ಮುಂಬೈ: ವಿವಿಧ ವಿಧ್ವಂಸಕ ಕೃತ್ಯಗಳಲ್ಲಿ ತೊಡಗಿ ಪ್ರಸ್ತುತ ಬಂಧನದಲ್ಲಿರುವ ಭೂಗತ ಪಾತಕಿ ಅಬು ಸಲೇಂಗೆ ಜೈಲೇ ಮನೆಯಾಗಿದ್ದು, ಆತನಿಗೆ ಪೊಲೀಸರಿಂದ ರಾಜಾತಿಥ್ಯ ದೊರೆಯುತ್ತಿರುವ ಕುರಿತು ಮಾಹಿತಿಗಳು ಬಂದಿವೆ.
ಸಾಮಾಜಿಕ ಜಾಲತಾಣಗಳಲ್ಲಿ ಅಬು ಸಲೇಂನ ಕೆಲ ಫೋಟೋಗಳು ಹರಿದಾಡುತ್ತಿದ್ದು, ಈ ಫೋಟೋಗಳಲ್ಲಿ ಮುಂಬೈ ಪೊಲೀಸರ ವಿಚಾರಣಾ ಕೈದಿಯಾಗಿರುವ ಅಬು ಸಲೇಂ “ನೂತನ” ಪತ್ನಿ ಕೌಸರ್ ರೊಂದಿಗಿರುವ ಮತ್ತು ಜೈಲಲ್ಲಿ ವೈಭವೋಪೇತ ಜೀವನ ನಡೆಸುತ್ತಿದ್ದಾನೆ. ಪ್ರಸ್ತುತ ನವೀ ಮುಂಬೈನ ತಲೋಜಾ ಜೈಲಿನಲ್ಲಿರುವ ಅಬು ಸಲೇಂಗೆ ಮನೆಯಲ್ಲಿರುವ ಎಲ್ಲ ಬಗೆಯ ಸವಲತ್ತುಗಳನ್ನು ನೀಡಲಾಗಿದ್ದು, ಇವುಗಳೊಂದಿಗೆ ಆತನಿಗೆ ಪತ್ನಿಯೊಂದಿಗೆ ಜೈಲಲ್ಲೇ ಸಂಸಾರ ನಡೆಸುವ ಸ್ವಾತಂತ್ರ್ಯ ಕೂಡ ನೀಡಲಾಗಿದೆಯಂತೆ.
ಇನ್ನು ಅಬು ಸಲೇಂ ವಿಚಾರಣೆಗಾಗಿ ವಿವಿಧ ಜಿಲ್ಲೆಗಳಿಗೆ ಪ್ರಯಾಣಿಸುವ ವೇಳೆ ಆತನೊಂದಿಗೆ ಆತನ ನೂತನ ಪತ್ನಿ ಕೌಸರ್ ಳನ್ನು ಕೂಡ ಕರೆದೊಯ್ಯುತ್ತಿದ್ದು, ರೈಲಲ್ಲೇ ಭೂಗತ ಪಾತಕಿ ಸಂಸಾರ ನಡೆಸುತ್ತಿದ್ದಾನಂತೆ. ಕೌಸರ್ ಇದೀಗ 3 ತಿಂಗಳ ಗರ್ಭಿಣಿ ಎಂದು ತಿಳಿದುಬಂದಿದ್ದು, ರೈಲಲ್ಲಿ ಅಬು ಸಲೇಂ ಮತ್ತು ಆತನ ಪತ್ನಿ ಜೊತೆಗೇ ಊಟ ಮಾಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಮೂಲಗಳ ಪ್ರಕಾರ ಭೂಗತ ಪಾತಕಿ ಅಬು ಸಲೇಂ 26 ವರ್ಷದ ಕೌಸರ್ ಎಂಬಾಕೆಯನ್ನು ವಿವಾಹವಾಗಲು 2014ರಲ್ಲಿ ನ್ಯಾಯಾಲಯ ಅನುಮತಿ ನೀಡಿತ್ತು. ವಿವಿಧ ಪ್ರಕರಣಗಳಲ್ಲಿ ವಿಚಾರಣಾಧೀನ ಕೈದಿಯಾಗಿರುವ ಸಲೇಂನನ್ನು ದೆಹಲಿ, ಲಖನೌ ಮತ್ತು ಮುಂಬೈಗೆ ಪೊಲೀಸ್ ಬೆಂಗಾವಲಿನಲ್ಲಿ ಕರೆದೊಯ್ಯಲಾಗುತ್ತದೆ. ವಿಶೇಷವೆಂದರೆ ಭೂಗತಪಾತಕಿಯನ್ನು ವಿಚಾರಣೆಗೆ ಕರೆದೊಯ್ಯುವ ವೇಳೆ ಆತನ ಪತ್ನಿ ಕೌಸರ್ ಕೂಡ ಜೊತೆಗೆ ಪ್ರಯಾಣಿಸಿ, ಆತನಿಗೆ ಭೋಜನ ಕೂಡ ನೀಡುತ್ತಾರೆ ಅಂತೆ. ಇದಕ್ಕೆಲ್ಲಾ ಪೊಲೀಸರು ಮೂಕ ಪ್ರೇಕ್ಷಕರಾಗಿ ಅನುಮತಿ ನೀಡಿರುವುದು ಇದೀಗ ವ್ಯಾಪಕ ಟೀಕೆಗೆ ಗುರಿಯಾಗಿದೆ.
ಕೈದಿಗಳನ್ನು ಒಂದೆಡೆಯಿಂದ ಮತ್ತೊಂದು ಪ್ರದೇಶಕ್ಕೆ ಕರೆದೊಯ್ಯುವಾಗ ಅವರೊಂದಿಗೆ ಕುಟುಂಬದ ಯಾವುದೇ ಸದಸ್ಯರು ಪ್ರಯಾಣಿಸುವಂತಿಲ್ಲ ಎಂಬ ಕಾನೂನಿದ್ದು, ಪೊಲೀಸರೇ ಕಾನೂನು ಮುರಿದಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.
ಒಟ್ಟಾರೆ ಭೂಗತ ಪಾತಕಿ ಅಬು ಸಲೇಂ ಜೈಲಲ್ಲಿ ಇದ್ದರೂ, ಮನೆಯಲ್ಲಿ ಇದ್ದರೂ ಆತನ ವೈಭವೋಪೇತ ಜೀವನಕ್ಕೆ ಮಾತ್ರ ಯಾವುದೇ ತೊಂದರೆ ಬಾರದಂತೆ ಪೊಲೀಸರು ನೋಡಿಕೊಳ್ಳುತ್ತಿದ್ದಾರೆ.
Comments are closed.