ಮುಂಬೈ

ಕೊರೊನಾ ವೈರಸ್ – ಅಂಬಾನಿಗೆ 5.09 ಶತಕೋಟಿ ಡಾಲರ್ ನಷ್ಟ

Pinterest LinkedIn Tumblr


ಮುಂಬೈ: ವಿಶ್ವದಲ್ಲಿ ಭಾರೀ ಆತಂಕ ಮೂಡಿಸುತ್ತಿರುವ ಕೊರೊನಾ ವೈರಸ್ ಈಗ ಷೇರುಪೇಟೆ ಮೇಲೆಯೂ ತನ್ನ ಕರಾಳ ಛಾಯೆಯನ್ನು ಬೀರತೊಡಗಿದೆ. ಏಷ್ಯಾದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿರುವ ಮುಖೇಶ್ ಅಂಬಾನಿ ಅವರ ವ್ಯವಹಾರದ ಮೇಲೂ ಕೊರೊನಾ ವೈರನ್ ಭಾರೀ ಪರಿಣಾಮ ಬೀರಿದೆ.

ದೇಶದ ಷೇರುಪೇಟೆ ದಿಢೀರ್ ಕುಸಿತ ಕಂಡಿದೆ. ಚೀನಾದಲ್ಲಿ ಉಂಟಾದ ಕೊರೊನಾ ವೈರಸ್‍ನಿಂದಾಗಿ ಹೂಡಿಕೆದಾರರು ತಮ್ಮ ಷೇರುಗಳನ್ನು ಮಾರಾಟ ಮಾಡುತ್ತಿದ್ದಾರೆ. ಪರಿಣಾಮ ವಹಿವಾಟು ಆರಂಭವಾಗುತ್ತಿದ್ದಂತೆ ಟ್ರಿಲಿಯನ್ ಡಾಲರ್‌ಗಟ್ಟಲೆ ಜಾಗತಿಕ ಹೂಡಿಕೆದಾರರ ಸಂಪತ್ತನ್ನು ಅಳಿಸಿಹಾಕಿದೆ. ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಕೇಶ್ ಅಂಬಾನಿ 5.09 ಶತಕೋಟಿ ಡಾಲರ್ ನಷ್ಟ ಅನುಭವಿಸಿದ್ದಾರೆ.

ಕೊರೊನಾ ವೈರಸ್‌ನಿಂದ ಮುಂಬೈ ಷೇರು ಮಾರುಕಟ್ಟೆಗೂ ಹೊಡೆತ ಬಿದ್ದಿದ್ದು, ಷೇರುಗಳ ಮೌಲ್ಯದಲ್ಲಿ ಗಣನೀಯ ಇಳಿಕೆ ಕಂಡು ಬಂದಿದೆ. ಇಂದು ಆರಂಭಿಕ ವಹಿವಾಟಿನಿಂದಲೇ ಷೇರು ಸೂಚ್ಯಂಕದಲ್ಲಿ ಭಾರೀ ಕುಸಿತ ದಾಖಲಾಗಿದೆ. ಆರಂಭಿಕ ವಹಿವಾಟಿನಲ್ಲಿಯೇ ಸೆನ್ಸೆಕ್ಸ್ 1,155 ಅಂಶ ಕುಸಿತ ಕಂಡಿದ್ದು, ನಿಫ್ಟಿಯು ಕೂಡ 346 ಅಂಶ ಕುಸಿತ ಕಂಡಿದೆ. ಕೇವಲ 5 ನಿಮಿಷದಲ್ಲಿ 4 ಲಕ್ಷ ಕೋಟಿ ರೂಪಾಯಿ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಗುರುವಾರ 39,745 ಅಂಶಕ್ಕೆ ಅಂತ್ಯಗೊಂಡ ಸೆನ್ಸೆಕ್ಸ್ ಇಂದು ಒಂದೇ ದಿನ 1,448.37 ಅಂಶ ಇಳಿಕೆಯಾಗಿ 38,297 ಅಂಶಕ್ಕೆ ಮುಕ್ತಾಯಗೊಂಡಿತು. ನಿಫ್ಟಿ ಇಂದು 431 ಅಂಶ ಇಳಿಕೆಯಾಗಿ 11,201 ಅಂಶಕ್ಕೆ ಮುಕ್ತಾಯಗೊಂಡಿದೆ.

ಬ್ಲೂಮ್‍ಬರ್ಗ್ ಬಿಲಿಯನೇರ್‌ಗಳ ಸೂಚ್ಯಂಕದ ಪ್ರಕಾರ, ಮುಖೇಶ್ ಅಂಬಾನಿ ಅವರ ನಿವ್ವಳ ಮೌಲ್ಯವು ಈ ವರ್ಷದಲ್ಲಿ ಇದುವರೆಗೆ 5.09 ಬಿಲಿಯನ್ ಡಾಲರ್ ಇಳಿದು 53.05 ಬಿಲಿಯನ್ ಡಾಲರ್ (53,706.40 ಕೋಟಿ ರೂ.)ಗಳಿಗೆ ತಲುಪಿದೆ. ಅವರ ಪ್ರಮುಖ ಕಂಪನಿ ಆರ್‍ಐಎಲ್‍ನ ಷೇರುಗಳು ಈ ವರ್ಷ ಇಲ್ಲಿಯವರೆಗೆ ಸುಮಾರು ಶೇ. 11 ಕುಸಿದಿವೆ. ಕಳೆದ 15 ದಿನಗಳಲ್ಲಿ ಜಾಗತಿಕ ಮಾರುಕಟ್ಟೆಯ ಮೇಲೆ ಕೊರೊನಾ ವೈರಸ್ ವ್ಯಾಪಕ ಪರಿಣಾಮ ಬೀರಿದೆ.

ಐಟಿ ಜಾರ್ ಮತ್ತು ವಿಪ್ರೊ ಸಂಸ್ಥಾಪಕ ಈ ವರ್ಷದಲ್ಲಿ ಇದುವರೆಗೆ 869 ಮಿಲಿಯನ್ ಡಾಲರ್ ಕಳೆದುಕೊಂಡಿದ್ದಾರೆ. ಅವರ ನಿವ್ವಳ ಮೌಲ್ಯ ಈಗ 17.4 ಬಿಲಿಯನ್ ಡಾಲರ್‍ಗೆ ಇಳಿದಿದೆ. ಶಾಪೂರ್ಜಿ ಪಲ್ಲೊಂಜಿ ಗ್ರೂಪ್‍ನ ಸಂಸ್ಥಾಪಕ ಪಲ್ಲೊಂಜಿ ಮಿಸ್ತ್ರಿ ಹಾಗೂ ಉದಯ್ ಕೊಟಕ್ ಅವರ ನಿವ್ವಳ ಮೌಲ್ಯವು ಈ ವರ್ಷದಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಕ್ರಮವಾಗಿ 463 ಮಿಲಿಯನ್ ಡಾಲರ್ ಮತ್ತು 126 ಮಿಲಿಯನ್ ಡಾಲರ್ ಇಳಿಕೆಯಾಗಿದೆ.

ಬ್ಲೂಮ್‍ಬರ್ಗ್ ಬಿಲಿಯನೇರ್ ಸೂಚ್ಯಂಕದ ಪ್ರಕಾರ ಆದಿತ್ಯ ಬಿರ್ಲಾ ಸಮೂಹದ ಅಧ್ಯಕ್ಷ ಕುಮಾಲ್ ಮಂಗಲಂ ಬಿರ್ಲಾ ಅವರ ನಿವ್ವಳ ಮೌಲ್ಯದಲ್ಲಿ 884 ಮಿಲಿಯನ್ ಡಾಲರ್ ನಷ್ಟವಾಗಿದೆ. ಹಾಗೆ ಅದಾನಿ ಗ್ರೂಪ್‍ನ ಗೌತಮ್ ಅದಾನಿ ಅವರು ಕಳೆದ ಎರಡು ತಿಂಗಳಲ್ಲಿ 496 ಮಿಲಿಯನ್ ಡಾಲರ್ ಕಳೆದುಕೊಂಡಿದ್ದಾರೆ.

ಷೇರು ಮಾರುಕಟ್ಟೆ ಕುಸಿತದಿಂದ ರೂಪಾಯಿ ಮೌಲ್ಯದಲ್ಲೂ ಕೂಡ ಇಳಿಕೆ ಕಂಡುಬಂದಿದೆ. 33 ಪೈಸೆ ಇಳಿಕೆ ಕಂಡಿರುವ ರೂಪಾಯಿ ಮೌಲ್ಯ ಸದ್ಯಕ್ಕೆ ಅಮೆರಿಕ ಡಾಲರ್ ಎದುರು 71.94 ರೂ. ಇದೆ. ಷೇರು ಕುಸಿತ ಬ್ಯಾಂಕಿಂಗ್, ತೈಲ, ಅನಿಲ ಆಟೋಮೊಬೈಲ್ ಮತ್ತು ಲೋಹ ಕಂಪನಿಗಳ ಮೇಲೆ ನಕರಾತ್ಮಕ ಪ್ರಭಾವ ಬೀರಿದೆ. ರಿಲಾಯನ್ಸ್ ಇಂಡಸ್ಟ್ರೀಸ್, ಹೆಚ್‍ಡಿಎಫ್‍ಸಿ, ಇನ್ಫೋಸಿಸ್ ಷೇರು ಬೆಲೆಯಲ್ಲೂ ಇಳಿಕೆ ಕಂಡಿದೆ. ಜೊತೆಗೆ ಕಚ್ಚಾತೈಲ ಬೆಲೆಯೂ ಶೇ.2.2ರಷ್ಟು ಕುಸಿತ ದಾಖಲಿಸಿದ್ದು, ಒಂದು ಬ್ಯಾರಲ್ ಕಚ್ಚಾತೈಲದ ಬೆಲೆ 51 ಡಾಲರ್ ಇದೆ.

Comments are closed.