುತ್ತಿದ್ದು, ಈ ಹಂತದಲ್ಲಿ ಹೇಳಿಕೆ ನೀಡಿದರೆ ತನಿಖೆಗೆ ತೊಂದರೆ ಆಗುತ್ತದೆ. ನಮ್ಮ ಪೊಲೀಸರು ಆಳಕ್ಕೆ ಹೋಗಿ ಮಾಹಿತಿ ತೆಗೆಯುತ್ತಾರೆಂದು ಹೇಳಿದ್ದಾರೆ.
ವಿರೋಧಪಕ್ಷದ ನಾಯಕರು ಚುನಾವಣೆ ಸಂದರ್ಭದಲ್ಲಿ ಯಾರದ್ದೋ ಮುಖಕ್ಕೆ ಮಸಿ ಹಚ್ಚಲು ಹೋಗಬಾರದು. ಅವರು ಹಿಂದೆ ಮುಖ್ಯಮಂತ್ರಿ ಆಗಿದ್ದರು. ಇಂತಹ ವಿಚಾರಗಳನ್ನು ಪಕ್ಷಾತೀತವಾಗಿ ಯೋಚಿಸಬೇಕು. ಅಸ್ಪಷ್ಟವಾಗಿ ಹೇಳಿಕೆ ನೀಡುವುದು ಸರಿಯಲ್ಲ, ರಾಜಕಾರಣಿಗಳು ಕಾಂಗ್ರೆಸ್ನವರೇ ಇರಬಹುದು, ಬಿಜೆಪಿಯವರೇ ಆಗಿರಬಹುದು. ಅಪರಾಧಿಗಳನ್ನು ಕಾನೂನಿನ ಸೂತ್ರದಡಿ ತರಲಾಗುತ್ತದೆ. ತಪ್ಪು ಮಾಡಿದ್ದರೆ ಶಿಕ್ಷೆ ಆಗುತ್ತದೆ ಎಂದು ತಿಳಿಸಿದರು. ಹಗರಣದಲ್ಲಿ ಪೊಲೀಸರೇ ಭಾಗಿಯಾಗಿದ್ದರೂ ಕೂಡ ಅವರಿಗೆ ಶಿಕ್ಷ ನೀಡಲಾಗುತ್ತದೆ ಎಂದರು.
ಬಿಟ್ ಕಾಯಿನ್ ಪ್ರಕರಣವೇನು…?
ಕಳೆದ ವರ್ಷ ಸಿಸಿಬಿ ಬಲೆಗೆ ಬಿದ್ದಿದ್ದ ಬಿಟ್ ಕಾಯಿನ್ ದಂಧೆಯ ಅಂತರಾಷ್ಟ್ರೀಯ ಮಟ್ಟದ ಹ್ಯಾಕರ್ ಶ್ರೀಕಾಂತ್ ಅಲಿಯಾಸ್ ಶ್ರೀಕಿ ಬಂಧನ ಪ್ರಕರಣ ಈಗ ರಾಜಕೀಯ ತಿರುವು ಪಡೆದುಕೊಂಡಿದೆ.
ಡಾರ್ಟ್ ನೆಟ್ ನಲ್ಲಿ ಡ್ರಗ್ಸ್ ಖರೀದಿ ಹಾಗೂ ಮಾರಾಟ ಪ್ರಕರಣ ಸಂಬಂಧ ಶ್ರೀಕಿಯನ್ನು ಬಂಧಿಸಿದ್ದ ಸಿಸಿಬಿ, ಆತನನ್ನು ವಿಚಾರಣೆ ನಡೆಸಿದಾಗ ಬಿಟ್ ಕಾಯಿಲ್ ದಂಧೆ ಬೆಳಕಿಗೆ ಬಂದಿತ್ತು. ಆಗ ಆರೋಪಿಯಿಂದ ರೂ.9 ಕೋಟಿ ಮೌಲ್ಯದ 31 ಬಿಟ್ ಕಾಯಿನ್ ಗಳನ್ನು ಸಿಸಿಬಿ ಜಪ್ತಿ ಮಾಡಿತ್ತು. ಈ ಪ್ರಕರಣದ ತನಿಖೆ ಪೂರ್ಣಗೊಳಿಸಿದ ಸಿಸಿಬಿ, ಇದೇ ವರ್ಷದ ಮಾರ್ಚ್ ನಲ್ಲಿ ಆತನ ಮೇಲೆ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿತ್ತು.
ವಿದೇಶದಿಂದ ಡ್ರಗ್ಸ್ ಖರೀದಿಗೆ ಗಣ್ಯರಮಕ್ಕಳು ಬಿಟ್ ಕಾಯಿನ್ ಬಳಸುತ್ತಿದ್ದರು. ಹೀಗಾಗಿ ಬಿಟ್ ಕಾಯಿನ್ ಪಡೆಯುವ ಸಲುವಾಗಿ ಶ್ರೀಕಿ ನೆರವನ್ನು ಅವರು ಪಡೆದಿದ್ದರು. ಸಿಸಿಬಿ ತನಿಖೆ ವೇಳೆ 3 ಬಿಟ್ ಕಾಯಿನ್ ಎಕ್ಸ್ ಚೇಂಜ್ ಏಜೆನ್ಸಿಗಳು, 10 ಪೋಕರ್ ವೆಬ್ ಸೌಟ್ ಗಳು ಹಾಗೂ 3 ಮಾಲ್ ವೇರ್ ಎಕ್ಸ್ ಪ್ಲೋಟೆಡ್ ನ್ನು ಶ್ರೀಕಿ ಹ್ಯಾಕ್ ಮಾಡಿದ್ದು ಬೆಳಕಿಗೆ ಬಂದಿತ್ತು.
ಈ ಸಂಬಂಧ ವಿದೇಶ ಕಂಪನಿಗಳಿಗೆ ಇಂಟರ್ ಪೋಲ್ ಮುಖಾಂತರ ಸಿಸಿಬಿ ಮಾಹಿತಿ ಸಹ ನೀಡಿತ್ತು ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಈ ಪ್ರಕರಣದಲ್ಲಿ ಆರೋಪಿಯಿಂದ ಹಣ ಜಪ್ತಿ ಮಾಡಿದ್ದ ಸಿಐಡಿ ಅಧಿಕಾರಿಗಳು, ಶ್ರೀಕಿ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವಂತೆ ಜಾರಿ ನಿರ್ದೇಶನಾಲಯಕ್ಕೆ ಪತ್ರ ಬರೆದಿದ್ದರು.
Comments are closed.