ಮುಂಬೈ(ಫೆ.29): ಶಿವಸೇನೆ ಮತ್ತು ಕಾಂಗ್ರೆಸ್-ಎನ್ಸಿಪಿ ನೇತೃತ್ವದ ಮಹಾ ವಿಕಾಸ್ ಆಘಾಡಿ ಮೈತ್ರಿಕೂಟ ಸರ್ಕಾರದ ಬಜೆಟ್ ಅಧಿವೇಶನ ಶುರುವಾಗಿದೆ. ಮುಖ್ಯಮಂತ್ರಿ ಉದ್ದವ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ಸರ್ಕಾರದ ಮೊದಲ ಬಜೆಟ್ ಅಧಿವೇಶನ ಇದಾಗಿದೆ. ಈ ಬಜೆಟ್ ಅಧಿವೇಶನ ಶುರುವಾಗಿ ಆರು ದಿನವಾದರೂ ಇನ್ನೂ ಕೆಲವು ರಾಜಕಾರಣಿಗಳು ಸದನದಲ್ಲಿ ಕಾಣಸಿಕೊಂಡೇ ಇಲ್ಲ. ಹೀಗಿರುವಾಗ ಮಹಾರಾಷ್ಟ್ರ ವಿಧಾನಸಭೆಗೆ ತುಂಬು ಗರ್ಭಿಣಿ ಶಾಸಕಿಯೊಬ್ಬರು ಆಗಮಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಕಲಾಪಗಳು ನಡೆಯುತ್ತಿದ್ದರೂ ಸುಖಾಸುಮ್ಮನೇ ಗೈರಾಗುವ ನೇತಾರರ ನಡುವೆ ತನ್ನ ಜವಾಬ್ದಾರಿ ಮೆರೆಯುವ ಮೂಲಕ ಈ ಶಾಸಕಿ ಇತರ ಜನಪ್ರತಿನಿಧಿಗಳಿಗೆ ಮಾದರಿಯಾಗಿದ್ದಾರೆ.
ಇಲ್ಲಿನ ಬೀಡ್ ಜಿಲ್ಲೆಯ ಶಾಸಕಿ ನಮಿತಾ ಮುಂಡಾಡ (30) ಎಂಬುವರು ತುಂಬು ಗರ್ಭಿಣಿ. ಎಂಟು ತಿಂಗಳ ತುಂಬು ಗರ್ಭಿಣಿಯಾಗಿರುವ ಬಿಜೆಪಿ ಶಾಸಕಿ ನಮಿತಾ ಮುಂಡಾಡ (30) ಮಹಾರಾಷ್ಟ್ರ ವಿಧಾನಸಭೆ ಅಧಿವೇಶನದಲ್ಲಿ ಪಾಲ್ಗೊಂಡಿದ್ದಾರೆ. ಇಂತಹ ಸ್ಥಿತಿಯಲ್ಲಿ ಸದನಕ್ಕೆ ಹಾಜರಾಗುವುದರ ಅವಶ್ಯಕತೆ ಏನಿತ್ತು ಎಂದು ಮಾಧ್ಯಮದವರಿಗೆ ಉತ್ತರಿಸಿದ ನಮಿತಾ ಮುಂಡಾಡ, ಬಜೆಟ್ ಅಧಿವೇಶನ ನನಗೆ ಮುಖ್ಯ. ರಾಜ್ಯ ಬಜೆಟ್ ಮಂಡನೆ ವೇಳೆ ಹಾಜರಿರುವುದು ನನ್ನ ಕರ್ತವ್ಯ ಎಂದು ಹೇಳಿದ್ದಾರೆ.
ಇನ್ನು, ನನ್ನ ಕ್ಷೇತ್ರದಲ್ಲಿ ಹಲವಾರು ಸಮಸ್ಯೆಗಳಿವೆ. ಬಜೆಟ್ ಅಧಿವೇನದಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡಬೇಕಿದೆ. ಅದಕ್ಕಾಗಿಯೇ ಸದನದಲ್ಲಿ ಹಾಜರಾಗಿದ್ದೇನೆ. ನನ್ನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅನೇಕ ಚರ್ಚೆಗಳು ಮಾಡಲಿದ್ದೇನೆ. ಅವುಗಳ ಬಗ್ಗೆ ಸದನದಲ್ಲಿ ದನಿ ಎತ್ತುತ್ತೇನೆ ಎಂದರು.
ನಮಿತಾ ಆರೋಗ್ಯ ಗಮನದಲ್ಲಿಟ್ಟುಕೊಂಡು ಕಲಾಪ ನಡೆಯುವ ಪ್ರತಿ ದಿನವೂ ಮಹಾರಾಷ್ಟ್ರ ವಿಧಾನಸಭೆ ಹೊರಗಡೆ ತುರ್ತು ಚಿಕಿತ್ಸಾ ವಾಹನ ಕಾಯ್ದಿರಿಸಲಾಗುತ್ತಿದೆ. ತುರ್ತು ಚಿಕಿತ್ಸಾ ವಾಹನದ ಜತೆ ತಜ್ಞ ವೈದ್ಯರ ತಂಡ ಹಾಜರಿರಬೇಕು ಎಂದು ಆರೋಗ್ಯ ಇಲಾಖೆಗೆ ಸರ್ಕಾರ ಸೂಚಿಸಿದೆ.
ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಮೀಸಲು ಕ್ಷೇತ್ರದಿಂದ 2014ರಲ್ಲಿ ಎನ್ಸಿಪಿ ಪಕ್ಷದಿಂದ ಆಯ್ಕೆಯಾಗಿದ್ದ ನಮಿತಾ ಆಯ್ಕೆಯಾಗಿದ್ದರು. ನಂತರ 2019ರಲ್ಲಿ ಬಿಜೆಪಿ ಸೇರ್ಪಡೆಯಾಗಿ ಶಾಸಕಿಯಾಗಿ ಆಯ್ಕೆಯಾಗಿದ್ದಾರೆ.
Comments are closed.