ಮುಂಬೈ: ಕಮಲಾ ಮಿಲ್ಸ್ ಅಗ್ನಿ ದುರಂತದಲ್ಲಿ 14 ಮಂದಿ ಪ್ರಾಣ ಕಳೆದುಕೊಂಡ ಘಟನೆ ತೀವ್ರ ಚರ್ಚೆಗೆ ಕಾರಣವಾಗಿತ್ತು. ಆದರೆ ಅವಘಡ ನಡೆದಾಗ ಸಮಯಪ್ರಜ್ಞೆ ಮೆರೆದ ಶಿವಾಜಿ ಪಾಂಡೆ ಎಂಬ ಪೊಲೀಸ್ ಪೇದೆ 8 ಮಂದಿ ಪ್ರಾಣ ಕಾಪಾಡಿದ್ದರು. ಅವರು ಮಹಿಳೆಯೊಬ್ಬರನ್ನು ಭುಜದ ಮೇಲೆ ಹೊತ್ತುಕೊಂಡು ಬರುತ್ತಿರುವ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ಇದೀಗ ವೈರಲ್ ಆಗಿದೆ.
ಅವರ ಕರ್ತವ್ಯ ನಿರ್ವಹಣೆಯನ್ನು ಮೆಚ್ಚಿ ಮುಂಬೈ ಪೊಲೀಸ್ ಕಮೀಷನರ್ ಸನ್ಮಾನಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ಕಮೀಷನರ್ ದತ್ತಾತ್ರೇಯ ಪಡ್ಸಲ್ಗಿಕರ್, ಮೇಯರ್ ವಿಶ್ವನಾಥ್ ಮಹದೇಶ್ವರ ಹಾಜರಾಗಿ ಶಿವಾಜಿಯನ್ನು ಸನ್ಮಾನಿಸಿ ಅವರ ಧೈರ್ಯ, ಸಾಹಸವನ್ನು ಕೊಂಡಾಡಿದ್ದಾರೆ.
ಈ ಘಟನೆ ಬಗ್ಗೆ ಶಿವಾಜಿ ಮಾತನಾಡುತ್ತಾ, ‘ನಡುರಾತ್ರಿ 12.30ರ ಸಮಯದಲ್ಲಿ ವೈರ್‌ಲೆಸ್ ಮೂಲಕ ನಮಗೆ ಮಾಹಿತಿ ಸಿಕ್ಕಿತು. ಕೂಡಲೆ ನಮ್ಮ ತಂಡದ ಜತೆಗೆ ಘಟನಾ ಸ್ಥಳಕ್ಕೆ ತಲುಪಿದೆ. ಅದಾಗಲೆ ಅಲ್ಲಿ ದಟ್ಟವಾದ ಹೊಗೆ, ಬೆಂಕಿ ಹಬ್ಬಿತ್ತು. ಅರಚಾಟ ಕೂಗಾಟ, ಅಗ್ನಿಶಾಮದ ದಳದ ಸಿಬ್ಬಂದಿ ಸಹಾಯ ಕೆಲಸಗಳಲ್ಲಿ ಬಿಝಿಯಾಗಿದ್ದರು.’
ಕೂಡಲೆ ನಾವು ರಕ್ಷಣಾ ಕಾರ್ಯಕ್ಕೆ ಮುಂದಾದೆವು. ಒಳಗೆ ಸಿಕ್ಕಿಬಿದ್ದಿದ್ದವರನ್ನು ಸಾಧ್ಯವಾದಷ್ಟು ಹೊರಗೆ ತಂದೆವು. ಒಂದೇ ಒಂದು ದಾರಿ ಇದ್ದ ಕಾರಣ ಬಹಳಷ್ಟು ಮಂದಿ ರೆಸ್ಟ್ ರೂಮ್‌ನಲ್ಲಿ ಹೋಗಿ ರಕ್ಷಣೆ ಪಡೆದಿದ್ದರು. ಹಾಗಾಗಿ ಹೆಚ್ಚಿನ ಮಂದಿಯನ್ನು ಕಾಪಾಡಲು ಸಾಧ್ಯವಾಗಲಿಲ್ಲ. ಉಸಿರಾಡಲು ಆಗದೆ ಉಳಿದವರೆಲ್ಲಾ ಅಲ್ಲೇ ಮೃತಪಟ್ಟಿದ್ದರು. ಆ 14 ಮಂದಿಯನ್ನೂ ರಕ್ಷಿಸಬೇಕಾಗಿತ್ತು’ ಎಂದು ತೀವ್ರ ಭಾವೋದ್ರೇಕದಿಂದ ಹೇಳಿದ್ದಾರೆ ಶಿವಾಜಿ.
Comments are closed.