ಮುಂಬೈ

ಮುಂಬೈ ದಾಳಿಯಲ್ಲಿ ಪಾಕ್‌ ಪಾತ್ರವಿರುವುದನ್ನು ಒಪ್ಪಿಕೊಂಡ ಮಾಜಿ ಪ್ರಧಾನಿ ನವಾಜ್ ಷರೀಫ್‌

Pinterest LinkedIn Tumblr


ಹೊಸದಿಲ್ಲಿ: 26/11ರ ಮುಂಬಯಿ ಭಯೋತ್ಪಾದಕ ದಾಳಿಯಲ್ಲಿ ಪಾಕಿಸ್ತಾನದ ಪಾತ್ರವಿರುವುದನ್ನು ಅಲ್ಲಿನ ಮಾಜಿ ಪ್ರಧಾನಿ ನವಾಜ್‌ ಷರೀಫ್‌ ಒಪ್ಪಿಕೊಂಡಿದ್ದಾರೆ.

ಡಾನ್‌ ಪತ್ರಿಕೆ ಜತೆ ಮಾತನಾಡಿದ ಅವರು, ಪಾಕಿಸ್ತಾನದಲ್ಲಿ ಭಯೋತ್ಪಾದಕ ಸಂಘಟನೆಗಳು ಹುಲುಸಾಗಿ ಬೆಳೆಯುತ್ತಿದ್ದು, ಮುಂಬಯಿಯಲ್ಲಿ 2008ರ ನವೆಂಬರ್ 26ರಂದು 160ಕ್ಕೂ ಹೆಚ್ಚು ಮಂದಿಯನ್ನು ಬಲಿತೆಗೆದುಕೊಂಡ ಭಯೋತ್ಪಾದಕ ದಾಳಿಗೆ ಇಂತಹ ಸರಕಾರೇತರ ಶಕ್ತಿಗಳೇ ಹೊಣೆ ಎಂದು ಷರೀಫ್‌ ತಿಳಿಸಿದ್ದಾರೆ.

ಮುಂಬಯಿ ದಾಳಿಯ ಸಂಚುಕೋರರಾದ ಹಫೀಜ್‌ ಸಯೀದ್‌ ಮತ್ತು ಮಸೂದ್‌ ಅಜರ್‌ನ ಹೆಸರು ಹೇಳದೆ ಮಾತನಾಡಿದ ಅವರು, ‘ಭಯೋತ್ಪಾದಕ ಸಂಘಟನೆಗಳು ಇಲ್ಲಿ ಸಕ್ರಿಯವಾಗಿವೆ. ಅವುಗಳನ್ನು ಸರಕಾರೇತರ ಶಕ್ತಿಗಳೆಂದು ಕರೆಯಬಹುದು. ಮುಂಬಯಿಯಲ್ಲಿ 150ಕ್ಕೂ ಹೆಚ್ಚು ಜನರನ್ನು ಹತ್ಯೆ ಮಾಡಲು ಈ ಸಂಘಟನೆಗಳಿಗೆ ನಾವು ಅವಕಾಶ ಕೊಡಬೇಕೆ?’ ಎಂದು ಪ್ರಶ್ನಿಸಿದರು.

ರಾವಲ್ಪಿಂಡಿಯ ಭಯೋತ್ಪಾದನೆ ವಿರೋಧಿ ನ್ಯಾಯಾಲಯದಲ್ಲಿ ಮುಂಬಯಿ ದಾಳಿಗಳ ವಿಚಾರಣೆಗೆ ತಡೆಯೊಡ್ಡುತ್ತಿರುವುದೇಕೆ? ಎಂದು ಪಿಎಂಎಲ್-ಎನ್‌ ನಾಯಕ ಪ್ರಶ್ನಿಸಿದರು.

‘ವಿಚಾರಣೆ ಪೂರ್ಣಗೊಳಿಸಲು ನಮಗೇಕೆ ಸಾಧ್ಯವಾಗುತ್ತಿಲ್ಲ? ಇದು ಎಂದಿಗೂ ಸ್ವೀಕಾರಾರ್ಹವಲ್ಲ. ಇದಕ್ಕಾಗಿಯೇ ನಾವು ಹೋರಾಡುತ್ತಿರುವುದು. ಅಧ್ಯಕ್ಷ ಪುಟಿನ್‌ ಮತ್ತು ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಹೇಳಿದ್ದೂ ಇದನ್ನೇ’ ಎಂದು ಷರೀಫ್‌ ನುಡಿದರು.

ಪನಾಮಾ ಪೇಪರ್ಸ್ ಹಗರಣದಲ್ಲಿ ಪಾಕಿಸ್ತಾನದ ಸುಪ್ರೀಂ ಕೋರ್ಟ್‌ ನವಾಜ್‌ ಷರೀಫ್‌ ಅವರನ್ನು ಅನರ್ಹಗೊಳಿಸಿದ ಬಳಿಕ ಅವರು ಪ್ರಧಾನಿ ಹುದ್ದೆಯಿಂದ ಕೆಳಗಿಳಿದಿದ್ದರು.

ಮಿಲಿಟರಿ ಮತ್ತು ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಪ್ರಸ್ತಾಪಿಸುತ್ತ, ‘ಎರಡು-ಮೂರು ಸಮಾನಾಂತರ ಸರಕಾರಗಳಿಂದ ದೇಶವನ್ನು ಮುನ್ನಡೆಸಲು ಸಾಧ್ಯವಿಲ್ಲ. ಇದು ಕೊನೆಗೊಳ್ಳಲೇಬೇಕು. ದೇಶದಲ್ಲಿ ಒಂದೇ ಸರಕಾರ- ಸಾಂವಿಧಾನಿಕ ಇರಬೇಕು’ ಎಂದು ಅವರು ಪ್ರತಿಪಾದಿಸಿದರು.

2016ರ ಅಕ್ಟೋಬರ್‌ನಲ್ಲಿ ಷರೀಪ್‌ ಸರಕಾರ ಹಾಗೂ ಮಿಲಿಟರಿ ನಡುವೆ ಸಂಬಂಧ ತೀರಾ ಹಳಸಿತ್ತು. ಭಯೋತ್ಪಾದಕರ ವಿರುದ್ಧ ಕ್ರಮ ಕೈಗೊಳ್ಳಿ, ಇಲ್ಲವೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಏಕಾಂಗಿಯಾಗಿ ಎಂದು ಷರೀಫ್‌ ಸರಕಾರ ಮಿಲಿಟರಿಗೆ ಸೂಚಿಸಿತ್ತು. ಆದರೆ ಮಿಲಿಟರಿ ಅದನ್ನು ಒಪ್ಪದೆ, ಷರೀಫ್‌ ಪದಚ್ಯುತಿಗೆ ಅವಕಾಶಕ್ಕಾಗಿ ಕಾಯುತ್ತಿತ್ತು.

Comments are closed.