ಮುಂಬೈ

ಪ್ಲಾಟ್ ಮಾರಾಟಕ್ಕೆ ನಿರಾಕರಿಸಿದ ಪತಿಯನ್ನೇ ಸುಪಾರಿ ನೀಡಿ ಹತ್ಯೆಗೈದ ಪತ್ನಿ !

Pinterest LinkedIn Tumblr

ಮುಂಬೈ: 15 ಕೋಟಿ ರೂ. ಪ್ಲಾಟ್ ಮಾರಾಟ ಮಾಡಲು ಪತಿ ನಿರಾಕರಿಸಿದ್ದರಿಂದ ಆತನ್ನನೇ ಕೊಲೆ ಮಾಡಲು ಪತ್ನಿ ಸುಪಾರಿ ನೀಡಿರುವ ಘಟನೆ ಮುಂಬೈನ ಕಲ್ಯಾಣ ನಗರದಲ್ಲಿ ನಡೆದಿದೆ.

ಅಶಾ ಗಾಯಕ್ವಾಡ್ (40) ಪತಿಯ ಕೊಲೆಗೆ ಸುಪಾರಿ ನೀಡಿದ ಪತ್ನಿ. ಶಂಕರ್ ಗಾಯಕ್ವಾಡ್ (44) ಕೊಲೆಯಾದ ವ್ಯಕ್ತಿಯಾಗಿದ್ದು, ಆರೋಪಿ ಅಶಾ ತನ್ನ ಗಂಡನ ಹೆಸರಿನಲ್ಲಿದ್ದ ಪ್ಲಾಟನ್ನು ಮಾರಾಟ ಮಾಡಲು ನಿರ್ಧರಿಸಿದ್ದಳು. ಆದರೆ ಪತ್ನಿಯ ಆಸೆಗೆ ಶಂಕರ್ ನಿರಾಕರಿಸಿದ್ದರಿಂದ ಪ್ಲಾಟ್ ಮಾರಾಟ ಮಾಡಲೇ ಬೇಕು ಎಂದು ನಿರ್ಧರಿಸಿದ್ದ ಅಶಾ ಪತಿಯನ್ನು ಕೊಲೆ ಮಾಡಲು 30 ಲಕ್ಷ ರೂ. ಗಳಿಗೆ ಸುಪಾರಿ ನೀಡಿ 4 ಲಕ್ಷ ರೂ. ಮುಂಗಡ ಹಣವನ್ನು ಪಾವತಿಸಿದ್ದಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕಲ್ಯಾಣ ನಗರದ ಶಂಕರ್ ಕೆಲ ದಿನಗಳ ಹಿಂದೆ ಕಾಣೆಯಾಗಿದ್ದರು. ಮೇ 18 ರಂದು ಧಾರ್ಮಿಕ ಕ್ಷೇತ್ರಕ್ಕೆ ಹೋಗಿ ಬರುವುದಾಗಿ ತಿಳಿಸಿ ಹೋದ ಪತಿ ಕಾಣೆಯಾಗಿರುವುದಾಗಿ ಅಶಾ ಹಾಗೂ ಕುಟುಂಬ ಸದಸ್ಯರು ಮೇ 21 ರಂದು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದೂರು ನೀಡಿದ್ದರು.

ಈ ವೇಳೆ ಶಂಕರ್ ಸಹೋದರ ಅಣ್ಣ ಕಾಣೆಯಾದರೂ, ಅತ್ತಿಗೆ ಅಶಾ ನಡೆಯಲ್ಲಿ ಯಾವುದೇ ದುಃಖ ಕಾಣದೇ ಇರುವ ನಡೆ ಕುರಿತು ಅನುಮಾನಗೊಂಡು ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದರು. ಈ ವೇಳೆ ಪ್ರಕರಣ ಕುರಿತು ಹಿರಿಯ ಅಧಿಕಾರಿಗಳಿಂದ ಒತ್ತಡ ಆರಂಭವಾದ ಬಳಿಕ ತನಿಖೆಯ ವೇಗ ಹೆಚ್ಚಿಸಿದ ಪೊಲೀಸರು ಘಟನೆಗೆ ಕಾರಣವಾದ ಅಶಾ ಹಾಗೂ ಕೊಲೆಗೆ ಸುಪಾರಿ ಪಡೆದಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ. ಅಲ್ಲದೇ ಕೃತ್ಯಕ್ಕೆ ಸಹಕಾರ ನೀಡಿದ ಇಬ್ಬರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

ಸಿಕ್ಕಿಬಿದ್ದಿದ್ದು ಹೇಗೆ: ಪ್ರಕರಣದ ತನಿಖೆ ವೇಳೆ ಶಂಕರ್ ಸಹೋದರ ನೀಡಿದ ಮಾಹಿತಿ ಬೆನ್ನತ್ತಿದ್ದ ಪೊಲೀಸರಿಗೆ ಆರೋಪಿ ಅಶಾ ತನ್ನ ಸ್ನೇಹಿತರೊಂದಿಗೆ ಹಾಗೂ ಆರೋಪಿಗಳೊಂದಿಗೆ ಮಾತನಾಡಿದ್ದ ಕರೆ ಹಾಗೂ ಸಂದೇಶಗಳ ಪರಿಶೀಲನೆ ನಡೆಸಿದ್ದರು. ಈ ವೇಳೆ ಅಶಾರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ಅಶಾ ತನ್ನ ಕೃತ್ಯದ ಬಗ್ಗೆ ಪೊಲೀಸರಿಗೆ ತಿಳಿಸಿದ್ದಾಳೆ.

ಕೃತ್ಯ ಎಸಗಿದ್ದು ಹೇಗೆ: ಮೇ 18 ರ ರಾತ್ರಿ ಪತಿಗೆ ಊಟದಲ್ಲಿ ಮತ್ತು ಬರುವ ಔಷಧಿ ನೀಡಿದ್ದ ಅಶಾ, ಕೊಲೆಗೆ ಸುಪಾರಿ ನೀಡಿದ್ದ ದುಬೆ ಎಂಬಾತನಿಗೆ ಕರೆ ಮಾಡಿ ಮಾಹಿತಿ ನೀಡಿದ್ದಳು. ಈ ವೇಳೆ ಮನಗೆ ಬಂದ ದುಬೆ ಹಾಗೂ ಆತನ ಇತರೇ ಇಬ್ಬರು ಸಹಚರರು ಶಂಕರ್ ರನ್ನು ಗೋಣಿ ಚೀಲದಲ್ಲಿ ತುಂಬಿ ಆಟೋ ಮೂಲಕ ನಿರ್ಜನ ಪ್ರದೇಶಕ್ಕೆ ಕರೆದ್ಯೊದಿದ್ದರು. ಬಳಿಕ ರಾಡ್ ನಿಂದ ಶಂಕರ್ ಮೇಲೆ ಹಲ್ಲೆ ನಡೆಸಿ, ಚಾಕುವಿನಿಂದ ಇರಿದು ಕೊಲೆ ಮಾಡಿ ಮೃತ ದೇಹವನ್ನು ಕಾಲುವೆಗೆ ಎಸೆದು ಹಿಂದಿರುಗಿದ್ದರು. ಸದ್ಯ ಈ ಕುರಿತು ಮಾಹಿತಿ ಪಡೆದಿರುವ ಪೊಲೀಸರು ಮೃತ ದೇಹದ ಭಾಗಗಳನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಿದ್ದಾರೆ.

ಘಟನೆಯ ಕುರಿತು ಪ್ರತಿಕ್ರಿಯೆ ನೀಡಿರುವ ಮೃತ ಶಂಕರ್ ಸಹೋದರ, ಘಟನೆಯ ಹಿಂದೆ ಮನೆ ಕೊಳ್ಳಲು ಆಗಮಿಸಿದ್ದ ಬಿಲ್ಡರ್ ಹಾಗೂ ಸ್ಥಳೀಯ ಕೆಲ ರಾಜಕಾರಣಗಳ ಕೈವಾಡ ವಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

Comments are closed.