ಮುಂಬೈ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸೋದರಿ ಹಸೀನಾ ಪಾರ್ಕರ್ ಳ ಕೊನೆಯ ಪುತ್ರ ಅಲಿಶಾ ಪಾರ್ಕರ್ ಬುಧವಾರ ಮುಂಬೈಯಲ್ಲಿ ಉದ್ಯಮಿಯೊಬ್ಬರ ಪುತ್ರಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಭಾರತಕ್ಕೆ ಬೇಕಾಗಿರುವ ಭೂಗತ ಪಾತಕಿ ದಾವೂದ್ ಸ್ಕೈಪ್ ಮೂಲಕ ಈ ಮದುವೆ ಸಮಾರಂಭದಲ್ಲಿ ಭಾಗವಹಿಸುತ್ತಾನೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರು ಸಮಾರಂಭದ ಮೇಲೆ ತೀವ್ರ ಕಣ್ಗಾವಲು ಇರಿಸಿದ್ದಾರೆ.
ಇಂದು ಬೆಳಗ್ಗೆ 11 ಗಂಟೆಯ ಸುಮಾರಿಗೆ ದಕ್ಷಿಣ ಮುಂಬೈನ ರಸೂಲ್ ಮಸೀದಿಯಲ್ಲಿ ಮೆಮೋನ್ ಕುಟುಂಬಕ್ಕೆ ಸೇರಿದ ಆಯೆಷಾ ನಗಾನಿ ಜತೆಗೆ ಅಲಿಶಾ ಪಾರ್ಕರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಕುಟುಂಬ ಸದಸ್ಯರು ಹಾಗೂ ಆಪ್ತರು ಮಾತ್ರ ಈ ಸಮಾರಂಭದಲ್ಲಿ ಭಾಗವಹಿಸಿದ್ದರು.
ಇಂದು ಸಂಜೆ ಜುಹುವಿನಲ್ಲಿರುವ ಟ್ಯುಲಿಪ್ ಸ್ಟಾರ್ ಹೊಟೇಲ್‌ನಲ್ಲಿ ಸತ್ಕಾರ ಕೂಟ ಆಯೋಜಿಸಲಾಗಿದ್ದು, ಈ ವೇಳೆ ದಾವೂದ್ ಇಬ್ರಾಹಿಂ ಸ್ಕೈಪ್ ವಿಡಿಯೋ ಕಾಲ್ ಮೂಲಕ ಸಮಾರಂಭ ವೀಕ್ಷಿಸಲಿದ್ದಾರೆ ಎನ್ನಲಾಗಿದೆ.
ಮುಂಬೈಯಲ್ಲಿ ಕಟ್ಟಡ ನಿರ್ಮಾಣ ಉದ್ಯಮದಲ್ಲಿ ತೊಡಗಿಕೊಂಡಿರುವ ಅಲಿಶಾ, ತಾಯಿ ಹಸೀನಾ ಅವರ ಬದುಕುಳಿದಿರುವ ಏಕೈಕ ಪುತ್ರನಾಗಿದ್ದಾನೆ.
ದಾವೂದ್ ಇಬ್ರಾಹಿಂ ನಿಕಟವರ್ತಿ ಭೂಗತ ಜಗತ್ತಿನ ಪಾತಕಿಗಳು ಒಂದೊಮ್ಮೆ ಈ ವಿವಾಹ ಸಮಾರಂಭಕ್ಕೆ ಆಗಮಿಸಿದರೆ, ಅವರನ್ನು ವಶಕ್ಕೆ ತೆಗೆದುಕೊಳ್ಳುವ ಯೋಜನೆಯ ಅಂಗವಾಗಿ ಸಮಾರಂಭಕ್ಕೆ ಬರುವ ಅತಿಥಿಗಳ ಮೇಲೆ ತೀವ್ರ ಕಣ್ಗಾವಲು ಇರಿಸುವಂತೆ ಮುಂಬೈ ಕ್ರೈಂ ಬ್ರಾಂಚ್, ಸುಲಿಗೆ ನಿಗ್ರಹ ದಳ ಹಾಗೂ ಯೂನಿಟ್ 1ರ ಸಿಬ್ಬಂದಿಗೆ ಸೂಚಿಸಿದೆ.
ಸಮಾರಂಭದ ವೇಳೆ ಪೊಲೀಸ್ ಸಿಬ್ಬಂದಿ ಕಟ್ಟೆಚ್ಚರ ವಹಿಸಲಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
1993ರ ಮುಂಬೈ ಸರಣಿ ಬಾಂಬ್ ಸ್ಫೋಟದ ಪ್ರಮುಖ ಆರೋಪಿಯಾಗಿರುವ ದಾವೂದ್, ಪಾಕಿಸ್ತಾನದಲ್ಲಿ(ಕರಾಚಿಯಲ್ಲಿ) ಅಡಗಿಕೊಂಡಿರುವುದಾಗಿ ನಂಬಲಾಗಿದೆ. ಭಾರತವು ಪಾಕಿಸ್ಥಾನಕ್ಕೆ ಈಗಾಗಲೇ ಹಲವಾರು ಬಾರಿ ದಾವೂದ್‌ನ ಪಾಸ್‌ಪೋರ್ಟ್ ಮಾಹಿತಿಗಳನ್ನು ಕೊಡುವಂತೆ ಕೇಳಿಕೊಂಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
ಮುಂಬೈ
Comments are closed.