ಮುಂಬಯಿ: ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಅಧ್ಯಕ್ಷ ಶರದ್ ಪವಾರ್ ಅವರು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಮಹಾಮೈತ್ರಿಕೂಟದ ಪ್ರಸ್ತಾವವನ್ನು ಕಳುಹಿಸಿದ್ದಾರೆ.
ಈ ಪ್ರಸ್ತಾವದಲ್ಲಿ ರಾಜ್ಯ ವಿಧಾನಸಭೆಯ 288 ಸೀಟುಗಳ ಪೈಕಿ ಎನ್‌ಸಿಪಿ ಮತ್ತು ಕಾಂಗ್ರೆಸ್‌ಗೆ 131-131 ಸೀಟುಗಳಲ್ಲಿ ಸ್ಪರ್ಧಿಸುವ ಬಗ್ಗೆ ಸಲಹೆಯನ್ನು ನೀಡಲಾಗಿದೆ. ಅದೇ, ಉಳಿದ 26 ಸೀಟುಗಳನ್ನು ಇತರ ಮಿತ್ರಪಕ್ಷಗಳಿಗೆ ಬಿಟ್ಟುಕೊಡುವ ಬಗ್ಗೆ ಮಾತುಗಳನ್ನಾಡಲಾಗಿದೆ.
2019ರಲ್ಲಿ ನಡೆಯಲಿರುವ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ವಿಪಕ್ಷಗಳು ಬಿಜೆಪಿ ವಿರುದ್ಧ ಒಂದಾಗಿ ಸ್ಪರ್ಧಿ ಸಲು ನಿರ್ಣಯಿಸಿವೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಮಹಾಮೈತ್ರಿಯನ್ನು ರಚಿಸಲು ಪವಾರ್ ರಾಹುಲ್‌ಗೆ ಪ್ರಸ್ತಾವವನ್ನು ಕಳುಹಿಸಿದ್ದಾರೆ.
ಮುಂಬಯಿ ಪ್ರವಾಸದ ನಿಮಿತ್ತ ಇಲ್ಲಿಗೆ ಆಗಮಿಸಿರುವ ರಾಹುಲ್ ಅವರು ತಮ್ಮ ಪಕ್ಷದ ನಾಯಕರೊಂದಿಗೆ ಪವಾರ್ ಅವರ ಪ್ರಸ್ತಾವದ ಕುರಿತು ಚರ್ಚಿಸುವ ಸಾಧ್ಯತೆಯಿದೆ.
ರಾಜ್ಯದಲ್ಲಿ ಮಹಾಮೈತ್ರಿಕೂಟದಲ್ಲಿ ಕಾಂಗ್ರೆಸ್ ಮತ್ತು ಎನ್‌ಸಿಪಿಯ ಜತೆಗೆ ಶೇತ್ಕರಿ ಕಾಮಾYರ್ ಪಕ್ಷ, ಸಿಪಿಐ (ಎಂ), ಸಮಾಜವಾದಿ ಪಾರ್ಟಿ, ಬಹುಜನ ಸಮಾಜ ಪಾರ್ಟಿ ಮತ್ತು ಸ್ವಾಭಿಮಾನ್ ಶೇತ್ಕರಿ ಸಂಘಟನೆ, ಬಹುಜನ ವಿಕಾಸ್ ಆಘಾಡಿ ಸಹಿತ ಹಲವು ಪಕ್ಷಗಳನ್ನು ಸೇರಿಸಿಕೊಳ್ಳುವ ಪ್ರಸ್ತಾಪವಿದೆ.
ಲೋಕಸಭೆ ಚುನಾವಣೆಗೆ 18 -24 ಸೀಟುಗಳ ಪ್ರಸ್ತಾಪ
ರಾಜ್ಯದಲ್ಲಿ ಲೋಕಸಭೆಯ 48 ಸೀಟುಗಳ ಪೈಕಿ ಕಾಂಗ್ರೆಸ್ 24 ಮತ್ತು ಎನ್‌ಸಿಪಿ 18 ಸೀಟುಗಳಲ್ಲಿ ಸ್ಪರ್ಧಿಸಲು ಬಯಸಿವೆ. ಉಳಿದ 6 ಸೀಟುಗಳನ್ನು ಇತರ ಮಿತ್ರಪಕ್ಷಗಳಿಗೆ ನೀಡುವ ಸಾಧ್ಯತೆಯಿದ್ದು ಅವುಗಳಲ್ಲಿ ಬಹುಜನ ವಿಕಾಸ್ ಆಘಾಡಿಗೆ ಪಾಲ^ರ್, ಸ್ವಾಭಿಮಾನಿ ಶೇತ್ಕರಿ ಸಂಘಟನೆಯ ಸಂಸದ ರಾಜೂ ಶೆಟ್ಟಿ ಅವರಿಗೆ ಈಚಲಕರಂಜಿ, ಸಮಾಜವಾದಿ ಪಕ್ಷಕ್ಕೆ ಭಿವಂಡಿ, ಆರ್‌ಪಿಐನ ಗವಾಯಿ ಕವಾಡೆ ಬಣಕ್ಕೆ ವಿದರ್ಭದಲ್ಲಿ ಒಂದು ಸೀಟನ್ನು ನೀಡುವ ಸಾಧ್ಯತೆಯಿದೆ. ಬಿಎಸ್‌ಪಿ ಕೂಡ ಒಂದು ಸೀಟನ್ನು ಕೇಳಿದೆ. ಆದರೆ, ಲೋಕಸಭೆಗೂ ಮೊದಲು ವಿಧಾನಸಭೆ ಚುನಾವಣೆಯ ಸೀಟು ಹಂಚಿಕೆಗೆ ಆದ್ಯತೆಯನ್ನು ನೀಡಲಾಗುತ್ತಿದೆ.
ಶಿವಸೇನೆಗೂ ಆಫರ್
ರಾಜ್ಯದಲ್ಲಿ ಮಹಾಮೈತ್ರಿಕೂಟದ ರಚನೆಯಲ್ಲಿ ಸಮನ್ವಯಕನ ಪಾತ್ರವನ್ನು ನಿಭಾಯಿಸುತ್ತಿರುವ ಶರದ್ ಪವಾರ್ ಅವರು ಬಿಜೆಪಿಯಿಂದ ಅಸಮಾಧಾನಗೊಂಡಿರುವ ಶಿವಸೇನೆಗೂ ತಮ್ಮ ಮಹಾಮೈತ್ರಿಕೂಟದಲ್ಲಿ ಸೇರಲು ಆಫರ್ ನೀಡಿದ್ದಾರೆ. ಶಿವಸೇನೆಯೂ ಮಹಾಮೈತ್ರಿಕೂಟದಲ್ಲಿ ಕೈಜೋಡಿಸಿದರೆ ಬಿಜೆಪಿಗೆ ಇನ್ನಷ್ಟು ಬಲಿಷ್ಠ ಪೈಪೋಟಿಯನ್ನು ನೀಡಬಹುದಾಗಿದೆ ಎಂದು ಪವಾರ್ ಅಭಿಪ್ರಾಯಪಟ್ಟಿದ್ದಾರೆ.
ಒಳಗೊಳಗೆ ಚರ್ಚೆ
ಮೂಲಗಳ ಪ್ರಕಾರ ಶಿವಸೇನೆಯಲ್ಲೂ ಮಹಾಮೈತ್ರಿಗೆ ಸಂಬಂಧಿಸಿದಂತೆ ಒಳಗೊಳಗೆ ಚರ್ಚೆ ಜಾರಿಯಲ್ಲಿದೆ. ಪಕ್ಷದ ಒಂದು ದೊಡ್ಡ ಬಣವು ಮಹಾಮೈತ್ರಿಕೂಟದಲ್ಲಿ ಸೇರಲು ತನ್ನ ಒಲವನ್ನು ತೋರಿಸುತ್ತಿದ್ದು, ಕೆಲವು ನಾಯಕರು ಅದಕ್ಕೆ ತಮ್ಮ ಆಕ್ಷೇಪವನ್ನು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಈ ಸಂಬಂಧ ಶಿವಸೇನೆ ಅಧ್ಯಕ್ಷ ಉದ್ಧವ್ ಠಾಕ್ರೆ ಅವರು ಪಕ್ಷದ ವಿಭಾಗ ಪ್ರಮುಖರು ಹಾಗೂ ಕಾರ್ಯಕರ್ತರ ಜತೆಗೆ ಚರ್ಚಿಸಿ ನಿರ್ಣಯವನ್ನು ತೆಗೆದುಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ವಾಸ್ತವವಾಗಿ, ಶಿವಸೇನೆಯು ಒಂದು ಹಿಂದುತ್ವವಾದಿ ಪಕ್ಷವೆಂಬ ಚಿತ್ರಿಕೆಯನ್ನು ಹೊಂದಿದ್ದು ಇಂಥದರಲ್ಲಿ ಕಾಂಗ್ರೆಸ್ ಅದನ್ನು ವಿರೋಧಿಸುವ ಸಾಧ್ಯತೆಯಿದೆ.
ಮಹಾಮೈತ್ರಿಕೂಟದಲ್ಲಿ ಶಿವಸೇನೆಯನ್ನು ಸೇರಿಸುವ ಕುರಿತ ಶರದ್ ಪವಾರ್ ಅವರ ಹೇಳಿಕೆಯು ಅವರ ವೈಯಕ್ತಿಕ ಅಭಿಪ್ರಾಯವಾಗಿದೆ. ಜಾತ್ಯತೀತ ಪಕ್ಷಗಳನ್ನು ಒಗ್ಗೂಡಿಸುವುದು ನಮ್ಮ ಪ್ರಯತ್ನವಾಗಿದೆ. ಆದಾಗ್ಯೂ, ಈ ವಿಷಯದಲ್ಲಿ ಚರ್ಚಿಸಿ ಒಮ್ಮತದ ನಿರ್ಧಾರಕ್ಕೆ ಬರಬಹುದಾಗಿದೆ ಎಂದು ಕಾಂಗ್ರೆಸ್ ರಾಜ್ಯಾಧ್ಯಕ್ಷ ಅಶೋಕ್ ಚವಾಣ್ ಅವರು ಹೇಳಿದ್ದಾರೆ.
Comments are closed.