ಮುಂಬೈ

ಸಿಆರ್​ಪಿಎಫ್ ಕಾನ್ಸ್​ಟೆಬಲ್​‌ನ ಮದುವೆ ಪುರಾಣ ಕೇಳಿದರೆ ದಂಗಾಗಿರುವಿರಿ..!

Pinterest LinkedIn Tumblr

ಮುಂಬೈ: ಕಳೆದ 11 ವರ್ಷಗಳಲ್ಲಿ ಕೇಂದ್ರೀಯ ಸಶಕ್ತ ಮೀಸಲು ಪೊಲೀಸ್​ ಪಡೆಯ(ಸಿಆರ್​ಪಿಎಫ್​) ಮಹಾರಾಷ್ಟ್ರ ಮೂಲದ ಕಾನ್ಸ್​ಟೆಬಲ್​ ಒಬ್ಬರು ವಿವಿಧ ರಾಜ್ಯಗಳಲ್ಲಿ ಮೂರು ಮದುವೆಯಾಗಿರುವ ಆರೋಪ ಕೇಳಿಬಂದಿದೆ.

ಮಧ್ಯಪ್ರದೇಶದ ಭೋಪಾಲ್​ ಮೂಲದ ಮೂರನೇ ಮಹಿಳೆಗೆ ಕಾನ್ಸ್​ಟೆಬಲ್​ನ ಹಿಂದಿನ ಮದುವೆ ವಿಚಾರ ತಿಳಿದು ಪ್ರಶ್ನಿಸಿದಾಗ ಪತ್ನಿಯಾಗಿ ಸ್ವೀಕರಿಸಲು ನಿರಾಕರಿಸಿದ್ದಾನೆ. ಅಲ್ಲದೆ, ಕೇವಲ ಮದುವೆ ರಿಹರ್ಸಲ್ ಮಾತ್ರ ಮಾಡಿಕೊಂಡಿದ್ದಾಗಿ ಆಕೆಯೊಂದಿಗೆ ತಿಳಿಸಿದ್ದಾನೆ. ಇದರಿಂದ ಕಂಗಾಲದ ಮಹಿಳೆ ದಿಕ್ಕುತೋಚದೆ ಭೋಪಾಲ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪರಿಚಯವಾಗಿದ್ದು ಹೇಗೆ?
ಫೇಸ್​ಬುಕ್​ ಮೂಲಕ ಪರಿಚಿತನಾಗಿದ್ದ ಕಾನ್ಸ್​ಟೆಬಲ್​ ಅದರ ಮೂಲಕವೇ ನನಗೆ ಪ್ರೀತಿಯ ಪ್ರಸ್ತಾಪ ಮಾಡಿದ. 2014ರಲ್ಲಿ ಭೋಪಾಲ್​ನಲ್ಲಿ ಆತನೊಂದಿಗೆ ವಿವಾಹವಾದೆ. ಬಳಿಕ ಮಹಾರಾಷ್ಟ್ರದಲ್ಲಿರುವ ಮನೆಗೆ ಕರೆದೊಯ್ದಿದ್ದ. ಸದ್ಯ ದೆಹಲಿಗೆ ಪೋಸ್ಟಿಂಗ್​ ಹಾಕಿದ್ದು, ನಾನು ಕೂಡ ಅವರೊಂದಿಗೆ ನೆಲೆಸಿದ್ದೆ. ಆದರೆ ಕಳೆದ ಜುಲೈನಲ್ಲಿ ದೆಹಲಿ ಮೂಲದ ಎರಡನೇ ಪತ್ನಿ ನನಗೆ ಕರೆ ಮಾಡಿ ಮದುವೆ ಮಾಡಿಕೊಂಡು ವಂಚಿಸಿರುವುದಾಗಿ ತಿಳಿಸಿದರು. ಬಳಿಕ ಹಿಂದಿನ ಮದುವೆ ವಿಚಾರಗಳು ಗೊತ್ತಾಯಿತು ಎಂದು ಮೂರನೇ ಮಹಿಳೆ ತಿಳಿಸಿದ್ದಾರೆ.

ಕಾನ್ಸ್​ಟೆಬಲ್​ 2008ರಲ್ಲಿ ಮಹಾರಾಷ್ಟ್ರದಲ್ಲೇ ಮೊದಲನೇ ಮದುವೆ ಮಾಡಿಕೊಂಡಿದ್ದ. ಮೊದಲ ಪತ್ನಿಯು ಮಕ್ಕಳನ್ನು ಹೊಂದಿದ್ದಾರೆ. ಬಳಿಕ ದೆಹಲಿ ಮೂಲದ ಮಹಿಳೆಯೊಂದಿಗೆ 2014ರ ಜನವರಿಯಲ್ಲಿ ಎರಡನೇ ಮದುವೆಯಾದ. ಬಳಿಕ ಅದೇ ವರ್ಷ ಸೆಪ್ಟೆಂಬರ್​ನಲ್ಲಿ ಮೂರನೇ ವಿವಾಹವಾಗಿರುವುದಾಗಿ ಮಹಿಳೆ ಮಾಹಿತಿ ನೀಡಿದ್ದಾರೆ.

ಬೇಡಿಕೆಯಂತೆ ಮದುವೆ ಮಾಡಿಕೊಡುವಾಗ 10 ಲಕ್ಷ ರೂ. ನಗದು, 3 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ನಮ್ಮ ಕುಟುಂಬ ನೀಡಿದೆ. ಅಲ್ಲದೆ, ಹಣಕ್ಕಾಗಿ ಅನೇಕ ಬಾರಿ ಮನೆಯಲ್ಲಿ ಥಳಿಸಿದ್ದಾರೆ. ಅವರಿಂದ ನನಗೆ ವಂಚನೆಯಾಗಿದೆ ಎಂದು ಮಹಿಳೆ ಆರೋಪಿಸಿದ್ದಾರೆ.

ಕಾನ್ಸ್​ಟೆಬಲ್​ ವಿರುದ್ಧ ಆಗಸ್ಟ್​ನಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದರೆ, ಈವರೆಗೂ ಆರೋಪಿಯನ್ನು ಬಂಧಿಸಿಲ್ಲ ಎಂದು ಕೊಲಾರ್​ ಪೊಲೀಸ್​ ಠಾಣೆಯ ಉಸ್ತುವಾರಿ ಅನಿಲ್​ ಭಾಜಪೇಯಿ ಮಾಹಿತಿ ನೀಡಿದ್ದಾರೆ.

ಪತ್ನಿಯಾಗಿ ಸ್ವೀಕರಿಸಲು ನಿರಾಕರಿಸಿದ್ದಕ್ಕೆ ಕುಟಂಬ ನ್ಯಾಯಾಲಯಕ್ಕೂ ಮೂರನೇ ಮಹಿಳೆ ಮೊರೆ ಹೋಗಿದ್ದಾರೆ.

Comments are closed.