ಹಲವರಿಗೆ ಖಾರ ಎಂದರೆ ಬಲು ಪ್ರೀತಿ. ಹೀಗೆ ಖಾರ ಇಷ್ಟ ಪಡುವವರಿಗೆ ಸಿಹಿಸುದ್ದಿ ಇದೆ. ಅದೇನೆಂದರೆ, ವಿಶ್ವದ ಅತ್ಯಂತ ಖಾರದ ಮೆಣಸಿನಕಾಯಿ ಈಗ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಇದು ಸಾಮಾನ್ಯ ಮೆಣಸಿನಕಾಯಿಗಿಂತ 400 ಪಟ್ಟು ಹೆಚ್ಚು ಖಾರವಿದೆ. ಈ ಮೆಣಸಿಗೆ ‘ಕೆರೋಲಿನಾ ರೀಪರ್’ ಎಂದು ನಾಮಕರಣ ಮಾಡಲಾಗಿದೆ.
ಸದ್ಯ ಇಂಗ್ಲೆಂಡ್ ಮಾರುಕಟ್ಟೆಯಲ್ಲಿ ಮಾತ್ರ ಮಾರಾಟವಾಗುತ್ತಿದ್ದು, ಶೀಘ್ರ ಬೇರೆ ದೇಶಗಳ ಮಾರುಕಟ್ಟೆಗೂ ಲಗ್ಗೆ ಇಡಲಿದೆ. ದಕ್ಷಿಣ ಕೆರೋಲಿನಾದ ಕಂಪನಿಯೊಂದು ಮೊಟ್ಟ ಮೊದಲ ಬಾರಿಗೆ ಈ ಮೆಣಸಿನಕಾಯಿ ತಳಿ ಅಭಿವೃದ್ಧಿಪಡಿಸಿತ್ತು.
ಸಾಲ್ವೇಟರ್ ಜೆನೊವೆಸ್ ಎಂಬ ಇಟಲಿಯ ರೈತ ಈ ಮೆಣಸಿನಕಾಯಿ ಬೆಳೆದಿದ್ದಾರೆ. ಇಂಗ್ಲೆಂಡ್ನಲ್ಲಿ ವಿಸ್ತಾರವಾದ ಕೃಷಿ ಭೂಮಿ ಹೊಂದಿರುವ ಜೆನೋವೆಸ್, ಬೆಡ್ಫೋರ್ಡ್ ಶೈರ್ನಲ್ಲಿರುವ ಏಳು ಎಕರೆಯಲ್ಲಿ ಈ ಮೆಣಸು ಬೆಳೆದಿದ್ದಾರೆ. ಮಂಗಳವಾರದಿಂದ ರೀಪರ್ ಮಾರಾಟವಾಗುತ್ತಿದ್ದು, ಜನರು ಇದನ್ನು ಕೊಂಡುಕೊಳ್ಳಲು ಮುಗಿಬೀಳುತ್ತಿದ್ದಾರೆ.
ಅಗ್ರಿಕಲ್ಚರಲ್ ಕಾಲೇಜಿನಲ್ಲಿ ಪದವಿ ಪಡೆದು ಖಾಸಗಿ ಕಂಪನಿಯೊಂದರಲ್ಲಿ ಜೆನೋವೆಸ್ ಕೆಲಸ ಮಾಡುತ್ತಿದ್ದರು. ವಿವಿಧ ತಳಿಯ ಮೆಣಸು ಬೆಳೆಯುವುದು ಇವರ ಹವ್ಯಾಸವಾಗಿತ್ತು. 2012ರಲ್ಲಿ ಕೆಲಸ ತೊರೆದ ಇವರು ಮೆಣಸಿನಕಾಯಿ ತಳಿ ಅಭಿವೃದ್ಧಿ ಕಾರ್ಯದಲ್ಲಿ ನಿರತರಾದರು. ಇಂಗ್ಲೆಂಡ್ನಲ್ಲಿ ಅತ್ಯಂತ ದೊಡ್ಡ ಮೆಣಸಿನಕಾಯಿ ಬೆಳೆಗಾರ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ.
ಹ್ಯಾಂಡ್ ಗ್ಲೌಸ್ ಕಡ್ಡಾಯ: ಕೆರೋಲಿನಾ ರೀಪರ್ನ್ನು ಬರಿಗೈಯಲ್ಲಿ ಮುಟ್ಟುವುದರಿಂದ ಚರ್ಮದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಹ್ಯಾಂಡ್ಗ್ಲೌಸ್ ಧರಿಸಿಯೇ ಈ ಮೆಣಸು ಮುಟ್ಟುವಂತೆ ಮಾರುಕಟ್ಟೆಗಳಲ್ಲಿ ಎಚ್ಚರಿಕೆ ಫಲಕ ಹಾಕಲಾಗಿದೆ.
Comments are closed.