ಮುಂಬಯಿ : ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 4 ಖರೀದಿಗೆ ಆರ್ಡರ್ ಸಲ್ಲಿಸಿದ್ದ ಗ್ರಾಹರೊಬ್ಬರಿಗೆ ಫ್ಲಿಪ್ ಕಾರ್ಟ್ ನಿರ್ಮಾ ಬಾರ್ ಸೋಪ್ ಕಳುಹಿಸಿದೆ.
ಮುಂಬಯಿಯ ವಾಲ್ಕೇಶ್ವರದ ಆನಂದ್ ಭಾಲಾಕಿಯ ಅವರು ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 4 ಖರೀದಿಗೆ ಆರ್ಡರ್ ಬುಕ್ ಮಾಡಿದ್ದರು. ಫ್ಲಿಪ್ ಕಾರ್ಟ್ ನಿಂದ ತಮ್ಮ ಹೆಸರಿಗೆ ಬಂದ ಪಾರ್ಸೆಲ್ ಓಪನ್ ಮಾಡಿ ನೋಡಿದ ಅವರಿಗೆ ಅದರೊಳಗೆ ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 4 ಬದಲಿಗೆ ನಿರ್ಮಾ ಬಾರ್ ಸೋಪ್ ಇರುವುದನ್ನು ಕಂಡು ದಿಗಿಲಾಯಿತು.
ಭಾಲಾಕಿಯಾ ಅವರು ಮೊದಲು ಫ್ಲಿಪ್ ಕಾರ್ಟ್ ಕಂಪೆನಿಗೆ ದೂರು ನೀಡಿದರು. ಆದರೆ ಕಂಪೆನಿಯವರು ನಿಮ್ಮ ದೂರಿನಲ್ಲಿ ಸತ್ಯ ಇಲ್ಲ ಎಂದು ಉತ್ತರಿಸಿತು. ಆ ಬಳಿಕ ಭಾಲಾಕಿಯಾ ಅವರು ಮಲಬಾರ್ ಹಿಲ್ ಪೊಲೀಸ್ ಠಾಣೆಯಲ್ಲಿ ತಮಗಾದ ವಂಚನೆಗಾಗಿ ಫ್ಲಿಪ್ ಕಾರ್ಟ್ ವಿರುದ್ಧ ಕೇಸು ದಾಖಲಿಸಿದರು.
ಕಳೆದ ಮೇ 25ರಂದು ನಾನು ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 4 ಗಾಗಿ ಆರ್ಡರ್ ಬುಕ್ ಮಾಡಿದ್ದೆ. ಮೇ 30ರಂದು ನನಗೆ ಡೆಲಿವರಿ ಆಯಿತು. ನಾನು ಕ್ಯಾಶ್ – ಆನ್ – ಡೆಲಿವರಿ ಆಯ್ಕೆ ಮಾಡಿದ್ದರಿಂದ ಪಾರ್ಸೆಲ್ ಸ್ವೀಕರಿಸುವ ಮುನ್ನ 29,900 ರೂ. ಗಳನ್ನು ಡೆಲಿವರಿ ಬಾಯ್ ಗೆ ಪಾವತಿಸಿದೆ ಎಂದು ಭಾಲಾಕಿಯಾ ಹೇಳಿದ್ದಾರೆ. ಪಾರ್ಸೆಲ್ ತೆರೆದು ನೋಡಿದಾಗ ಅದರೊಳಗೆ ನಿರ್ಮಾ ಬಾರ್ ಸೋಪ್ ಮತ್ತು ಒಂದು ಎಂಡ್ರಾಯ್ಡ ಫೋನ್ ಚಾರ್ಜರ್ ಇತ್ತು. ನಾನು ಕೂಡಲೇ ಆ ಬಗ್ಗೆ ಡೆಲಿವರಿ ಮ್ಯಾನ್ ಗೆ ಫೋನ್ ಮಾಡಿ ತಿಳಿಸಿದೆ. ಆತ ನನ್ನ ಮನೆಯಿಂದ ಕೇವಲ ಹತ್ತೇ ನಿಮಿಷ ದೂರದಲ್ಲಿದ್ದ. ಆದರೆ ಆತ ನನಗೆ ಫ್ಲಿಪ್ ಕಾರ್ಟ್ ಕಸ್ಟಮರ್ ಕೇರ್ ನಂಬರ್‌ಗೆ ಫೋನ್ ಮಾಡಿ ದೂರು ದಾಖಲಿಸುವಂತೆ ಸೂಚಿಸಿದ ಎಂದು ಭಾಲಾಕಿಯಾ ಹೇಳಿದರು.
ಈ ಬೆಳವಣಿಗೆಯ ಬೆನ್ನಲ್ಲೇ ಫ್ಲಿಪ್ ಕಾರ್ಟ್ “ನಾವು ಗ್ರಾಹಕರ ವಿಶ್ವಾಸ ಉಳಿಸಿಕೊಳ್ಳುವುದಕ್ಕೆ ಶೇ.100 ಮಹತ್ವ ನೀಡುತ್ತೇವೆ. ಘಟನೆಯ ಬಗ್ಗೆ ಆಂತರಿಕ ತನಿಖೆ ನಡೆಸುತ್ತೇವೆ; ಈ ನಡುವೆ ನಾವು ನಮ್ಮ ಗ್ರಾಹಕರ ಮೇಲೆ ನಂಬಿಕೆ ಇರಿಸಿ ಆತ ಪಾವತಿಸಿರುವ 29,900 ರೂ.ಗಳನ್ನು ಮರಳಿಸಿದ್ದೇವೆ ಎಂದು ಹೇಳಿದೆ.
Comments are closed.