ಮುಂಬೈ

ಆರ್‌ಎಸ್‌ಎಸ್‌ ನ ಮುಸ್ಲಿಂ ರಾಷ್ಟ್ರೀಯ ಮಂಚ್‌ ನಿಂದ ಇಫ್ತಾರ್‌ ಕೂಟ: ರದ್ದುಪಡಿಸಲು ಒತ್ತಾಯ

Pinterest LinkedIn Tumblr


ಮುಂಬಯಿ : ಆರ್‌ಎಸ್‌ಎಸ್‌ ನ ಮುಸ್ಲಿಂ ವಿಭಾಗವಾಗಿರುವ ಮುಸ್ಲಿಂ ರಾಷ್ಟ್ರೀಯ ಮಂಚ್‌ ಇಲ್ಲಿನ ಮಲಬಾರ್‌ ಹಿಲ್ಸ್‌ ಸಹ್ಯಾದ್ರಿ ಗೆಸ್ಟ್‌ ಹೌಸ್‌ನಲ್ಲಿ ಇಂದು ಸೋಮವಾರ ಸಂಜೆ ಏರ್ಪಡಿಸಿರುವ ಇಫ್ತಾರ್‌ ಕೂಟದಲ್ಲಿ ತಾವು ಭಾಗವಹಿಸುವುದಿಲ್ಲ ಎಂದು ಮುಸ್ಲಿಂ ಸಮೂಹಗಳು ಹೇಳಿದ ಕೆಲವೇ ದಿನಗಳ ತರುವಾಯ ಇದೀಗ ಈ ಕೂಟವನ್ನೇ ರದ್ದು ಪಡಿಸಬೇಕೆಂದು ಸಮಾಜ ಸೇವಾ ಕಾರ್ಯಕರ್ತರು ಆಗ್ರಹಿಸಿದ್ದಾರೆ.

ಈ ನಿಟ್ಟಿನಲ್ಲಿ ಕಾರ್ಯಕರ್ತರಾದ ಆದಿಲ್‌ ಖತ್ರಿ ಮತ್ತು ಶಕೀಲ್‌ ಅಹ್ಮದ್‌ ಶೇಖ್‌ ಅವರು ರಾಜ್ಯಪಾಲ ಸಿ ವಿದ್ಯಾಸಾಗರ್‌ ರಾವ್‌ ಮತ್ತು ಮುಖ್ಯಮಂತ್ರಿ ದೇವೇಂದ್ರ ಫ‌ಡ್ನವೀಸ್‌ಗೆ ಪತ್ರ ಬರೆದಿದ್ದಾರೆ.

ಇಫ್ತಾರ್‌ ಪಾರ್ಟಿ ನಡೆಯಲಿರುವ ಮಲಬಾರ್‌ ಹಿಲ್ಸ್‌ನ ಸಹ್ಯಾದ್ರಿ ಗೆಸ್ಟ್‌ ಹೌಸ್‌ನಲ್ಲಿ ಯಾವುದೇ ಧಾರ್ಮಿಕ ಅಥವಾ ಸಾರ್ವಜನಿಕ ಸಮಾರಂಭ ನಡೆಸುವುದಕ್ಕೆ ಅನುಮತಿ ಇರುವುದಿಲ್ಲ ಎಂದವರು ಪತ್ರದಲ್ಲಿ ಹೇಳಿದ್ದಾರೆ.

ಇಂದು ನಡೆಯಲಿರುವ ಆರ್‌ ಎಸ್‌ ಎಸ್‌ ಇಫ್ತಾರ್‌ ಕೂಟದಲ್ಲಿ ಸುಮಾರು 30 ಇಸ್ಲಾಮಿಕ್‌ ದೇಶಗಳ ಸದಸ್ಯರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಅದೇ ರೀತಿ ಮುಸ್ಲಿಮೇತರ ಸಮುದಾಯಗಳಿಂದ 100 ಮಂದಿ ಈ ಕೂಟದಲ್ಲಿ ಭಾಗವಹಿಸಲಿದ್ದಾರೆ.

ಬಲಪಂಥೀಯ ಸಂಘಟನೆ ಏರ್ಪಡಿಸಿರುವ ಈ ಇಫ್ತಾರ್‌ ಕೂಟದಲ್ಲಿ ಮುಸ್ಲಿಮರು ಭಾಗವಹಿಸಬಾರದು ಎಂದು ಮುಸ್ಲಿಂ ಸಮೂಹಗಳು ಹೇಳಿವೆ. 2019ರ ಲೋಕಸಭಾ ಚುನಾವಣೆಯಲ್ಲಿ ತಮಗೆ ಮತ ಹಾಕುವಂತೆ ಮುಸ್ಲಿಮರ ಮನ ಒಲಿಸಲು ಈ ಇಫ್ತಾರ್‌ ಪಾರ್ಟಿಯನ್ನು ಆರ್‌ಎಸ್‌ಎಸ್‌ ಆಯೋಜಿಸಿದೆ ಎಂದು ಅವು ಆರೋಪಿಸಿವೆ.

ಲವ್‌ ಜಿಹಾದ್‌ ಮತ್ತು ಗೋ ಹತ್ಯೆ ವಿಷಯಗಳಲ್ಲಿ ಮುಸ್ಲಿಮ್‌ ಸಮುದಾಯದವರಿಗೆ ಸಾಕಷ್ಟು ಕಿರುಕುಳ ನೀಡಲಾಗಿದೆ ಎಂದು ಮುಸ್ಲಿಂ ಸಮೂಹಗಳು ಆರೋಪಿಸಿವೆ.

Comments are closed.