ಥಾಣೆ: ಕ್ಷುಲ್ಲಕ ಕಾರಣಕ್ಕೆ ಉಂಟಾದ ಜಗಳಕ್ಕೆ ಕೋಪಗೊಂಡ ವ್ಯಕ್ತಿಯೊಬ್ಬ ಚಲಿಸುವ ರೈಲಿನಿಂದ ಯುವತಿಯನ್ನು ಹೊರಗೆ ತಳ್ಳಿರುವ ಘಟನೆಯೊಂದು ಮಹಾರಾಷ್ಟ್ರದಲ್ಲಿ ನಡೆದಿದೆ.
ದಿನೇಶ್ ಯಾದವ್, ರೇಖಾ ನವೇಲ್ (22) ಎಂಬ ಯುವತಿಯನ್ನು ಚಲಿಸುವ ರೈಲಿನಿಂದ ಹೊರಗೆ ತಳ್ಳಿದ ವ್ಯಕ್ತಿಯಾಗಿದ್ದಾನೆ. ಮುಂಬೈ-ಗೋರಾಖ್ಪುರ ಎಕ್ಸ್ ಪ್ರೆಸ್ ರೈಲಿನಲ್ಲಿ ಹೋಗುತ್ತಿದ್ದ ವೇಳೆ ಮಹಿಳಾ ವಿಭಾಗಕ್ಕೆ ಆಗಾಗ ಬರುತ್ತಿದ್ದ ದಿನೇಶ್ ಅವರೊಂದಿಗೆ ನವೇಲ್ ಅವರು ವಾಗ್ವಾದಕ್ಕಿಳಿದಿದ್ದಾರೆ. ಈ ವೇಳೆ ಕೋಪಗೊಂಡ ದಿನೇಶ್ ಆಕೆಯನ್ನು ರೈಲಿನಿಂದ ಹೊರಗೆ ತಳ್ಳಿದ್ದಾನೆಂದು ತಿಳಿದುಬಂದಿದೆ.
ಸುದ್ದಿ ತಿಳಿಯುತ್ತಿದ್ದಂತೆ ದೊಂಬಿವಲಿ ಸರ್ಕಾರಿ ರೈಲ್ವೇ ಪೊಲೀಸರು ದಿನೇಶ್ ಯಾದವ್ ನನ್ನು ಬಂಧನಕ್ಕೊಳಪಡಿಸಿದ್ದು, ತನಿಖೆ ನಡೆಸುತ್ತಿದ್ದಾರೆ.
7 ಗಂಟೆ ಸುಮಾರಿಗೆ ಮಹಿಳೆಯೊಬ್ಬರು ನಡೆಯಲು ಬಹಳ ಕಷ್ಟ ಪಡುತ್ತಿದ್ದರು. ಈ ವೇಳೆ ಏನಾಯಿತು ಎಂದು ಆಕೆಯನ್ನು ಕೇಳಿದಾಗ. ಆಕೆ ತನಗೇನೂ ನೆನಪಿಲ್ಲ ಎಂದು ಹೇಳಿದಳು. ರೈಲಿನಿಂದ ಕೆಳಗೆ ಬಿದ್ದಿರಬಹುದು ಎಂದು ತಿಳಿದೆವು. ಆಕೆಯ ದೇಹದ ಕೆಲ ಭಾಗದಲ್ಲಿ ರಕ್ತಸ್ರಾವವಾಗುತ್ತಿತ್ತು. ಕುಳಿತುಕೊಳ್ಳಲು ಆಕೆಗೆ ಸಾಧ್ಯವಾಗುತ್ತಿರಲಿಲ್ಲ. ಕೂಡಲೇ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದೆವು ಎಂದು ಸ್ಥಳೀಯ ಅಮಿತ್ ಮಮುಹಾನ್ಕರ್ ಅವರು ಹೇಳಿದ್ದಾರೆ.
ದಿನೇಶ್ ಯಾದವ್ ರೈಲಿನಲ್ಲಿ ತನ್ನ ಪತ್ನಿಯೊಂದಿಗೆ ಬಂದಿದ್ದು, ಪತ್ನಿಯನ್ನು ಮಹಿಳಾ ವಿಭಾಗದಲ್ಲಿ ಕೂರಿಸಿದ್ದ. ಅಲ್ಲದೆ, ಪ್ರತೀ ನಿಲ್ದಾಣದಲ್ಲೂ ಮಹಿಳಾ ವಿಭಾಗಕ್ಕೆ ಬಂದು ಪರೀಕ್ಷಿಸುತ್ತಿದ್ದ. ಕೆಲವು ಗಂಟೆಗಳ ನಂತರ ನವೇಲ್ ಕೂಡ ತನ್ನ ತಾಯಿಯೊಂದಿಗೆ ರೈಲಿನ ಮಹಿಳಾ ವಿಭಾಗಕ್ಕೆ ಬಂದಿದ್ದಳು.
ಪ್ರತೀ ಬಾರಿ ದಿನೇಶ್ ಮಹಿಳಾ ವಿಭಾಗಕ್ಕೆ ಬಂದು ಹೋಗುತ್ತಿದ್ದುದ್ದರಿಂದ ನವೇಲ್ ಅವರು ದಿನೇಶ್ ಅವರೊಂದಿಗೆ ಮಾತಿನ ಚಕಮಕಿಗಿಳಿದಿದ್ದಾರೆ. ವಾಗ್ವಾದದಿಂದ ಬೇಸತ್ತು ಕೋಪಗೊಂಡ ದಿನೇಶ್ ಕೂಡಲೇ ಚಲಿಸುತ್ತಿದ್ದ ರೈಲಿನಿಂದ ನವೇಲ್ ಅವರನ್ನು ಕೆಳಗೆ ತಳ್ಳಿದ್ದಾನೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಸ್ತುತ ನವೇಲ್ ಅವರು ಫೋರ್ಟಿಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ವೈದ್ಯರು ಮಾಹಿತಿ ನೀಡಿದ್ದಾರೆ.
Comments are closed.