ಮುಂಬೈ (ಏ.22): ಭಾರತೀಯ ಟೆಲಿಕಾಂನಲ್ಲಿ ಹೊಸ ಅಲೆ ಸೃಷ್ಟಿಸಿದ್ದ ಉದ್ಯಮಿ ಮುಕೇಶ್ ಅಂಬಾನಿ ಒಡೆತನದ ಜಿಯೋ ತನ್ನ ಶೇ.9.99 ಷೇರನ್ನು ಅಮೆರಿಕದ ಟೆಕ್ ಸಂಸ್ಥೆ ಫೇಸ್ಬುಕ್ಗೆ ಮಾರಾಟ ಮಾಡಿದೆ. ಈ ಷೇರಿನ ಮೌಲ್ಯ 43,574 ಕೋಟಿ ರೂಪಾಯಿ ಆಗಿದೆ.
ಈ ಬೆಳವಣಿಗೆ ಬಗ್ಗೆ ಅಂಬಾನಿ ಒಡೆತನದ ರಿಲಾಯನ್ಸ್ ಇಂಡಸ್ಟ್ರೀಸ್ ಸಂತಸ ವ್ಯಕ್ತಪಡಿಸಿದೆ. ಅಷ್ಟೇ ಅಲ್ಲ, ಟೆಲಿಕಾಂ ಸಂಸ್ಥೆಯಲ್ಲಿ ಇಂಥದ್ದೊಂದು ಅಭೂತಪೂರ್ವ ಬೆಳವಣಿಗೆ ಹಿಂದೆಂದು ನಡೆದಿರಲಿಲ್ಲ ಎಂದು ಹೇಳಿದೆ.
ಈ ಒಪ್ಪಂದದ ಬಗ್ಗೆ ಮಾತನಾಡಿರುವ ಆರ್ಐಎಲ್ ಮುಖ್ಯಸ್ಥ ಮುಕೇಶ್ ಅಂಬಾನಿ, “2016ರಲ್ಲಿ ನಾವು ಜಿಯೋ ಲಾಂಚ್ ಮಾಡಿದ್ದೆವು. ಭಾರತದ ಡಿಜಿಟಲ್ ಸರ್ವೋದಯದ ಕನಸು ಕಂಡು ನಾವು ಜಿಯೋ ಆರಂಭಿಸಿದ್ದೆವು. ಇಡೀ ಜಗತ್ತು ಡಿಜಿಟಲೀಕರಣವಾಗಿದೆ. ಈ ವೇಳೆ ಭಾರತೀಯರೂ ಡಿಜಿಟಲ್ ಯುಗದಲ್ಲಿ ಮುಂದೆ ಬರಬೇಕು ಎಂಬುದು ನಮ್ಮ ಆಶಯವಾಗಿತ್ತು. ಈಗ ಈ ವಿಚಾರದಲ್ಲಿ ಇನ್ನು ಒಂದು ಹೆಜ್ಜೆ ಮುಂದೆ ಹೋಗಿದ್ದೇವೆ. ಫೇಸ್ಬುಕ್ ಜೊತೆ ಮಹತ್ವದ ಒಪ್ಪಂದ ಮಾಡಿಕೊಂಡಿದ್ದೇವೆ,” ಎಂದಿದ್ದಾರೆ.
“ಪ್ರಧಾನಿ ನರೇಂದ್ರ ಮೋದಿಯವರು ಡಿಜಿಟಲ್ ಇಂಡಿಯಾದ ಕನಸು ಕಂಡಿದ್ದಾರೆ. ಸುಲಭ ಜೀವನ ನಡೆಸುವುದು ಮತ್ತು ಸುಲಭವಾಗಿ ಉದ್ಯಮ ಮಾಡುವುದು ಈ ಯೋಜನೆಯ ಪ್ರಮುಖ ಉದ್ದೇಶಗಳು. ಕೊರೋನಾ ವೈರಸ್ ಕಡಿಮೆ ಆದ ನಂತರ ಭಾರತ ಆರ್ಥಿಕವಾಗಿ ಸಬಲವಾಗಲಿದೆ. ಭಾರತದ ಆರ್ಥಿಕತೆ ಮೇಲೆ ಈ ಒಪ್ಪಂದ ಪ್ರಮುಖ ಬದಲಾವಣೆಗೆ ಕಾರಣವಾಗಲಿದೆ,” ಎಂದು ಅಂಬಾನಿ ಹೇಳಿದರು.
ಈ ಒಪ್ಪಂದದ ಬಗ್ಗೆ ಫೇಸ್ಬುಕ್ ಸಂಸ್ಥೆ ಮುಖ್ಯಸ್ಥ ಮಾರ್ಕ್ ಜುಕರ್ಬರ್ಗ್ ಕೂಡ ಸಂತಸ ವ್ಯಕ್ತಪಡಿಸಿದ್ದಾರೆ. “ಡಿಜಿಟಲ್ ಯುಗ ಬೆಳೆಯುತ್ತಲಿದೆ. ಈ ಸಂದರ್ಭದಲ್ಲಿ ಈ ಒಪ್ಪಂದ ಬಹಳ ಮಹತ್ವ ಪಡೆದುಕೊಂಡಿದೆ. ಉದ್ಯಮ ಸುಲಭ ಮಾಡಲು ಮತ್ತು ಮೊಬೈಲ್ ಮೂಲಕವೇ ಎಲ್ಲವನ್ನೂ ಖರೀದಿಸುವಂತೆ ಮಾಡಲು ಈ ಯೋಜನೆ ಸಹಕಾರಿಯಾಗಲಿದೆ,” ಎಂದು ಜುಕರ್ಬರ್ಗ್ ವಿಶ್ವಾಸ ವ್ಯಕ್ತಪಡಿಸಿದರು.
Comments are closed.